ಬಾದಾಮಿ: 2024-25ರ ಶೈಕ್ಷಣಿಕ ವರ್ಷ ಮೇ 29 ರಿಂದ ಆರಂಭವಾಗಲಿದೆ. ಆದರೆ ತಾಲ್ಲೂಕಿನಲ್ಲಿ ಕೆಲವು ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ತಗಡಿನ ಶೆಡ್‌ಗಳ ಕೊಠಡಿಯಲ್ಲಿ ಇನ್ನು ಕೆಲವು ಮಕ್ಕಳು ಮಳೆ ಬಂದಾಗ ಸೋರುವ ಶಾಲೆಯಲ್ಲಿ ಶಿಕ್ಷಣ ಪಡೆಯಬೇಕಿದೆ.
ಸಮೀಪದ ಬಾಚಿನಗುಡ್ಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಐದು ಕೊಠಡಿಗಳ ಹೆಂಚುಗಳು ಮುರಿದಿದ್ದು, ಮಳೆ ಬಂದರೆ ಸೋರುವ ಕೊಠಡಿಯಲ್ಲೇ ಮಕ್ಕಳು ಶಿಕ್ಷಣ ಪಡೆಯುವ ಸ್ಥಿತಿ ಇದ್ದರೆ, ಮಲಪ್ರಭಾ ನದಿ ದಂಡೆಯ ಶಿರಬಡಗಿ ಗ್ರಾಮದ ಪ್ರಾಥಮಿಕ ಶಾಲೆಯ ಮಕ್ಕಳು ಐದು ತಗಡಿನ ಶೆಡ್‌ನ ಕೊಠಡಿಯಲ್ಲಿ ಅಧ್ಯಯನ ಮಾಡಬೇಕಿದೆ.
‘ಮಳೆ ಮತ್ತು ಬಿಸಿಲಿನಿಂದ ಗ್ರಾಮೀಣ ಮಕ್ಕಳಿಗೆ ತೊಂದರೆಯಾಗಿದೆ. ಮಳೆ ಬಂದರೆ ಮಕ್ಕಳು ಅನಿವಾರ್ಯವಾಗಿ ಮನೆಗೆ ಹೋಗುತ್ತಾರೆ. ಇದರಿಂದ ಮಕ್ಕಳು ಪಾಠ ಬೋಧನೆಯಿಂದ ವಂಚಿತರಾಗುತ್ತಾರೆ . ಇದರಿಂದ ಮಕ್ಕಳ ಶಿಕ್ಷಣವು ಮೊಟಕಗೊಳ್ಳುತ್ತದೆ’ ಎಂದು ಬಾಚಿನಗುಡ್ಡ ಗ್ರಾಮದ ಪೋಷಕ ಬಸನಗೌಡ ಹೇಳಿದರು.
‘ಶಾಲಾ ಸುಧಾರಣಾ ಸಮಿತಿಯಿಂದ ಅನೇಕ ಬಾರಿ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾ ಪಂಚಾಯ್ತಿಯಿಂದ ಆರು ತಿಂಗಳ ಹಿಂದೆ ನಮ್ಮ ಶಾಲಾ ಕಟ್ಟಡಕ್ಕೆ ₹10 ಲಕ್ಷ ಮಂಜೂರಾಗಿತ್ತು. ಆದರೆ ಇದುವರೆಗೂ ಜಿಲ್ಲಾ ಪಂಚಾಯ್ತಿಯಿಂದ ಅನುದಾನ ಬಿಡುಗಡೆಯಾಗಿಲ್ಲ’ ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಾನಂದ ಹೇಳಿದರು.
‘ಸಾಲಿ ಚಾಲೂ ಆದೂವು ಇನ್ನ. ಮಕ್ಕಳಿಗೆ ಕಲಿಯಾಕ ಬಹಳಾ ತೊಂದರಿ ಆಗೈತಿ. ಮಳಿ ಬಂದ್ರ ಸಾಲಿ ಕೋಲಿ ಸೋರತಾವು. ಮಕ್ಕಳು ಎಲ್ಲಿ ಕೂಡಬೇಕು, ಮನಿಗೆ ಬರತಾರ. ಕೋಲಿ ಕಟ್ಟಸಿದರ ಅನುಕೂಲ ಆಗತ್ತರಿ ಇನ್ನೊಂದು ಸಲ ಮನವಿ ಬರೆದು ತಿಳಸ್ತೀವಿ’ ಎಂದು ಗ್ರಾಮಸ್ಥರು ತಿಳಿಸಿದರು.
‘ ಶಿರಬಡಗಿ ಗ್ರಾಮದಲ್ಲಿ ಇನ್ನೂ ಐದು ಕೊಠಡಿಗಳ ಅವಶ್ಯವಿದೆ. ಬಿಸಿಲು,ಮಳೆ ಗಾಳಿ ಎನ್ನದೇ 10 ವರ್ಷಗಳಿಂದ ತಗಡಿನ ಶೆಡ್‌ನಲ್ಲಿ ಮಕ್ಕಳು ಓದುತ್ತಿದ್ದಾರೆ. ಸರ್ಕಾರ ಶಾಲಾ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಶಿಕ್ಷಣದ ಪೂರಕ ವಾತಾವರಣ ನಿರ್ಮಿಸಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಿವು ಗಂಟಿ ಒತ್ತಾಯಿಸಿದರು.
‘ತಾಲ್ಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹೊಸ ಕೊಠಡಿಗಳ ನಿರ್ಮಾಣ ಕಾರ್ಯ ಕೆಲವು ಮಗಿಯುವ ಹಂತದಲ್ಲಿವೆ. ಕೆಲವು ಕಾಮಗಾರಿ ಇನ್ನೂ ನಡೆದಿದೆ’ ಎಂದು ಬಿಇಒ ಎನ್.ವೈ. ಕುಂದರಗಿ ತಿಳಿಸಿದರು.
ಕಳೆದ ವರ್ಷ ಕೆಲವು ಕಟ್ಟಡಗಳ ಬಗ್ಗೆ ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾಗಬೇಕಿದೆಎನ್.ವೈ.ಕುಂದರಗಿ ಬಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.