ADVERTISEMENT

ರಾಣಿ ಚನ್ನಮ್ಮ ವಿವಿ ಈಜುಕೂಟ ಇಂದಿನಿಂದ

ಡಾ.ಟಿ.ಪಿ ಗಿರಡ್ಡಿ
Published 12 ಸೆಪ್ಟೆಂಬರ್ 2012, 10:05 IST
Last Updated 12 ಸೆಪ್ಟೆಂಬರ್ 2012, 10:05 IST

ಜಮಖಂಡಿ: ಜಮಖಂಡಿಗೆ ಇನ್ನೊಂದು ಹೆಸರು ಕ್ರೀಡೆ. ದೈಹಿಕ ಸಾಮರ್ಥ್ಯ, ಕ್ರೀಡಾ ಮನೋಭಾವ ಹಾಗೂ ಪರಿಶ್ರಮ ಪಡುವ ಗುಣ ಹೊಂದಿದ ಕೃಷ್ಣಾ ನದಿ ತೀರದ ಯುವಕರು ಸ್ವಾತಂತ್ರ್ಯ ಪೂರ್ವದ ಅಂದಿನ ಜಮಖಂಡಿ ಸಂಸ್ಥಾನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅಂತೆಯೇ ಸಂಸ್ಥಾನಿಕರಾಗಿದ್ದ ಭಾವುರಾವ ಪಟವರ್ಧನ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದ್ದರು. ವಿಶಾಲವಾದ ಐತಿಹಾಸಿಕ ಪೋಲೊ ಮೈದಾನ ಇಂದಿಗೂ ಕ್ರೀಡಾ ಗತವೈಭವನ್ನು ನೆನಪಿಸುತ್ತದೆ.

ಗತಕಾಲದಲ್ಲಿ ಸಂಸ್ಥಾನಿಕರು ಪಾಲನೆ ಪೋಷಣೆ ಮಾಡಿದ್ದ ಕ್ರೀಡೆಗಳಿಗೆ ಈಗ ವಿವಿಧ ಸಂಘ-ಸಂಸ್ಥೆಗಳು, ಕ್ರೀಡಾ ಪ್ರೇಮಿಗಳು, ಕ್ರೀಡಾ ಅಭಿಮಾನಿಗಳು ಸಹಾಯ, ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಒಂದು ಪ್ರಕ್ರಿಯೆಯಲ್ಲಿ ಇಲ್ಲಿಯ ಪ್ರತಿಷ್ಠಿತ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜು ಕೂಟ ಮುಂಚೂಣಿಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಕ್ರೀಡೆಗಳು ಮಹತ್ತರ ಪಾತ್ರ ವಹಿಸುತ್ತವೆ ಎಂಬ ನಂಬಿಕೆ ಕಾಲೇಜಿಗಿದೆ.

ನೈಸರ್ಗಿಕವಾದ ಭೌಗೋಳಿಕ ರಚನೆ, ಹವಾಗುಣ, ಆಹಾರ ಪದ್ಧತಿ ಮತ್ತು ನೀರು ಜಮಖಂಡಿಯಲ್ಲಿ  ಕ್ರೀಡಾ ವಾತಾವರಣ ನಿರ್ಮಿಸಿದೆ. ಕಾಲೇಜು ಕ್ರೀಡಾಪಟುಗಳಿಗೆ ಬೇಕಾದ ಎಲ್ಲ ಸೌಲಭ್ಯ ಮತ್ತು ತರಬೇತಿ ನೀಡುತ್ತ ಬಂದಿದೆ. ಕಾಲೇಜಿನ ವಿಶಾಲವಾದ ಪೋಲೊ ಮೈದಾನ, ಆಧುನಿಕ ಕ್ರೀಡಾ ಉಪಕರಣಗಳು, ಮಲ್ಟಿಜಿಂ ಹಾಗೂ ಈಜುಕೊಳ ಕಾಲೇಜಿನಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳಿಗೆ ಸಾಕ್ಷಿಯಾಗಿವೆ.

ಈಜು ಕ್ರೀಡೆಯಲ್ಲಿ ಕಾಲೇಜಿನ ಸಾಧನೆ ಅದ್ವಿತೀಯ ಎನಿಸಿದೆ. ಈ ಮೊದಲು ಕಾಲೇಜು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಂಯೋಜನೆ ಹೊಂದಿತ್ತು. ಮೂರು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಸ್ಥಾಪನೆ ಆಗಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜನೆಯನ್ನು ಕಾಲೇಜು ಈಗ ಹೊಂದಿದೆ. ಕರ್ನಾಟಕ ವಿಶ್ವವಿದ್ಯಾಲಯ ಈಜು ಕ್ರೀಡೆಯನ್ನು ಆರಂಭಿಸಿದ ಬಳಿಕ ಈವರೆಗೆ ಕಾಲೇಜಿನ ಈಜು ತಂಡ 12 ಬಾರಿ ಚಾಂಪಿಯನ್‌ಷಿಪ್ ಮತ್ತು 14 ಬಾರಿ ರನ್ನರ್ಸ್‌ಅಪ್ ಸ್ಥಾನ ಗಳಿಸಿದೆ.

ಕಾಲೇಜಿನ ಈಜುಪಟುಗಳು ವಿಶ್ವವಿದ್ಯಾಲಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಸಾಧನೆ ಪ್ರದರ್ಶಿಸಿದ್ದರು ಸಹ ಸೂಕ್ತ ತರಬೇತಿ ನೀಡಲು ಈಜುಕೊಳ ಇರಲಿಲ್ಲ. ಆದ್ದರಿಂದ 2005ರಲ್ಲಿ ಕಾಲೇಜು ಈಜುಕೊಳ ನಿರ್ಮಿಸಿ ಕೇಂದ್ರ ಸರ್ಕಾರದ ಅಂದಿನ ಕ್ರೀಡಾ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಹಸ್ತದಿಂದ ಉದ್ಘಾಟನೆ ನೆರವೇರಿಸಿದೆ. ಈಗ ನುರಿತ ಹಾಗೂ ಅನುಭವಿಕ ತರಬೇತುದಾರರಿಂದ ಈಜುಪಟುಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ.

ಕಾಲೇಜು ಈಜು ತಂಡ 1974-75 ರಿಂದ 1978-79 ರ ವರೆಗೆ ಸತತ 5 ವರ್ಷ ಹಾಗೂ 1981-82, 1986-87, 1987-88, 2006-07, 2007-08, 2010-11 ಹಾಗೂ 2011-12 ರಲ್ಲಿ ಚಾಂಪಿಯನ್‌ಷಿಪ್ ಗಳಿಸುತ್ತ ಬಂದಿದೆ. 2011-12 ರಲ್ಲಿ ಕವಿವಿ ಮತ್ತು ರಾಣಿ ಚನ್ನಮ್ಮ ವಿವಿ ಸಂಘಟಿಸಿದ್ದ ಎರಡು ಈಜುಕೂಟಗಳಲ್ಲಿ ಕಾಲೇಜಿನ ತಂಡಗಳು ಚಾಂಪಿಯನ್‌ಷಿಪ್ ಗಳಿಸಿ ಏಕಸ್ವಾಮ್ಯ ಸಾಧಿಸಿವೆ.

1972-73, 1973-74 ಸೇರಿದಂತೆ ಈ ವರೆಗೆ ಒಟ್ಟು 14 ಬಾರಿ ರನ್ನರ್ಸ್‌ಅಪ್ ಸ್ಥಾನ ಪಡೆದಿದೆ. ಇದಕ್ಕೆಲ್ಲ ಪ್ರಾಚಾರ್ಯ ಡಾ.ಎಸ್.ಎಸ್.ಸುವರ್ಣಖಂಡಿ, ಆಡಳಿತಾಧಿಕಾರಿ ಪ್ರೊ.ಎಸ್.ಎಚ್.ಲಗಳಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅರುಣಕುಮಾರ ಶಹಾ ಅವರ ಪ್ರೋತ್ಸಾಹ, ಸಹಾಯ ಸಹಕಾರವೇ ಕಾರಣವಾಗಿದೆ.

ಕಾಲೇಜಿನ ಆಶ್ರಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 2012-13ನೇ ಶೈಕ್ಷಣಿಕ ವರ್ಷದ ಈಜುಕೂಟ ಮತ್ತು ತಂಡದ ಆಯ್ಕೆ ಸ್ಪರ್ಧೆಗಳು ಇದೇ 12 ಮತ್ತು 13 ರಂದು ಜರುಗಲಿದ್ದು, ಕಾಲೇಜಿನ ಈಜು ತಂಡ ಚಾಂಪಿಯನ್‌ಪಟ್ಟ ಗಳಿಸುವ ಎಲ್ಲ ಸಾಧ್ಯತೆಗಳು ಇವೆ. ಕಾಲೇಜಿನ ಈಜು ತಂಡ ಏನೆಲ್ಲ ಸಾಧನೆ ಮಾಡಿದ್ದರೂ ಸಹ ಮಹಿಳಾ ಈಜು ತಂಡ ಇನ್ನಷ್ಟು ಸಾಧನೆ ಮಾಡಬೇಕಿದೆ.
 
ಇದೇ 12 ರಂದು ಜರುಗುವ ಉದ್ಘಾಟನಾ ಸಮಾರಂಭದಲ್ಲಿ ಎಸಿ ಅಶೋಕ ದುಡಗುಂಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಅಂತರ್ ರಾಷ್ಟ್ರೀಯ ಮಾಜಿ ಸೈಕ್ಲಿಸ್ಟ್ ಚಂದ್ರು ಕುರಣಿ ಉದ್ಘಾಟನೆ ನೆರವೇರಿಸುವರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಆರ್.ಅನಂತನ್ ವಿಜೇತರಿಗೆ ಇದೇ 13 ರಂದು ಪಾರಿತೋಷಕ ವಿತರಿಸಲಿದ್ದಾರೆ. ಬಿಎಲ್‌ಡಿಇ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಮುಖ್ಯ ಅತಿಥಿಯಾಗಗಿ ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.