ಬಾದಾಮಿ: ಉತ್ತರ ಕರ್ನಾಟಕದ ವೀರಶೈವ ಲಿಂಗಾಯತರ ಧಾರ್ಮಿಕ ಕೇಂದ್ರವಾದ ಶ್ರೀಮದ್ವೀರಶೈವ ಶಿವಯೋಗಮಂದಿರದಲ್ಲಿ ಲಿಂ.ಸದಾಶಿವ ಶ್ರೀಗಳ 41ನೇ ಪುಣ್ಯಸ್ಮರಣೋತ್ಸವದ ಪೂಜಾ ಕಾರ್ಯಕ್ರಮಗಳು ನ.14 ರಂದು ಬೆಳಿಗ್ಗೆ 6ರಿಂದ ನಡೆಯಲಿವೆ.
ಸಾಲು ಬೆಟ್ಟಗಳ ನಿಸರ್ಗ ಸೌಂದರ್ಯದ ಮಧ್ಯೆ ಉತ್ತರವಾಹಿನಿಯಾಗಿ ಹರಿಯುತ್ತಿರುವ ಮಲಪ್ರಭಾ ನದಿ ತಟದಲ್ಲಿ 1909ರಲ್ಲಿ ಹಾನಗಲ್ ಕುಮಾರ ಶಿವಯೋಗಿಯವರು ಶಿವಯೋಗಮಂದಿರವನ್ನು ಸ್ಥಾಪಿಸಿದರು. ನಾಡಿನಾದ್ಯಂತ ಪಾದಯಾತ್ರೆಯ ಮೂಲಕ ಸಂಚರಿಸಿ ವೀರಶೈವ ಲಿಂಗಾಯತ ಧರ್ಮವನ್ನು ಜಾಗೃತಿಗೊಳಿಸಿದರು. ಸಮಾಜ ಸುಧಾರಣೆಗೆ ಮಠಗಳಿಗೆ ಮಠಾಧೀಶರನ್ನಾಗಿ ಮಾಡಲು ವಟು ಸಾಧಕಕರಿಗೆ ಯೋಗ, ಅಧ್ಯಾತ್ಮ, ಸಂಸ್ಕೃತಿ ಮತ್ತು ಸಂಸ್ಕಾರದ ವಿದ್ಯೆಯನ್ನು ಧಾರೆಯೆರೆದರು. ವಿದ್ಯಾದಾನದೊಂದಿಗೆ ಕೃಷಿ, ಗೋಶಾಲೆ, ಶಿಕ್ಷಣ ಮತ್ತು ವಿಭೂತಿ ತಯಾರಿ ಘಟಕ, ಆಯುರ್ವೇದ ಔಷಧ, ತಾಡವೋಲೆಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಬೆಳಕಿಗೆ ತಂದರು.
1930ರಲ್ಲಿ ಕುಮಾರ ಶಿವಯೋಗಿಗಳು ಲಿಂಗೈಕ್ಯರಾದ ನಂತರ ಶಿವಯೋಗಮಂದಿರದ ಜವಾಬ್ದಾರಿಯನ್ನು ತಪೋನಿಧಿ ಮತ್ತು ಲಿಂಗಪೂಜಾನಿಷ್ಠರಾದ ಸದಾಶಿವ ಶ್ರೀಗಳು ವಹಿಸಿಕೊಂಡರು. ಗುರು-ವಿರಕ್ತಪೀಠ ಪರಂಪರೆ ಮಠಗಳಿಗೆ ಭವಿಷ್ಯದಲ್ಲಿ ಮಠಾಧೀಶರಾಗಲು ಕುಟುಂಬದವರು ತಮ್ಮ 8 ವರ್ಷದ ಬಾಲಕರನ್ನು ಶಿವಯೋಗಮಂದಿರದಲ್ಲಿ ಬಿಟ್ಟು ಹೋಗುವರು. ಇವರಿಗೆ ಮೊದಲಿಗೆ ವಟುಸಾಧಕರು ಎನ್ನುವರು. ಅವರಿಗೆ ಯೋಗ, ಅಧ್ಯಾತ್ಮ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಜವಾಬ್ದಾರಿ ತರಬೇತಿ ನೀಡಲಾಗುವುದು.
ಸದಾಶಿವ ಶ್ರೀಗಳು ವಟುಸಾಧಕರಿಗೆ ಮಾತೃವಾತ್ಸಲ್ಯದಂತೆ ಶಿಕ್ಷಣವನ್ನು ನೀಡಿದರು. ಇಲ್ಲಿ ವಿದ್ಯೆಯನ್ನು ಪಡೆದ ವಟುಸಾಧಕರು ಇಂದು ಸಾವಿರಾರು ಮಠಾಧೀಶರಾಗಿ ಕರ್ನಾಟಕ,ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.
1983ರಲ್ಲಿ ಬಸವನಬಾಗೇವಾಡಿಗೆ ಧಾರ್ಮಿಕ ಸಮಾರಂಭಕ್ಕೆ ತೆರಳಿದಾಗ ಸದಾಶಿವ ಶ್ರೀಗಳ ಪ್ರಾಣಜ್ಯೋತಿ ಪರಂಜ್ಯೋತಿಯಾಗಿ ಲೀನವಾಯಿತು.
ಶಿವಯೋಗಮಂದಿರದಲ್ಲಿ ಶ್ವೇತ ಶಿಲಾಮಂಟಪದಲ್ಲಿ ಸದಾಶಿವ ಶ್ರೀಗಳ ಕರ್ತೃ ಗದ್ದುಗೆಯನ್ನು ನಿರ್ಮಿಸಲಾಗಿದೆ. ನ. 14 ರಂದು ಬೆಳಿಗ್ಗೆ 6 ಗಂಟೆಗೆ ಕರ್ತೃ ಗದ್ದುಗೆಗೆ ಪೂಜಾ ಕಾರ್ಯಕ್ರಮಗಳು ಮತ್ತು ಭಾವಚಿತ್ರದೊಂದಿಗೆ ಲಘು ರಥೋತ್ಸವ ನಡೆಯಲಿದೆ. ನಾಡಿನ ವಿವಿಧ ಮಠಾಧೀಶರು ಮತ್ತು ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುವರು.
ಶ್ರೀಮದ್ವೀರಶೈವ ಶಿವಯೋಗಮಂದಿರದಲ್ಲಿ ಬೆಳಿಗ್ಗೆ 10ರಂದು ನಡೆಯುವ ಸಮಾರಂಭಕ್ಕೆ ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷ, ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಉಪಾಧ್ಯಕ್ಷ ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಆಗಮಿಸುವರು.
ಇದೇ ಸಂದರ್ಭದಲ್ಲಿ ‘ಸುಕುಮಾರ’ ದ್ವೈಮಾಸಿಕ ಪತ್ರಿಕೆ ಲೋಕಾರ್ಪಣೆಯಾಗಲಿದೆ. ಸಾಧಕರು. ದಾನಿಗಳು ಮತ್ತು ಭಕ್ತರನ್ನು ಸನ್ಮಾನಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.