ADVERTISEMENT

ಮಹಾಲಿಂಗಪುರ | ಗರ್ಭಪಾತದಿಂದ ಸಾವು; ಮಹಿಳೆ ಸೇರಿ ಏಳು ಮಂದಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 30 ಮೇ 2024, 2:46 IST
Last Updated 30 ಮೇ 2024, 2:46 IST
   

ಮಹಾಲಿಂಗಪುರ (ಬಾಗಲಕೋಟೆ): ಇಲ್ಲಿನ ಆಯಿಲ್ ಪ್ಲಾಟ್‌ನಲ್ಲಿರುವ ನಿವಾಸದಲ್ಲಿ ಸೋಮವಾರ ಗರ್ಭಪಾತ ಮಾಡಿಸಿಕೊಂಡ ಮಹಾರಾಷ್ಟ್ರದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪಟ್ಟಣದ ಮಹಿಳೆಯೊಬ್ಬರು ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಾಲಿಂಗಪುರದ ಕವಿತಾ ಬಾಡನವರ, ಮಹಾರಾಷ್ಟ್ರದ ದೂದ್‌ಗಾವ್‌ನ ಸಂಜಯ ಗೌಳಿ, ಸಂಗೀತಾ ಸಂಜಯ ಗೌಳಿ, ವಿಜಯ ಸಂಜಯ ಗೌಳಿ, ಕುಪ್ವಾಡದ ಮಾರುತಿ ಬಾಬುಸೋ ಖರಾತ್, ಒಬ್ಬರು ಸೋನೊಗ್ರಾಫರ್, ಅಥಣಿಯ ಡಾ. ಕೋತ್ವಾಲೆ ವಿರುದ್ಧ ಸಾಂಗ್ಲಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ವಿಜಯ ಸಂಜಯ ಗೌಳಿ, ಡಾ.ಮಾರುತಿ ಬಾಬುಸೋ ಖರಾತ್, ಕವಿತಾ ಬಾಡನವರ ಅವರನ್ನು ಬಾಗಲಕೋಟೆಯ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ನಡೆದಿದ್ದೇನು?: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಹಾತಕಲಂಗಡ ತಾಲ್ಲೂಕಿನ ಆಳತೆ ಗ್ರಾಮದ ಸೋನಾಲಿ ಸಚಿನ್ ಕದಮ್ (32) ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಮೂರನೇ ಬಾರಿ ಗರ್ಭಿಣಿ ಆಗಿದ್ದರು.

ಸುಸಜ್ಜಿತ ಕೊಠಡಿ ಪತ್ತೆ

ಗರ್ಭಪಾತಕ್ಕೆ ಬೇಕಾದ ಸುಸಜ್ಜಿತ ಕೊಠಡಿ ದಾಳಿ ವೇಳೆ ಪತ್ತೆಯಾಗಿದೆ. ಕೊಠಡಿಯಲ್ಲಿ ಎರಡು ಹಾಸಿಗೆ, ಇಂಜೆಕ್ಷನ್, ಸಲೈನ್‌ ಬಾಟ್ಲಿ ಸೇರಿ ವಿವಿಧ ಔಷಧಗಳು ಸಿಕ್ಕಿವೆ.

ಈ ಹಿಂದೆ ಕವಿತಾ ಮನೆ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅದಕ್ಕೆ ಆ ಸ್ಥಳವನ್ನು ಬದಲಿಸಿ, ಸಮೀಪದ ಮನೆಯಲ್ಲಿ ಗರ್ಭಪಾತ ಮಾಡಲಾಗುತಿತ್ತು.

ರಾತ್ರಿ ವೇಳೆ ಗರ್ಭಪಾತ

‘ಗರ್ಭಪಾತಕ್ಕೆ ಮಧ್ಯರಾತ್ರಿ ಬರುತ್ತಿದ್ದ ಮಹಿಳೆಯರಿಗೆ 15ರಿಂದ 20 ನಿಮಿಷದಲ್ಲಿ ಆರೋಪಿ ಕವಿತಾ ಗರ್ಭಪಾತ ಮಾಡಿ, ಕಳುಹಿಸುತ್ತಿದ್ದರು ಎಂಬುದು ಪ್ರಾಥಮಿಕ ಹಂತದ ತನಿಖೆಯಿಂದ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದರು.

‘ಯಾರಿಗೂ ಮೊಬೈಲ್‌ ನಂಬರ್‌ ನೀಡುತ್ತಿರಲಿಲ್ಲ. ಪರಿಚಿತ ಮಧ್ಯವರ್ತಿಗಳು ಕರೆದುಕೊಂಡು ಬಂದರೆ ರಾತ್ರೋರಾತ್ರಿ ಗರ್ಭಪಾತ ಮಾಡುತ್ತಿದ್ದರು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.