ADVERTISEMENT

ಬಾಗಲಕೋಟೆ | 196 ನೌಕರರಿಂದ ₹4.10 ಲಕ್ಷ ದಂಡ ವಸೂಲಿ; BPLನಿಂದ APLಗೆ ಪರಿವರ್ತನೆ

ಬಸನವಾರ ಹವಾಲ್ದಾರ
Published 23 ಅಕ್ಟೋಬರ್ 2024, 5:10 IST
Last Updated 23 ಅಕ್ಟೋಬರ್ 2024, 5:10 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬಾಗಲಕೋಟೆ: ಜಿಲ್ಲೆಯಲ್ಲಿ ಬಿಪಿಎಲ್‌ ಪಡಿತರ ಕಾರ್ಡ್ ಹೊಂದಿದ್ದ 196 ನೌಕರರು ಪತ್ತೆಯಾಗಿದ್ದು, ಅವರ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಅವರಿಂದ ಇಲ್ಲಿಯವರೆಗೆ ₹4.10 ಲಕ್ಷ ದಂಡ ವಸೂಲು ಮಾಡಲಾಗಿದೆ. ಇನ್ನೂ ವಸೂಲು ಮಾಡುವ ಪ್ರಕ್ರಿಯೆ ಮುಂದುವರೆದಿದೆ.

ಎರಡು ವರ್ಷಗಳ ಅವಧಿಯಲ್ಲಿ ನೌಕರಿ ಪಡೆದವರು, ತಮ್ಮ ಮನೆಯಲ್ಲಿದ್ದ ಬಿಪಿಎಲ್‌ ಪಡಿತರ ಕಾರ್ಡ್‌ಗಳನ್ನು ರದ್ದು ಮಾಡಿಲ್ಲ. ಬೆಂಗಳೂರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪರಿಶೀಲಿಸಿದಾಗ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆ. ನೌಕರಿಗೆ ಸೇರಿದ ನಂತರ ಪಡೆದಕೊಂಡಿರುವ ಪಡಿತರ ಆಧರಿಸಿ, ದಂಡ ವಸೂಲು ಮಾಡಲಾಗಿದೆ.

ADVERTISEMENT

ಆದಾಯ ತೆರಿಗೆ ಪಾವತಿಸಿರುವ 1,198 ಕುಟುಂಬಗಳ ಬಿಪಿಎಲ್‌ ಕಾರ್ಡ್ ಅನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಬಾದಾಮಿ ತಾಲ್ಲೂಕಿನಲ್ಲಿ 131, ಬಾಗಲಕೋಟೆಯಲ್ಲಿ 411, ಬೀಳಗಿಯಲ್ಲಿ 78, ಹುನಗುಂದದಲ್ಲಿ 59, ಜಮಖಂಡಿಯಲ್ಲಿ 166, ಮುಧೋಳದಲ್ಲಿ 121, ಇಳಕಲ್‌ದಲ್ಲಿ 57, ಗುಳೇದಗುಡ್ಡದಲ್ಲಿ 32, ರಬಕವಿ ಬನಹಟ್ಟಿಯಲ್ಲಿ 143 ಕಾರ್ಡ್ ಎಪಿಎಲ್‌ಗೆ ಪರಿವರ್ತನೆಗೊಂಡಿವೆ.

ಅದೇ ರೀತಿ ₹1.20 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿದ 950 ಕುಟುಂಬಗಳ ಬಿಪಿಎಸ್‌ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ.

ಜಿಲ್ಲೆಯ ಹಲವು ಕುಟುಂಬಗಳಲ್ಲಿ ನಿಧನರಾದವರ ಹೆಸರನ್ನು ಪಡಿತರ ಕಾರ್ಡ್‌ಗಳಿಂದ ತೆಗೆದು ಹಾಕುವ ಕೆಲಸ ನಡೆದಿದೆ. ಇಲ್ಲಿಯವರೆಗೆ 6,429 ಹೆಸರನ್ನು ತೆಗೆದು ಹಾಕಲಾಗಿದೆ. ಇದರಿಂದ ಪಡಿತರ ಹಂಚಿಕೆಯ ಪ್ರಮಾಣ ಕಡಿಮೆಯಾಗಲಿದೆ. ಬಾದಾಮಿ ತಾಲ್ಲೂಕಿನಲ್ಲಿ 823, ಬಾಗಲಕೋಟೆಯಲ್ಲಿ 912, ಬೀಳಗಿಯಲ್ಲಿ 496, ಹುನಗುಂದದಲ್ಲಿ 542, ಜಮಖಂಡಿಯಲ್ಲಿ 883, ಮುಧೋಳದಲ್ಲಿ 853, ಇಳಕಲ್‌ದಲ್ಲಿ 542, ಗುಳೇದಗುಡ್ಡದಲ್ಲಿ 385, ರಬಕವಿ ಬನಹಟ್ಟಿಯಲ್ಲಿ 993 ಜನರ ಹೆಸರನ್ನು ತೆಗೆದು ಹಾಕಲಾಗಿದೆ.

ಅಮಾನತು: ಬಿಪಿಎಲ್‌ ಕಾರ್ಡ್‌ ಹೊಂದಿದ್ದು, ಕಳೆದ ಆರು ತಿಂಗಳಿನಿಂದ ಪಡಿತರ ಪಡೆಯದ 7,835 ಪಡಿತರ ಕಾರ್ಡ್‌ಗಳನ್ನು ಅಮಾನತು ಮಾಡಲಾಗಿದೆ. ಬಿಪಿಎಲ್‌ ಕಾರ್ಡ್ ಹೊಂದಿದ್ದರೂ, ವಿವಿಧ ಕಾರಣಗಳಿಗಾಗಿ ಆಹಾರ ಧಾನ್ಯ ಪಡೆದಿಲ್ಲ.

‘ಇಂತಹ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಕಾರ್ಡ್ ಹೊಂದಿದವರು ಬಂದು ಇನ್ನು ಮುಂದೆ ಪಡಿತರ ಪಡೆಯುವುದಾಗಿ ತಿಳಿಸಿದರೆ, ಅಮಾನತು ರದ್ದು ಮಾಡಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.