ADVERTISEMENT

ಮುಧೋಳ | ಸಕ್ಕರೆ ಕಾರ್ಖಾನೆಗೆ ಬೇಕಿದೆ ಕಾಯಕಲ್ಪ

ಬಾಗಲಕೋಟೆ–ಕುಡಚಿ ರೈಲು ಮಾರ್ಗ ಕಾಮಗಾರಿಗೆ ಸಿಗಲಿ ವೇಗ

ಉದಯ ಕುಲಕರ್ಣಿ
Published 28 ಮೇ 2023, 23:30 IST
Last Updated 28 ಮೇ 2023, 23:30 IST
ಮುಧೋಳ ತಾಲ್ಲೂಕು ತಿಮ್ಮಾಪುರ ಗ್ರಾಮದ ರನ್ನ ನಗರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ
ಮುಧೋಳ ತಾಲ್ಲೂಕು ತಿಮ್ಮಾಪುರ ಗ್ರಾಮದ ರನ್ನ ನಗರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ   

ಮುಧೋಳ: ದುಸ್ಥಿತಿಗೆ ತಲುಪಿರುವ ಏಕೈಕ ಸಹಕಾರಿ ಕಾರ್ಖಾನೆಗೆ ಕಾಯಕಲ್ಪ ನೀಡುವುದು, ಅಪೂರ್ಣವಾಗಿರುವ ನೀರಾವರಿ ಯೋಜನೆ ಪೂರ್ಣಗೊಳಿಸುವುದು, ಕಬ್ಬು ತಂತ್ರಜ್ಞಾನ, ಸಂಶೋಧನಾ ಕೇಂದ್ರ ಆರಂಭಿಸುವುದು ಸೇರಿದಂತೆ ಹಲವು ನಿರೀಕ್ಷೆಗಳನ್ನು ಮುಧೋಳ ಕ್ಷೇತ್ರದ ಜನ ಹೊಂದಿದ್ದಾರೆ.

ಮುಧೋಳ ಹೌಂಡ್ (ನಾಯಿ), ಸುಣ್ಣದ ಕಲ್ಲು, ಸಿಮೆಂಟ್‌ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ತಾಲ್ಲೂಕು ಗುರುತಿಸಿಕೊಂಡಿದೆ. ಮುಧೋಳ ಶ್ವಾನ ಸಂಶೋಧನಾ ಕೇಂದ್ರಕ್ಕೆ ಘೋಷಣೆಯಾಗಿರುವ ಅನುದಾನ ತಂದು, ತಳಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ.

ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭದಿಂದಲೂ ಬಿಜೆಪಿಯ ಮುಖಂಡರ ವಶದಲ್ಲಿದೆ. ಹಾಲಿ ಅಧ್ಯಕ್ಷ ರಾಮಣ್ಣ ತಳೇವಾಡ 18 ವರ್ಷಗಳ ಕಾಲ ಅಧ್ಯಕ್ಷರಾಗಿದ್ದವರು. ಈಗ ಅಸಹಕಾರದ ಹೆಸರಿನಲ್ಲಿ ರಾಜೀನಾಮೆ ನೀಡಿದ್ದಾರೆ. ನೂರಾರು ಕೋಟಿ ಸಾಲ ಮಾಡಿದ್ದರಿಂದ ಕಾರ್ಖಾನೆ ಮತ್ತೆ ಮುಚ್ಚುವ ಸ್ಥಿತಿಗೆ ಬಂದಿದೆ. ಕಾರ್ಖಾನೆಯ ಲೆಕ್ಕಪತ್ರಗಳನ್ನು ಪರಿಶೀಲಿಸಿ, ಅವ್ಯವಹಾರವಾಗಿದ್ದರೆ, ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ಆಗಬೇಕು. ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವಾಗಬೇಕಿದೆ.

ADVERTISEMENT

ತಾಲ್ಲೂಕಿನಲ್ಲಿ 24,500 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಪ್ರತಿ ಎಕರೆಗೆ ಸರಾಸರಿ 50 ಟನ್ ಇಳುವರಿಯಿದೆ. ಇಳುವರಿ ಹಾಗೂ ರಿಕವರಿ ಸಕ್ಕರೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕಬ್ಬು ತಂತ್ರಜ್ಞಾನ, ಸಂಶೋಧನಾ ಸಂಸ್ಥೆ ಆರಂಭಿಸಬೇಕು ಎಂಬುದು ರೈತರ ನಿರೀಕ್ಷೆಯಾಗಿದೆ.

ಬೆಂಗಳೂರು–‍ಪುಣೆ ಹೆದ್ದಾರಿ ಸಂಪರ್ಕಿಸುವ ಮುಧೋಳ–ನಿಪ್ಪಾಣಿ ರಸ್ತೆ ದ್ವಿಪಥವಾಗಿದ್ದು,  ಇದನ್ನು ಚತುಷ್ಪಥ ರಸ್ತೆಯಾಗಿಸಿದರೆ, ಕಬ್ಬು ಹಂಗಾಮಿನಲ್ಲಿ ವಾಹನಗಳ ದಟ್ಟಣೆ ಹೆಚ್ಚುವುದಿಲ್ಲ. 

ಮುಧೋಳ ನಗರದಲ್ಲಿ ಪೊಲೀಸ್ ಠಾಣೆ ಇದ್ದು, ಜನಸಂಖ್ಯೆ, ಅಪರಾಧಗಳ ಸಂಖ್ಯೆ ಅಧಿಕವಾಗುತ್ತಿರುವುದರಿಂದ ಗ್ರಾಮೀಣ ಠಾಣೆಯ ಅವಶ್ಯಕತೆ ಇದೆ. ಬಾಗಲಕೋಟೆ–ಕುಡಚಿ ರೈಲು ಮಾರ್ಗ ಕಾಮಗಾರಿ ಆಮೆಗತಿಯಲ್ಲಿ ನಡೆದಿದ್ದು, ಅದನ್ನು ಪೂರ್ಣಗೊಳಿಸುವ ಕೆಲಸ ಆಗಬೇಕಿದೆ. 

ಘಟಪ್ರಭಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರತಿವರ್ಷ ಪ್ರವಾಹ ಎದುರಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಮಂಟೂರ ಮಹಾಲಕ್ಷ್ಮಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಬೇಕಿದೆ.

ತಾಲ್ಲೂಕಿನಲ್ಲಿ ಮೂರು ಸಕ್ಕರೆ ಕಾರ್ಖಾನೆಗಳಿವೆ. ನ್ಯಾಯಯುತ ಬೆಲೆಗಾಗಿ ಪ್ರತಿ ವರ್ಷ ಕ್ಷೇತ್ರದ ರೈತರು ಹೋರಾಟ ಮಾಡುವುದು ಸಾಮಾನ್ಯವಾಗಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೆಲೆ ನಿಗದಿಯಾಗಬೇಕಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಡೆಯಾಗುವ ಹಳ್ಳಿಗಳ ಪುನರ್‌ ವಸತಿ, ಅಪೂರ್ಣಗೊಂಡಿರುವ ಸಮುದಾಯ ಭವನಗಳಿಗೆ ಅನುದಾನ, ನಗರದ ಹೃದಯಭಾಗದಲ್ಲಿ ನಿರ್ಮಿಸಿರುವ ಸುಸಜ್ಜಿತ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡಬೇಕಿದೆ.

ನೂತನವಾಗಿ ನಿರ್ಮಾಣಗೊಂಡಿರುವ ತಾಲ್ಲೂಕು ಆಡಳಿತ ಭವನ ಉದ್ಘಾಟನೆಗೊಂಡರೂ ಅಲ್ಲಿ ಯಾವ ಕಚೇರಿಗಳು ಕಾರ್ಯಾರಂಭ ಮಾಡಿಲ್ಲ. ಕೂಡಲೇ ಎಲ್ಲ ಕಚೇರಿಗಳು ಅಲ್ಲಿಯೇ ಆರಂಭಿಸಬೇಕಿದೆ ಎಂಬುದು ಸ್ಥಳೀಯರ ಆಗ್ರಹ.

ಟೆಂಡರ್ ಹಂತದಲ್ಲಿರುವ ಮುಧೋಳ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುವುದು. ಒಳಚರಂಡಿ ಯೋಜನೆಯನ್ನು ಸಂಪೂರ್ಣ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಸೇರಿದಂತೆ ಮೂಲ ಸೌಕರ್ಯ ಒದಗಿಸುವ ಕೆಲಸ ಆದ್ಯತೆ ಮೇಲೆ ಆಗಬೇಕಿದೆ.

ಮುಧೋಳ ತಾಲ್ಲೂಕು ತಿಮ್ಮಾಪುರ ಗ್ರಾಮದ ರನ್ನ ನಗರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.