ಬಾಗಲಕೋಟೆ: ’ಚಾಮರಾಜನಗರ ಜಿಲ್ಲೆ ಸುಳ್ಪಾಡಿ ದೇವಾಲಯದ ಪ್ರಸಾದದಲ್ಲಿ ವಿಷ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಹೇಳಿಕೆ ತಿರುಚಿರುವ ಸುದ್ದಿ ವಾಹಿನಿ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ವಿರುದ್ಧ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸುವೆ’ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.
’ವಿಷಪ್ರಾಶನ ಪ್ರಕರಣ ನನ್ನ ಗಮನಕ್ಕೆ ಬರುತ್ತಿದ್ದಂತೆಯೇ ಸೂಕ್ತ ಕ್ರಮಕೈಗೊಳ್ಳಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನು. ಘಟನೆಯ ನಂತರ ನಾವು ಕೈಗೊಂಡ ಕ್ರಮಗಳ ಬಗ್ಗೆ ಕೇಳುವುದು ಬಿಟ್ಟು ಮಾಧ್ಯಮದವರು, 48 ಗಂಟೆ ಲೇಟಾಗಿ ಬಂದಿರಿ ಎಂದು ಕೇಳುತ್ತಾರೆ. ಪ್ರಕರಣ ನನ್ನ ಗಮನಕ್ಕೆ ಬಂದಿದ್ದು ಮೊನ್ನೆ ಎಂದು ಹೇಳುವ ಬದಲು, ಬಾಯಿ ತಪ್ಪಿ ನಿನ್ನೆ ಎಂದಿದ್ದೇನೆ. ಅದನ್ನೇ ತಿರುಚಿ ನಾನು ಉಡಾಫೆ ಮಂತ್ರಿ ಎಂದು ಹೇಳಿದ್ದು ನನಗೆ ತೀವ್ರ ನೋವು ತರಿಸಿದೆ’ ಎಂದರು.
‘ಸುದ್ದಿ ವಾಹಿನಿಯೊಂದರಲ್ಲಿ ವಾಟಾಳ್ ನಾಗರಾಜ್ ನನ್ನ ಬಗ್ಗೆ ಅಸಭ್ಯವಾಗಿ ಮಾತಾಡಿದ್ದಾರೆ. ನನ್ನನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದಿದ್ದಾರೆ. ವಾಟಾಳ್ ನಾಗರಾಜ್ ಅವರಂತಹ ಹಿರಿಯರಿಂದ ಈ ಮಾತು ನಿರೀಕ್ಷಿರಲಿಲ್ಲ. ಅವರು ವಿಷಾದ ವ್ಯಕ್ತಪಡಿಸಿದರೆ ಆ ವಿಚಾರ ಇಲ್ಲಿಗೆ ಬಿಡುವೆ. ಇಲ್ಲದಿದ್ದರೆ ವಾಟಾಳ್ ನಾಗರಾಜ್ ಹಾಗೂ ಆ ಸುದ್ದಿ ವಾಹಿನಿಯ ವಿರುದ್ಧ ಸದನದಲ್ಲಿ ಹಕ್ಕುಚುತಿ ಮಂಡಿಸುತ್ತೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.