ADVERTISEMENT

ಮುಧೋಳ: ಕುಟುಂಬದ ಕೈಹಿಡಿದ ಸೀತಾಫಲ ಕೃಷಿ

ನಿಷ್ಠೆ, ಸಹನೆ, ನಿಗದಿತ ಸಮಯವೇ ಯಶಸ್ಸಿನ ಮೂಲ

ಉದಯ ಕುಲಕರ್ಣಿ
Published 2 ಜೂನ್ 2023, 0:10 IST
Last Updated 2 ಜೂನ್ 2023, 0:10 IST
 ಮುಧೋಳ ತಾಲ್ಲೂಕು ಮಂಟೂರ ಗ್ರಾಮದ ರೈತ ಸುನೀಲ ಜನವಾಡ ತಾವು ಬೆಳೆದ ಸೀತಾ ಫಲ ಗಿಡದೊಂದಿಗೆ
 ಮುಧೋಳ ತಾಲ್ಲೂಕು ಮಂಟೂರ ಗ್ರಾಮದ ರೈತ ಸುನೀಲ ಜನವಾಡ ತಾವು ಬೆಳೆದ ಸೀತಾ ಫಲ ಗಿಡದೊಂದಿಗೆ   

ಮುಧೋಳ: ಸತತ ಪ್ರಯತ್ನ, ಅಧ್ಯಯನ ಹಾಗೂ ಮಾಡುವ ಕೆಲಸವನ್ನು ಇಷ್ಟಪಟ್ಟು ಮಾಡಿದರೆ ಯಾವುದೂ ಕಷ್ಟವಲ್ಲ ಎಂಬುದನ್ನು ಮುಧೋಳ ತಾಲ್ಲೂಕು ಮಂಟೂರ ಗ್ರಾಮದ ರೈತ ಸುನೀಲ ಜನವಾಡ ಕುಟುಂಬ ಸಾಬೀತು ಪಡಿಸಿದೆ.

ಸುನೀಲ ಬಿಕಾಂ ಪದವೀಧರರು. ತಾಯಿ ಮಹಾದೇವಿ, ತಂದೆ ಸಂಗಪ್ಪ ಹಾಗೂ ಸಹೋದರ ಬಸವರಾಜ. ಎಲ್ಲರೂ ಸೇರಿ ಕಷ್ಟಕರವಾದ ಹಾಗೂ ನಿಗದಿತ ಸಮಯದಲ್ಲೇ ಮಾಡಬೇಕಾದ ಹಾಗೂ ತಾಲ್ಲೂಕಿನಲ್ಲೆ ಅತ್ಯಧಿಕ 4 ಎಕರೆ ಜಮೀನಿನಲ್ಲಿ ಸೀತಾಫಲ ಕೃಷಿ ಮಾಡಿ ಎಲ್ಲರೂ ತಮ್ಮತ್ತ ನೋಡುವಂತೆ ಮಾಡಿದ್ದಾರೆ.

ಆರಂಭದಲ್ಲಿ ದಾಳಿಂಬೆ ಮಾಡಬೇಕು ಎಂದು ತೋಟವನ್ನು ಸಿದ್ಧಪಡಿಸಿದರು. ಬೀಳಗಿ ತಾಲ್ಲೂಕಿನ ಅಮಲಝರಿ ಗ್ರಾಮದ ಕೃಷಿ ವಿಜ್ಞಾನಿ ಡಾ.ಎಲ್.ಬಿ.ನಾಯಿಕ ಅವರ ಮಾರ್ಗದರ್ಶನದಲ್ಲಿ ಸೀತಾಫಲ ಕೃಷಿಯನ್ನು 2018ರಿಂದ ಮಾಡುತ್ತಾ ಬಂದಿದ್ದಾರೆ. ಬೆಂಗಳೂರಿನ ಹೆಸರುಗಟ್ಟದ ಐಎಎಚ್ ಆರ್ ದಿಂದ 1100 ಅರ್ಕಾ ಸಹನಾ ತಳಿಯ ಸಸಿಗಳನ್ನು ಒಂದು ಸಸಿಗೆ ₹65ರಂತೆ ಹಾಗೂ ಬಾಲಾನಗರ ತಳಿಯ 100 ಸಸಿಗಳನ್ನು ₹40ರಂತೆ 14X10 ಅಡಿ ಅಂತರದಲ್ಲಿ ನಾಟಿಮಾಡಲಾಗಿದೆ.

ADVERTISEMENT

ಸಸಿಯ ಬೇರು ಹಾಗೂ ಕಾಂಡ ಬಲಿಷ್ಠವಾಗಲು 3 ವರ್ಷಗಳ ಕಾಯಬೇಕು. ಆ ಎರಡು ವರ್ಷದಲ್ಲಿ ಅಂತರ ಬೆಳೆಯಾಗಿ ಪಪ್ಪಾಯಿ ಬೆಳೆಯಲಾಯಿತು. ಡ್ರಿಪ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ತೋಟಗಾರಿಕೆ ಇಲಾಖೆ ಡ್ರಿಪ್‌ ಸೌಕರ್ಯ ಹಾಗೂ ಪ್ರತಿ ಎಕರೆಗೆ 11 ಸಾವಿರದಂತೆ ಒಟ್ಟು ₹44 ಸಾವಿರ ಸಸಿ ತರಲು ಸಬ್ಸಿಡಿ ಹಣ ಬಂದಿದೆ.

‘ಈ ಕೃಷಿಯಲ್ಲಿ ಅತ್ಯಂತ ಮಹತ್ವವಾದದ್ದು ಪರಾಗಸ್ಪರ್ಶ ಕ್ರಿಯೆ. ಇದನ್ನು ಯಾವಾಗ ಬೆಕೆಂದಾಗ ಮಾಡಲು ಬರುವುದಿಲ್ಲ. ಬೆಳಗಿನ 6 ರಿಂದ 9 ಗಂಟೆಯಲ್ಲಿ ಮುಗಿಸಬೇಕು. ಪ್ರತಿ ಹೂವಿಗೂ ಸ್ಪರ್ಶಮಾಡಬೇಕು. ಅತಿ ಸೂಕ್ಷ್ಮವಾಗಿ ಪೆಂಟಿಂಗ್ ಮಾಡುವ ಸಣ್ಣ ಬ್ರೇಷ್‌ನಿಂದ ನಮ್ಮ ಕುಟುಂಬದವರೊಂದಿಗೆ ಮಾಡುತ್ತಿದ್ದೇವೆ. ನಿಷ್ಠೆಯಿಂದ, ನಿಗದಿತ ಸಮಯದಲ್ಲಿ ಸಹನೆಯಿಂದ ಮಾಡಬೇಕು. ಲಾಭದ ಮುಖನೋಡಿ ಈ ಕೃಷಿ ಮಾಡಿದರೆ ಪಶ್ಚಾತಾಪ ಖಂಡಿತ’ ಎಂಬುದು ಸುನೀಲ ಅವರ ಅಭಿಪ್ರಾಯ.

‘ಪರಾಗಸ್ಪರ್ಶ ಕ್ರಿಯೆ ನಂತರ 120 ದಿನಗಳಲ್ಲಿ ಹಣ್ಣು ಬರುತ್ತವೆ. ನಾವು ಈ ವರ್ಷ ಪ್ರತಿ ಗಿಡದಲ್ಲೂ 30 ರಿಂದ 40 ಫಲವನ್ನು ಪಡೆದಿದ್ದೇವೆ. ಈ ವರ್ಷ 50 ರಿಂದ 60 ಫಲಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಇದು 30 ವರ್ಷ ಫಲ ನೀಡುವ ಬೆಳೆ ಇದು ವರ್ಷದಿಂದ ವರ್ಷಕ್ಕೆ ಇಳುವರಿ ಅಧಿಕವಾಗುತ್ತಾ ಹೋಗುತ್ತದೆ. 2022 ರ ನಾಲ್ಕನೆ ವರ್ಷದಲ್ಲಿ 7 ಟನ್ ಇಳುವರಿ ಬಂದಿದೆ. ₹7.30 ಲಕ್ಷ ಆದಾಯ ಬಂದಿದೆ. ಎಬಿಸಿ ರಿತಿಯಲ್ಲಿ ಹಣ್ಣುಗಳನ್ನು ವಿಂಗಡನೆ ಮಾಡಿ ಕಳುಹಿಸಲಾಗುತ್ತದೆ. ಪ್ರತಿ ಹಣ್ಣು 300 ಗ್ರಾಂಗಿಂತ ಅಧಿಕವಾಗಿದ್ದರೆ ಎ ಗ್ರೇಡ್, 300 ಗ್ರಾಂಗಿಂತ ಕಡಿಮೆ ತೂಕದ್ದು ಬಿ ಗ್ರೇಡ್, ವಿಕಾರವಾಗಿರುವ ಹಣ್ಣು ಸಿ ಗ್ರೇಡ್ ಎಂದು ಮಾರಾಟವಾಗುತ್ತದೆ. ಪ್ರತಿ ಕೆ.ಜಿಗೆ ಎ ಗ್ರೇಡ್ ₹150, ಬಿ ಗ್ರೇಡ್ ₹100 ರೂ ಹಾಗೂ ಸಿ ಗ್ರೇಡ್ ₹70ರಂತೆ ಮಾರಾಟ ಮಾಡಲಾಗಿದೆ. ಈ ಹಣ್ಣು ಗ್ರಾಹಕರ ಕೈಸೇರುವಾಗ ಕೆಜಿಗೆ ₹300 ರಿಂದ ₹350ರಂತೆ ಮಾರಾಟವಾಗುತ್ತದೆ’ ಎನ್ನುತ್ತಾರೆ ಸುನೀಲ.

‘ಕಟಾವು ಆದ 6 ರಿಂದ 8 ದಿನ ಫಲ ಮಾಗಿ ತಿನ್ನಲು ಯೋಗ್ಯವಾಗುತ್ತದೆ. ಗಿಡಗಳಿಗೆ ಪ್ರತಿ ವರ್ಷ ಕಳೆ ನಿರ್ವಹಣೆಗೆ ಅಧಿಕ ವೆಚ್ಚವಾಗುತ್ತಿದೆ. ₹50 ಸಾವಿರ ಕಳೆ ನಿರ್ವಹಣೆಗೆ, ₹80 ಸಾವಿರ ರಸಗೊಬ್ಬರ ಹಾಗೂ ₹60 ಔಷಧೋಪಚಾರ ಹೀಗೆ ಒಟ್ಟು ₹1.90 ವೆಚ್ಚವಾಗಿದೆ. ಈ ಕೃಷಿಯಲ್ಲಿ ನಮ್ಮ ತಾಯಿ ಮಹಾದೇವಿ ಅವರ ಪಾತ್ರ ಹಿರಿದು’ ಎಂದು ಹೇಳುತ್ತಾರೆ.

ಹೆಚ್ಚಿನ ಮಾಹಿತಿಗೆ: ಕೃಷಿ ವಿಜ್ಞಾನಿ ಡಾ.ಎಲ್.ಬಿ ನಾಯಿಕ(9449816584). ಸುನೀಲ ಜನವಾಡ (9972614974).

 ಮುಧೋಳ ತಾಲ್ಲೂಕು ಮಂಟೂರ ಗ್ರಾಮದ ರೈತ ಸುನೀಲ ಜನವಾಡ ತಾವು ಬೆಳೆದ ಸೀತಾ ಫಲ ಗಿಡದೊಂದಿಗೆ
 ಮುಧೋಳ ತಾಲ್ಲೂಕು ಮಂಟೂರ ಗ್ರಾಮದ ರೈತ ಸುನೀಲ ಜನವಾಡ ತಾವು ಬೆಳೆದ ಸೀತಾ ಫಲ ಗಿಡದೊಂದಿಗೆ
ಮುಧೋಳ ತಾಲ್ಲೂಕು ಮಂಟೂರ ಗ್ರಾಮದ ರೈತ ಸುನೀಲ ಜನವಾಡ ತಾವು ಬೆಳೆದ ಸೀತಾ ಫಲ ಹಣ್ಣಿನೊಂದಿಗೆ
ಮುಧೋಳ ತಾಲ್ಲೂಕು ಮಂಟೂರ ಗ್ರಾಮದ ರೈತ ಸುನೀಲ ಜನವಾಡ ಬೆಳೆದ ಸೀತಾ ಫಲ ಹಣ್ಣು
ಮುಧೋಳ ತಾಲ್ಲೂಕು ಮಂಟೂರ ಗ್ರಾಮದ ರೈತ ಸುನೀಲ ಜನವಾಡ  ಬೆಳೆದ ಸೀತಾ ಫಲ ಹಣ್ಣು

4 ಎಕರೆ ಜಮೀನಿನಲ್ಲಿ ಸೀತಾಫಲ ಕೃಷಿ ಪರಾಗಸ್ಪರ್ಶ ಕ್ರಿಯೆ ನಂತರ 120 ದಿನಗಳಲ್ಲಿ ಹಣ್ಣು ಬರಲು ಆರಂಭ ಹಣ್ಣು 300 ಗ್ರಾಂಗಿಂತ ಅಧಿಕವಾಗಿದ್ದರೆ ಎ ಗ್ರೇಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.