ADVERTISEMENT

ಬಾದಾಮಿ: ರೈತನ ಕೈ ಹಿಡಿದ ಡ್ರ್ಯಾಗನ್ ಹಣ್ಣು

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ; ಸಾವಯವ ಗೊಬ್ಬರದ ಬಳಕೆ

ಎಸ್.ಎಂ.ಹಿರೇಮಠ
Published 26 ಜುಲೈ 2024, 4:43 IST
Last Updated 26 ಜುಲೈ 2024, 4:43 IST
ಬಾದಾಮಿ ಹೊರವಲಯದ ಹೊಲದಲ್ಲಿ ರೈತ ಶಿವಪ್ಪ ಕುರಿ ಡ್ರ್ಯಾಗನ್ ಹಣ್ಣು ಬೆಳೆದಿರುವುದು.
ಬಾದಾಮಿ ಹೊರವಲಯದ ಹೊಲದಲ್ಲಿ ರೈತ ಶಿವಪ್ಪ ಕುರಿ ಡ್ರ್ಯಾಗನ್ ಹಣ್ಣು ಬೆಳೆದಿರುವುದು.   

ಬಾದಾಮಿ: ತಾಲ್ಲೂಕಿನಲ್ಲಿ ನಾಲ್ಕು ದಶಕಗಳ ಹಿಂದೆ ಮಳೆಯಾಶ್ರಿತ ಬೆಳೆಗಳು ಮಳೆಯ ಅಭಾವದಿಂದ ಕಡಿಮೆ ಇದ್ದು, ಸದಾ ಬರದ ಹಣೆಪಟ್ಟಿಯಲ್ಲಿದ್ದ ತಾಲ್ಲೂಕು 1982 ನಂತರ ನೀರಾವರಿ ಬೆಳೆಯಿಂದ ರೈತರು ಕಾಲಕ್ಕೆ ತಕ್ಕಂತಹ ಬೆಳೆ ಬೆಳೆಯುತ್ತಿದ್ದಾರೆ.

ತಾಲ್ಲೂಕಿನಲ್ಲಿ ಮಳೆಯಾಶ್ರಿತದಲ್ಲಿ ಕೆಂಪು ಮಿಶ್ರಿತ ಮಸಾರಿ, ಕಪ್ಪು, ಹರಳು ಮಣ್ಣು ಮತ್ತು ಕೆಂಪು ಉಸುಕು ಭೂಮಿಯಲ್ಲಿ ಪ್ರಮುಖ ಬೆಳೆ ಶೇಂಗಾ, ಜೋಳ, ಸಜ್ಜೆ, ತೊಗರಿ, ಅಲಸಂದಿ, ಮಡಿಕೆ, ನವಣೆ, ಗುರೆಳ್ಳು, ಎಳ್ಳು ಬೆಳೆಯನ್ನು ಬೆಳೆಯುತ್ತಿದ್ದರು. ಮಳೆಯಾದರೆ ಬೆಳೆ, ಮಳೆ ಬಾರದಿದ್ದರೆ ಬೆಳೆ ಕಮರಿ ಹೋಗುವ ಕಾಲವಿತ್ತು.

ರೈತರು ಈಗ ಹನಿ ನೀರಾವರಿಯಲ್ಲಿ ಹೂವು ಮತ್ತು ಹಣ್ಣಿನ ಬೆಳೆಯನ್ನು ಬೆಳೆಯಲು ಆರಂಭಿಸಿದ್ದಾರೆ. ಮಾವು, ಮೋಸಂಬಿ, ದ್ರಾಕ್ಷಿ, ಪಪ್ಪಾಯಿ, ಬಾರಿಹಣ್ಣು, ಲಿಂಬೆ, ದಾಳಿಂಬೆ ಬೆಳೆಯಲು ಆರಂಭಿಸಿದರು. ಕಳೆದ ವರ್ಷದಿಂದ ಹೊಸದಾಗಿ ಡ್ರ್ಯಾಗನ್ ಹಣ್ಣು ಬೆಳೆಯಲು ಆರಂಭಿಸಿದ್ದಾರೆ.

ADVERTISEMENT

ಮೊದಲಿಗೆ ವಿದೇಶದ ವಿಯೆಟ್ನಾಂ ಮತ್ತು ಮೆಕ್ಸಿಕೋದಲ್ಲಿ ಬೆಳೆಯುತ್ತಿದ್ದ ಡ್ರ್ಯಾಗನ್ ಹಣ್ಣನ್ನು ದೇಶದಲ್ಲಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಕರ್ನಾಟಕದ ಬೇರೆ ಭಾಗದಲ್ಲಿ ಬೆಳೆಯುತ್ತಿದ್ದರು.

ಸದ್ಯ ತಾಲ್ಲೂಕಿನಲ್ಲಿ ಕರಡಿಗುಡ್ಡ ಮತ್ತು ಬಾದಾಮಿಯಲ್ಲಿ ರೈತರು ಡ್ರ್ಯಾಗನ್ ಹಣ್ಣು ಬೆಳೆಯಲು ಹೊಸ ಪ್ರಯೋಗ ಮಾಡಿದ್ದಾರೆ.

ರೈತ ಶಿವಪ್ಪ ಕುರಿ ಹೊಲದಲ್ಲಿ ಬರೀ ಹಣ್ಣುಗಳನ್ನೇ ಬೆಳೆಯುತ್ತಾರೆ. ಮೊದಲು ಟೊಮೆಟೋ ಬೆಳೆದು ಲಕ್ಷಾಂತರ ರೂಪಾಯಿ ಆದಾಯವನ್ನು ಪಡೆದು ಆರ್ಥಿಕವಾಗಿ ಸಬಲರಾದ ನಂತರ ಪಪ್ಪಾಯಿ, ದಾಳಿಂಬೆ ಬೆಳೆದು ಇದರಲ್ಲಿಯೂ ಯಶಸ್ವಿಯಾದರು. ಈಗ ಒಂದೂವರೆ ಎಕರೆ ಪ್ರದೇಶದಲ್ಲಿ ಡ್ರ್ಯಾಗನ್ ಬೆಳೆದು ಇಳುವರಿ ಪಡೆಯುತ್ತಿದ್ದಾರೆ.

‘ಕೆಂಪು ಮಣ್ಣಿನ ಒಂದೂವರೆ ಎಕರೆ ಹೊಲದಲ್ಲಿ 2022ರಲ್ಲಿ ದಾವಣಗೆರೆಯಿಂದ ₹ 50 ಕ್ಕೆ ಒಂದರಂತೆ ಮೂರು ಸಾವಿರ ಅಗಿ ಖರೀದಿಸಿ ನಾಟಿ ಮಾಡಿದೆ. ನಾಲ್ಕು ಅಗಿಗೆ ಒಂದರಂತೆ ಕಲ್ಲಿನ 500 ಕಂಬಗಳನ್ನು ನೆಟ್ಟು ಅದಕ್ಕೆ ತಂತಿ ಸುತ್ತಿದೆ. ಅಂದಾಜು ₹  5 ಲಕ್ಷ ವೆಚ್ಚವಾಯಿತು’ ಎಂದು ಶಿವಪ್ಪ ಹೇಳಿದರು.

‘ಒಂದೂವರೆ ವರ್ಷದ ನಂತರ ಹೂವು ಹಣ್ಣು ಬಿಡಲು ಆರಂಭಿಸಿತು. ಮೊದಲ ವರ್ಷ ಒಂದು ಕ್ವಿಂಟಲ್ ಹಣ್ಣು ಇಳುವರಿ ಬಂದು ಲಕ್ಷ ಮಾತ್ರ ಆದಾಯ ಬಂತು. ವರ್ಷದಲ್ಲಿ ನಾಲ್ಕು ತಿಂಗಳು ಹಣ್ಣು ಬರುವುದು. ಈ ಬಾರಿ ಹೆಚ್ಚಿನ ಇಳುವರಿ ಬರತೊಡಗಿದೆ. ವಾರಕ್ಕೆ 4 ರಿಂದ 5 ಕ್ವಿಂಟಲ್ ಇಳುವರಿ ಬಂದಿದೆ. ಕ್ವಿಂಟಲಲ್‌ಗೆ ₹ 10 ಸಾವಿರದಂತೆ ಮಾರುಕಟ್ಟೆಯಲ್ಲಿ ಮಾರಾಟ ನಡೆದಿದೆ. ತಿಂಗಳಿಗೆ ಅಂದಾಜು ₹ 2 ಲಕ್ಷ ಆದಾಯ ಬರುವುದು. ನಾಲ್ಕು ತಿಂಗಳವರೆಗೆ ಫಲವನ್ನು ಕೊಡುತ್ತದೆ. 20 ವರ್ಷ ವರೆಗೆ ಇಳುವರಿ ಬರುತ್ತದೆ ’ ಎಂದು ಹೇಳಿದರು.

ಗಿಡಗಳಿಗೆ ಸಂಪೂರ್ಣವಾಗಿ ಸಾವಯವ ಬೇಸಾಯದ ಗೊಬ್ಬರದ ಬಳಕೆ ಮತ್ತು ಬೇವಿನ ಎಣ್ಣೆಯನ್ನು ಸಿಂಪರಣೆ ಮಾಡಲಾಗಿದೆ. ಜನರಿಗೆ ಹಣ್ಣು ನೇರವಾಗಿ ತಲುಪಲು ಮನೆಯ ಮಂದೆ ನೂರು ರೂಪಾಯಿಗೆ ಕೆಜಿಯಂತೆ ನಿತ್ಯ 20 ರಿಂದ 30 ಕೆಜಿ ಮಾರಾಟ ಮಾಡುವೆ ಎಂದು ಶಿವಪ್ಪ ಹೇಳಿದರು.

ಮಾರುಕಟ್ಟೆಯಲ್ಲಿ ಡ್ರ್ಯಾಗನ್ ಹಣ್ಣಿಗೆ ಉತ್ತಮ ಬೆಲೆ ಮತ್ತು ಬೇಡಿಕೆ ಇದೆ. ಬಾಗಲಕೋಟೆ, ವಿಜಯಪುರ, ಗದಗ, ಧಾರವಾಡ ಹುಬ್ಬಳ್ಳಿ ಮಾರುಕಟ್ಟೆಗೆ ಸಾಗಿಸುವುದಾಗಿ ತಿಳಿಸಿದರು. ರೈತನನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ. ಸರ್ಕಾರ ಇಂತಹ ರೈತನನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ.

ಕೆಂಪುಮಯವಾಗಿರುವ ಡ್ರ್ಯಾಗನ್ ಹಣ್ಣು ಮಾರುಕಟ್ಟೆಗೆ ಸಜ್ಜು.

‘ಇಳುವರಿ ಚಲೋ ಐತ್ರಿ’

ಇಲ್ಲಿತನಕ ಹೊಲದಾಗ ತಮಾಟಿ ದಾಳಿಂಬ್ರಿ ಮತ್ತು ಪಪ್ಪಾಯಿ ಹಣ್ಣು ಬೆಳದ್ದೀನ್ರೀ. ಭೂತಾಯಿ ಶ್ರಮಕ್ಕ ಲಾಭ ಕೊಟ್ಟಾಳ. ಯುಟೂಬ್ ನೋಡಿದೆ ನಾನೂ ಯಾಕ ಈ ಹಣ್ಣು ಬೆಳಿಬಾರದು ಅಂತ ಇಚಾರ ಮಾಡಿ ದೀಡ ಎಕರೆದಾಗ ಡ್ರ್ಯಾಗನ್ ಗಿಡ ಹಚ್ಚೀನ್ರಿ ಚೊಲೋ ಇಳುವರಿ ಐತ್ರಿ ಎಂದು ಡ್ರ್ಯಾಗನ್‌ ಹಣ್ಣು ಬೆಳೆದ ರೈತ ಶಿವಪ್ಪ ಕುರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.