ADVERTISEMENT

ಬಾದಾಮಿ: ಕಲ್ಲುಭೂಮಿಯಲ್ಲಿ ಶ್ರಮಜೀವಿ ರೈತನ ಯಶೋಗಾಥೆ

ದುಡಿದ ಹಣ ಕೂಡಿಟ್ಟು ಕೊಳವೆ ಬಾವಿ ಕೊರಿಸಿದೆ: ನಿಜಲಿಂಗಪ್ಪ ಹೊಸಗೌಡ್ರ

ಎಸ್.ಎಂ ಹಿರೇಮಠ
Published 23 ಫೆಬ್ರುವರಿ 2024, 4:25 IST
Last Updated 23 ಫೆಬ್ರುವರಿ 2024, 4:25 IST
ಬಾದಾಮಿ ಸಮೀಪದ ಚೊಳಚಗುಡ್ಡ ಗ್ರಾಮದ ರೈತ ನಿಜಲಿಂಗಪ್ಪ ಕಲ್ಲು ಭೂಮಿಯಲ್ಲಿ ಬಾಳೆಯನ್ನು ಬೆಳೆದಿರುವುದು
ಬಾದಾಮಿ ಸಮೀಪದ ಚೊಳಚಗುಡ್ಡ ಗ್ರಾಮದ ರೈತ ನಿಜಲಿಂಗಪ್ಪ ಕಲ್ಲು ಭೂಮಿಯಲ್ಲಿ ಬಾಳೆಯನ್ನು ಬೆಳೆದಿರುವುದು    

ಬಾದಾಮಿ: ಚೊಳಚಗುಡ್ಡ ಗ್ರಾಮದ ಶ್ರಮಜೀವಿ ರೈತ ನಿಜಲಿಂಗಪ್ಪ ಹೊಸಗೌಡ್ರ  ಕಲ್ಲು ಭೂಮಿಯನ್ನು ಮಣ್ಣಾಗಿ ಪರಿರ್ವತಿಸಿ ಸಮಗ್ರ ಬೆಳೆಯಿಂದ ಸಾಧನೆಗೈದು ಅಚ್ಚರಿ ಮೂಡಿಸಿದ್ದಾರೆ.

ಇವರ ತಂದೆ ಮೂಲತಃ ಕೃಷಿಕರು. ಮೂರು ಎಕರೆ ಕಲ್ಲು ಭೂಮಿಯಲ್ಲಿ ಒಣ ಬೇಸಾಯದಲ್ಲಿ ಮಳೆಯಾಶ್ರಿತ ಸಜ್ಜೆ, ಜೋಳ, ಶೇಂಗಾ ಮತ್ತು ತೊಗರಿ ಬೆಳೆಗಳನ್ನು ಬೆಳೆಯುತ್ತಿದ್ದರು. ಮಳೆಯಾದರೆ ಮಾತ್ರ ಬೆಳೆ; ಮಳೆ ಕೈಕೊಟ್ಟರೆ ಬರ ಕುಟುಂಬ ನಿರ್ವಹಣೆಗೆ ತೊಂದರೆ.

ಶ್ರಮಜೀವಿ ರೈತ ನಿಜಲಿಂಗಪ್ಪ ಹೊಸಗೌಡ್ರ ಪಿಯು ಶಿಕ್ಷಣ ಪಡೆದು ಮುಂದೆ ಓದಲು ಆಗದೇ ಏನಾದರೂ ಉದ್ಯೋಗವನ್ನು ಮಾಡಬೇಕೆಂದು ಹುಬ್ಬಳ್ಳಿಯಲ್ಲಿ ಆರು ತಿಂಗಳು ಬೋರ್‌ವೆ ಮೋಟಾರ್ ವೈಂಡಿಂಗ್ ತರಬೇತಿ ಪಡೆದರು.

ADVERTISEMENT

‘ಕಲಿತ ವಿದ್ಯೆಯನ್ನು ಸಾರ್ಥಕಗೊಳಿಸಲು ಚೊಳಚಗುಡ್ಡ ಗ್ರಾಮದಲ್ಲಿ ಮೋಟಾರ್ ವೈಂಡಿಂಗ್ ದುರಸ್ತಿ, ಬೋರ್ ಇಳಿಸುವ ಕಾರ್ಯವನ್ನು 15 ವರ್ಷ ಮಾಡಿದೆ. ದುಡಿದ ಹಣವನ್ನು ಕೂಡಿಟ್ಟು ಹೊಲದಲ್ಲಿ ನಾನೂ ಕೊಳವೆ ಬಾವಿ ಯಾಕೆ ಹಾಕಿಸಬಾರದು ಎಂದು ಯೋಚಿಸಿ 1995ರಲ್ಲಿ ಕೊಳವೆ ಬಾವಿ ಕೊರೆಯಿಸಿದೆ. ಭೂತಾಯಿ ನಾಲ್ಕು ಇಂಚು ನೀರು ಕೊಟ್ಟಳು’ ಎಂದು ನಿಜಲಿಂಗಪ್ಪ ಸಂತಸದಿಂದ ಹೇಳಿದರು.

‘ ಹೊಲವು ಸಂಪೂರ್ಣವಾಗಿ ಕಲ್ಲಿನಿಂದ ಕೂಡಿತ್ತು. ಮಲಪ್ರಭಾ ನದಿ ಪಕ್ಕದಲ್ಲಿ ನಮ್ಮ ಒಂದು ಎಕರೆ ಪ್ರದೇಶದ ಹೊಲದಲ್ಲಿನ 500 ಟಿಪ್ಪರ್ ಮಣ್ಣು ಹಾಕಿ ಫಲವತ್ತಾಗಿ ಮಾಡಿದೆ. ನದಿ ಬಂದು ಎಕರೆ ಹೊಲವು ಮೊದಲಿನಂತಾಗಿದೆ. ಕಲ್ಲು ಹೊಲದಲ್ಲಿ ಕಪ್ಪು ಮಣ್ಣು ಹಾಕಿದ್ದರಿಂದ ಬೆಳೆ ಉತ್ತಮ ಫಸಲು ಬರುವಂತಾಗಿದೆ. ಮೂರು ಎಕರೆ ಜಮೀನದಲ್ಲಿ ಹನಿ ನಿರಾವರಿ ಅಳವಡಿಸಿಕೊಂಡು ಪಪ್ಪಾಯಿ, ದಾಳಿಂಬೆ, ಬಾಳೆ ಮತ್ತು ಸುಗಂಧರಾಜಾ ಹೂವಿನ ಬೆಳೆಯನ್ನು ಬೆಳೆದೆ. ಅಧಿಕ ಲಾಭದಿಂದ ಮತ್ತೆ ಮೂರುವರೆ ಎಕರೆ ಹೊಲವನ್ನು ಖರೀದಿಸಿದೆ ’ ಎಂದರು.

ರೈತ ನಿಜಲಿಂಗಪ್ಪನ ಶ್ರಮವನ್ನು ಗುರುತಿಸಿ ಕೃಷಿ ಇಲಾಖೆ ಆತ್ಮ ಯೋಜನೆಯಲ್ಲಿ 2019-20 ರಲ್ಲಿ ಜಿಲ್ಲಾ ಪ್ರಶಸ್ತಿ ಮತ್ತು ಕೃಷಿಯಲ್ಲಿ ಸಮಗ್ರ ಬೇಸಾಯ ಸಾಧನೆಗೆ 2024 ರಲ್ಲಿ ತಾಲ್ಲೂಕು ಪ್ರಶಸ್ತಿ ನೀಡಲಾಗಿದೆ.

‘ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳು ಆರಂಭವಾದ ಮೇಲೆ ರೈತರು ಕಬ್ಬನ್ನು ಬೆಳೆಯಲು ಆರಂಭಿಸಿದರು. ಪಪ್ಪಾಯಿಯಿಂದ ಸಾಬೂನು ತಯಾರಿಸಬಹುದು. ಬಾಳೆಯಿಂದ ಪೌಡರ್ ತಯಾರಿಸಿ ವಿದೇಶಕ್ಕೆ ರಫ್ತು ಮಾಡಬಹುದು. ರೈತರಿಗೆ ಉತ್ತಮ ಮಾರುಕಟ್ಟೆ ದೊರೆಯಲಿದೆ. ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ದೊರೆಯದಾದಾಗ ತೊಂದರೆಯಾಗುವುದು. ರೈತರು ಬೆಳೆದದ್ದನ್ನು ಮೌಲ್ಯವರ್ಧನೆ  ಮಾಡಿದರೆ ರೈತರು ಸಶಕ್ತರಾಗಲು ಸಾಧ್ಯ’ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕೃಷಿ ಯಶಸ್ಸಿನ ಗುಟ್ಟು

‘ಪಪ್ಪಾಯಿ ಮತ್ತು ದಾಳಿಂಬೆಗೆ ರೋಗ ಹೆಚ್ಚಾಗಿದ್ದರಿಂದ ಬಾಳೆ ಬೆಳೆಯನ್ನು ಆರಂಭಿಸಿದ್ದೇನೆ. ಈಗ ಹೊಲದಲ್ಲಿ ಎರಡುವರೆ ಎಕರೆ ಪ್ರದೇಶದಲ್ಲಿ 2600 ಅಗಿ ಜಿ-9 ಬಾಳೆ ನೆಟ್ಟಿರುವೆ. ಉತ್ತಮ ಫಸಲು ಬರುತ್ತಿದೆ. 11 ತಿಂಗಳಿಗೆ ಫಲವನ್ನು ಕೊಡಲು ಆರಂಭಿಸುವುದು. ಎಕರೆಗೆ ₹50 ಸಾವಿರ ವೆಚ್ಚವಾಗುತ್ತಿದೆ. ಎಕರೆಗೆ ಅಂದಾಜು ₹ 3 ಲಕ್ಷ ಆದಾಯವಾಗುತ್ತಿದೆ. ಶ್ರಮ ಪಟ್ಟರೆ ಭೂತಾಯಿ ರೈತನನ್ನು ಎಂದೂ ಕೈಬಿಡೋದಿಲ್ಲ. ಬಾಳೆಗೆ ಜಾನುವಾರು ಗೊಬ್ಬರದಿಂದ ಸಾವಯವ ಕೃಷಿ ಕೈಗೊಂಡಿರುವೆ. ಫಸಲು ಬಂದ ನಂತರ ಬಾಳೆಗೆ ನೇಗಿಲು ಹೊಡೆದು ನೀರು ಹಾಯಿಸಿದಾಗ ಮತ್ತೆ ಗೊಬ್ಬರವಾಗುವುದು. ಸಾವಯವ ಕೃಷಿಯಿಂದ ಮಣ್ಣು ಫಲವತ್ತಾಗಿ ಫಸಲು ಅಧಿಕ ಬರುವುದು’ ಕೃಷಿಯ ಗುಟ್ಟನ್ನು ಬಿಟ್ಟುಕೊಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.