ಬಸವರಾಜ ಎಸ್.ನಿಡಗುಂದಿ
ಅಮೀನಗಡ: ಪಟ್ಟಣ ಪಂಚಾಯ್ತಿಯ ನಗರೋತ್ಥಾನ-3ನೇ ಹಂತದ ಯೋಜನೆಯಡಿಯಲ್ಲಿ ಅಂದಾಜು ₹50 ಲಕ್ಷದಲ್ಲಿ ನಾಡಕಾರ್ಯಾಲಯದ ಹಿಂದೆ ಸಂತೆ ಮಾರುಕಟ್ಟೆ ನಿರ್ಮಿಸಿ ಅಭಿವೃದ್ಧಿ ಪಡಿಸಿದ್ದರೂ ವಾರದ ಸಂತೆ ಮಾತ್ರ ಬೆಳಗಾವಿ–ರಾಯಚೂರು ಹೆದ್ದಾರಿಯ ಮುಖ್ಯ ರಸ್ತೆಯಲ್ಲಿಯೇ ನಡೆಯುತ್ತಿದೆ.
2023 ಮಾ.29ರಂದು ಅಧಿಕೃತವಾಗಿ ಮಾರುಕಟ್ಟೆ ಲೋಕಾರ್ಪಣೆಗೊಳಿಸಿ ಒಂದೂವರೆ ತಿಂಗಳು ಕಳೆದರೂ ಸಂತೆ ನಡೆಯದ್ದರಿಂದ ಸಾರ್ವಜನಿಕರ ಕೋಪಕ್ಕೆ ಗುರಿಯಾಗಿದೆ.
ಹಲವು ವರ್ಷಗಳಿಂದ ಪಟ್ಟಣದ ಸಂತೆ ಬೆಳಗಾವಿ-ರಾಯಚೂರ ಹೆದ್ದಾರಿಯ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿಯೇ ನಡೆಯುತ್ತಿತ್ತು. ಇದರಿಂದ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿಯ ಜೊತೆಗೆ ಅಪಘಾತಗಳು ಸಂಭವಿಸಿದ ಉದಾಹರಣೆಗಳು ಇವೆ. ಸಂತೆ ಬಂದರೆ ಸಾಕು ಅಕ್ಕಪಕ್ಕದಲ್ಲಿ ತಳ್ಳು ಗಾಡಿಗಳು, ಬೈಕ್ ನಿಲುಗಡೆ ಸೇರಿದಂತೆ ಜನದಟ್ಟನೆಯಿಂದ ತುಂಬಿರುತ್ತದೆ. ಇದರಿಂದ ವಾಹನ ಸವಾರರು ಟ್ರಾಫಿಕ್ ಸಮಸ್ಯೆ ಎದುರಿಸುವಂತಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಲಕ್ಷಾಂತರ ರೂಪಾಯಿ ವೇಯಿಸಿ ನಿರ್ಮಿಸಿದ ಸಂತೆ ಮಾರುಕಟ್ಟೆಗೆ ಸೌಲಭ್ಯಗಳನ್ನು ಒದಗಿಸಿ, ಆರಂಭಿಸಬೇಕು. ಹೆದ್ದಾರಿಯಲ್ಲಿ ಉಂಟಾಗುವ ಜನದಟ್ಟನೆ ಹಾಗೂ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಬೇಕೆಂಬುದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಂತೆ ರಸ್ತೆ ಬದಿಯಲ್ಲಿಯೇ ನಡೆಯುವುದರಿಂದ, ತಳ್ಳು ಗಾಡಿಗಳು ಅಕ್ಕ–ಪಕ್ಕದಲ್ಲಿ ನಿಲ್ಲುವುದರಿಂದ ಟ್ರಾಫಿಕ್ ಕಿರಿ ಕಿರಿ ಉಂಟಾಗುತ್ತಿದೆ. ಆದಷ್ಟು ಬೇಗ ಸಂತೆ ಸ್ಥಳಾಂತರಿಸಿ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿ ಮಲ್ಲೇಶ ನಿಡಗುಂದಿ ತಿಳಿಸಿದ್ದಾರೆ.
ಕಾಮಗಾರಿ ಪೂರ್ಣಗೊಂಡ ಕುರಿತು ಅಭಿಯಂತರರಿಂದ ಪೂರ್ಣ ಮಾಹಿತಿ ಪಡೆದುಕೊಂಡು ಕೂಡಲೇ ಸಂತೆ ಸ್ಥಳಾಂತರದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಮಹೇಶ ನಿಡಶೇಶಿ ಪ.ಪಂ ಮುಖ್ಯಾಧಿಕಾರಿ ಅಮೀನಗಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.