ಬಾಗಲಕೋಟೆ: ‘ರಾಜ್ಯದಲ್ಲಿ ಗುತ್ತಿಗೆ ಕಾರ್ಯಗಳಲ್ಲಿ ಕಮಿಷನ್ ವಿಚಾರ ಹೊಸದಲ್ಲ. ಈಗ ಶೇ 40ಕ್ಕೆ ಬಂದು ನಿಂತಿದೆ. ಬಕ ಪಕ್ಷಿ, ತೋಳ–ತಿಮಿಂಗಲಗಳಂತಹ ರಾಜಕಾರಣಿಗಳು, ಒಂದು ಜೀವ ಹೋದ ಮೇಲಾದರೂ ಈ ವಿಚಾರದಲ್ಲಿ ಆತ್ಮಶುದ್ಧಿ ಮಾಡಿಕೊಳ್ಳಬೇಕು’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡ ಬಿ.ಭಾಸ್ಕರರಾವ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ರಾಜ್ಯದಲ್ಲಿ ಶೇ 99 ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕರು. ಆದರೆ ಒತ್ತಡದಿಂದ ಭ್ರಷ್ಟರಾಗಿದ್ದಾರೆ. ಬದುಕುವ ಸಲುವಾಗಿ ಸುಳ್ಳು ಹೇಳಲು ಶುರು ಮಾಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ಜನರ ಗಮನ ಬೇರೆಡೆ ಸೆಳೆಯುವ ತಂತ್ರ. ನಾವೆಲ್ಲ ಭಾರತೀಯರು, ಒಂದೇ ತಾಯಿಯ ಮಕ್ಕಳು ಎಂದು ಹಿರಿಯರು, ಬಹಳಷ್ಟು ತಿಳಿವಳಿಕೆ ಇರುವ ಯಡಿಯೂರಪ್ಪನವರು ಕೂಡ ಹೇಳಿದ್ದಾರೆ. ಅದನ್ನು ಆ ಪಕ್ಷದವರು ತುರ್ತಾಗಿ ಅರ್ಥಮಾಡಿಕೊಂಡು ಆಡಳಿತ ನೀಡಬೇಕು’ ಎಂದು ಕಿವಿಮಾತು ಹೇಳಿದರು.
ಯಾವುದೇ ಸವಾಲಿಗೂ ಸಿದ್ಧ: ‘ರಾಜಕೀಯ ಅಜೆಂಡಾಗಿಂತ ಜನಹಿತ ಒಳಗೊಂಡ ಆರ್ಥಿಕ ಅಜೆಂಡಾ ಈಗ ದೇಶದ ಅಭಿವೃದ್ಧಿಗೆ ಬೇಕಿದೆ. ಅದರ ಬದಲಿಗೆ ಈಗ ಆರ್ಥಿಕ ಭಯೋತ್ಪಾದನೆ ನಡೆಯುತ್ತಿದೆ. ರಾಜಕೀಯ ವಿರೋಧಿಗಳನ್ನು ಆರ್ಥಿಕವಾಗಿ ಹಾಳುಮಾಡುವ ಕೆಲಸ ನಡೆಯುತ್ತಿದೆ. ಆಮ್ ಆದ್ಮಿ ಪಕ್ಷದ ಬೆಳವಣಿಗೆ ವಿಚಾರದಲ್ಲಿ ಯಾವುದೇ ಸವಾಲು ಎದುರಿಸಲು ಸಿದ್ಧನಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.