ADVERTISEMENT

ವೀರಭದ್ರ ದೇವರ ನೆಲೆ ಮುಚಖಂಡಿ

ಜಗದೀಶ ಎಂ.ಗಾಣಿಗೇರ
Published 13 ಆಗಸ್ಟ್ 2017, 6:24 IST
Last Updated 13 ಆಗಸ್ಟ್ 2017, 6:24 IST
ಮುಚಖಂಡಿಯ ವೀರಭದ್ರೇಶ್ವರ ದೇವಸ್ಥಾನ
ಮುಚಖಂಡಿಯ ವೀರಭದ್ರೇಶ್ವರ ದೇವಸ್ಥಾನ   

ಬಾಗಲಕೋಟೆ ನಗರಕ್ಕೆ ಹೊಂದಿಕೊಂಡಿರುವ ಮುಚಖಂಡಿಯ ವೀರಭದ್ರೇಶ್ವರ ದೇವರ ಜಾತ್ರೆ ಮತ್ತು ಅಗ್ಗಿ ಉತ್ಸವ ಶ್ರಾವಣಮಾಸದ ಕೊನೆಯ ಮಂಗಳವಾರ ಜರುಗಲಿದೆ. ಈ ವೇಳೆ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.

ಹಳೆ ಬಾಗಲಕೋಟೆ ಹಾಗೂ ನವನಗರದಿಂದ ಮುಚಖಂಡಿಗೆ ಉತ್ತಮ ರಸ್ತೆ ಸಂಪರ್ಕ ಇದೆ. ಭಕ್ತರ ಬೇಡಿಕೆಯನ್ನು ವೀರಭದ್ರ ದೇವರು ಪೂರೈಸಲಿದ್ದಾನೆ ಎಂಬುದು ನಂಬಿಕೆ. ಇದೇ ವೇಳೆ ಚಿಕ್ಕ ರಥೋತ್ಸವ ಕೂಡ ನಡೆಯಲಿದೆ. ಶ್ರಾವಣ ಮಾಸದಲ್ಲಿ ವೀರಭದ್ರೇಶ್ವರನ ದರ್ಶನ ಪಡೆಯಲು ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಜಾತ್ರೆಯ ದಿನ ಬೆಳಗಿನ ಜಾವ 4 ಗಂಟೆಗೆ ಭಕ್ತರು ಬರತೊಡಗುತ್ತಾರೆ.

ದೇವಸ್ಥಾನದಲ್ಲಿ ರುದ್ರಾಭಿಷೇಕ, ವಿವಿಧ ಪೂಜಾ ಕೈಂಕರ್ಯಗಳು ಜರುಗುತ್ತವೆ. ಅಷ್ಟೇ ಅಲ್ಲದೇ ವಿವಿಧ ಹೂವು, ಹಣ್ಣುಗಳಿಂದ  ವೀರಭದ್ರೇಶ್ವರನನ್ನು ಅಲಂಕರಿಸಲಾಗುತ್ತದೆ. ಸಂಜೆ 4 ಗಂಟೆಗೆ ದೇವಸ್ಥಾನದ ಆವರಣದಿಂದ ಜರುಗುವ ಚಿಕ್ಕ ರಥೋತ್ಸವ ಗ್ರಾಮದ ಅಗಸಿ ಬಾಗಿಲಿನವರೆಗೆ ಬಂದು ನಂತರ ದೇವಸ್ಥಾನ ತಲುಪುತ್ತದೆ.

ADVERTISEMENT

ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲುಗಳಲ್ಲಿ ನಿಂತ ಭಕ್ತರು ರಥಕ್ಕೆ ಹೂವು, ಬಾಳೆ ಹಣ್ಣು, ಚುರುಮುರಿ, ಉತ್ತತ್ತಿ ಹಾರಿಸಿ ಭಕ್ತಿ ಸಮರ್ಪಿಸುತ್ತಾರೆ. ರಥ ಮರಳುತ್ತಿದ್ದಂತೆಯೇ ದೇವಸ್ಥಾನದ ಆವರಣದಲ್ಲಿನ ಅಗ್ಗಿ ಕುಂಡದ ಸುತ್ತ ಸಹಸ್ರಾರು ಭಕ್ತರು ಜಮಾಯಿಸಿರುತ್ತಾರೆ. ದೊಡ್ಡವರು–ಸಣ್ಣವರು ಎಂಬ ಬೇಧವಿಲ್ಲದೇ ಎಲ್ಲರೂ ಅಗ್ಗಿಕುಂಡ ಹಾಯ್ದು ಹರಕೆ ತೀರಿಸುತ್ತಾರೆ. ಈ ವೇಳೆ  ಮುಚಖಂಡಿ ಗ್ರಾಮದಲ್ಲಿ ಹಬ್ಬದ ಸಡಗರ ಮನೆಮಾಡಿರುತ್ತದೆ.ಜಾತಿ ಮಥ,ಪಂಥ ಎನ್ನದೇ ಎಲ್ಲರೂ ಜಾತ್ರೆಯಲ್ಲಿ ಭಾಗಿ ಯಾಗುತ್ತಾರೆ.

ರಥೋತ್ಸವಕ್ಕೂ ಮುನ್ನ ಪುರವಂತರು ಶಸ್ತ್ರಗಳನ್ನು ತಮ್ಮ ದೇಹ ದಲ್ಲಿ ತೂರಿಸಿಕೊಂಡು ಭಕ್ತಿ ಮೆರೆಯು ತ್ತಾರೆ.  ಜಾತ್ರೆಗೆ ಬಂದವರು ದೇವಸ್ಥಾ ನದ ಪಕ್ಕದ ಕೆರೆಗೆ ಬ್ರಿಟಿಷರ ಕಾಲದಲ್ಲಿ ಕಟ್ಟಿದ   ಆಣೆಕಟ್ಟು ನೋಡಿ ಸಂಭ್ರಮಿಸುತ್ತಾರೆ. ಕೆರೆಗೆ ಬಾಗಲಕೋಟೆ ಪಕ್ಕ ದಲ್ಲಿ ವ್ಯಾಪಿಸಿರುವ ಆಲಮಟ್ಟಿ ಜಲಾಶ ಯದ ಹಿನ್ನೀರು ತುಂಬಿಸುವ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ.

ಅಗ್ಗಿ ಉತ್ಸವ
ಇದೇ 15ರಂದು ಗುಳೇದಗುಡ್ಡ ಮರಡಿಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಚರಂತಿಮಠದ ಪ್ರಭುಸ್ವಾಮೀಜಿ ನೇತೃತ್ವದಲ್ಲಿ ಸಂಜೆ 5 ಗಂಟೆಗೆ ಮುಚಖಂಡಿಯಲ್ಲಿ ರಥೋತ್ಸವ ಹಾಗೂ ಅಗ್ಗಿ ಉತ್ಸವ ಜರುಗಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.