ADVERTISEMENT

ರಾಜ್ಯದಲ್ಲಿ ಅಡ್ಜಸ್ಟ್‌ಮೆಂಟ್‌ ರಾಜಕಾರಣ: ಶಾಸಕ ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 14:19 IST
Last Updated 3 ಮಾರ್ಚ್ 2024, 14:19 IST
<div class="paragraphs"><p>ಮುಧೋಳ ತಾಲ್ಲೂಕು ಬರಗಿ ಗ್ರಾಮದಲ್ಲಿ ನಮೋ ಯುವ ಸೇನಾ ಆಯೋಜಿಸಿದ ಶಿವ-ರಾಯ ಉತ್ಸವದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು</p></div>

ಮುಧೋಳ ತಾಲ್ಲೂಕು ಬರಗಿ ಗ್ರಾಮದಲ್ಲಿ ನಮೋ ಯುವ ಸೇನಾ ಆಯೋಜಿಸಿದ ಶಿವ-ರಾಯ ಉತ್ಸವದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು

   

ಮುಧೋಳ: ‘ದೇಶ ವಿಭಜನೆ ನಡೆದಾಗ ಡಾ.ಅಂಬೇಡ್ಕರ್ ಭಾರತದ ಎಲ್ಲ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಹಾಗೂ ಪಾಕಿಸ್ತಾನದ ಹಿಂದೂಗಳನ್ನು ಭಾರತಕ್ಕೆ ಕರೆತರುವಂತೆ ಹೇಳಿದರೂ ಕಿವಿಗೊಡಲಿಲ್ಲ. ಅಂದು ಅಂಬೇಡ್ಕರ್ ಮಾತು ಕಾಂಗ್ರೆಸ್ ಕೇಳಿದ್ದರೆ ಇಂದು ಪಾಕಿಸ್ತಾನ್‌ ಜಿಂದಾಬಾದ್, ಬಾಂಬ್ ಸ್ಪೋಟ ಆಗುತ್ತಿರಲಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.

ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಶನಿವಾರ ನಮೋ ಯುವ ಸೇನಾ ಆಯೋಜಿಸಿದ ಶಿವ-ರಾಯ ಉತ್ಸವದಲ್ಲಿ ಮಾತನಾಡಿ, ‘ದೇಶಕ್ಕಾಗಿ ಹೋರಾಟ ಮಾಡಿದ ಅಂಬೇಡ್ಕರ್ ನಿಧನರಾದಾಗ ದೆಹಲಿಯಲ್ಲಿ ಅಂತ್ಯಕ್ರಿಯೆಗೆ ಕಾಂಗ್ರೆಸ್ ಜಾಗ ನೀಡಲಿಲ್ಲ. ಹಿಂದೂಗಳು ಜಾಗೃತರಾಗಬೇಕು ಜಾತಿಗಳನ್ನು ಮೆಟ್ಟಿ ನಿಂತಾಗ ಮಾತ್ರ ಯಶಸ್ಸು’ ಎಂದರು.

ADVERTISEMENT

‘ರಾಜ್ಯದಲ್ಲಿ ಅಡ್ಜಸ್ಟ್‌ಮೆಂಟ್ ರಾಜಕಾರಣ ನಡೆದಿದೆ, ವಿಧಾನಸಭೆಯಲ್ಲೂ ನಾನೊಬ್ಬನೆ ನೇರವಾಗಿ ಮಾತನಾಡುವವ. ಕೆಜೆ ಹಳ್ಳಿ, ಡಿಜಿ ಹಳ್ಳಿಗಳಲ್ಲಿ ಗಲಭೆಯಾದಾಗ ನಮ್ಮ ಪಕ್ಷದ ಗೃಹಮಂತ್ರಿ ಶೀಘ್ರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತ ದಿನಕಳೆದರು. ಅಂದೇ ಅವರನ್ನು ಮಟ್ಟಹಾಕಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಹೇಳಿದರು.

ವಿಜಯಪುರ ಕ್ಷೇತ್ರದಲ್ಲಿ 1.20 ಲಕ್ಷ ಮುಸ್ಲಿಂ ಮತಗಳಿವೆ. ದೇಶದಲ್ಲಿ ಯಾವ ವಿಧಾನಸಭಾ ಕ್ಷೇತ್ರದಲ್ಲೂ ಇಷ್ಟು ಮುಸ್ಲಿಂ ಮತಗಳು ಇಲ್ಲ. ಜಾಗೃತ ಹಿಂದೂಗಳು ನನ್ನ ಗೆಲ್ಲಿಸಿದ್ದಾರೆ. ನನ್ನ ಸೋಲಿಸಲು ಶಿವಮೊಗ್ಗ, ಮುಧೋಳ ಹಾಗೂ ಬೆಳಗಾವಿಯಿಂದ ಹಣ ಬಂತು ನನ್ನ ಫಲಿತಾಂಶ ಬದಲಿಸಲಾಗಲಿಲ್ಲ. ದೇಶದ ಸಮರ್ಥ ನಾಯಕ ಮೋದಿಯಿಂದ ದೇಶ ಪ್ರಪಂಚದಲ್ಲಿ ಮುನ್ನಡೆ ಸಾಧಿಸಿದೆ ಮತ್ತೊಮ್ಮೆ ಅವರನ್ನು ಆಯ್ಕೆ ಮಾಡಬೇಕು. ನಾನು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಭಾಷಣ ಮಾಡುತ್ತೇನೆ’ ಎಂದು ಹೇಳಿದರು.

ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಮಾತನಾಡಿ,  ಭಾರತವನ್ನು ಇಸ್ಲಾಂಮಿಕ್ ರಾಷ್ಟ್ರ ಮಾಡುವ ಸಂಚು ನಡೆದಿದೆ. 2047ಕ್ಕೆ ಭಾರತ ಇಸ್ಲಾಂಮಿಕ್ ರಾಷ್ಟ ಮಾಡಲು ತಯಾರಿ ನಡೆಸಿದ್ದಾರೆ. ಆದರೆ 2047 ರ ಹೊತ್ತಿಗೆ ಪ್ರಪಂಚ ಹಿಂದೂಮಯವಾಗಿರುತ್ತದೆ’ ಎಂದು ಹೇಳಿದರು.

‘2014 ರ ನಂತರ ರಾಷ್ಟ್ರ ಪ್ರಗತಿ ಸಾಧಿಸಿದೆ. ರಾಮ ಮಂದಿರ, ಕಾಶ್ಮೀರದ 370 ಕಾಯ್ದೆ ರದ್ದತಿಯಾಗಿದೆ. ಇನ್ನು ಮುಂದೆ ದೇಶದಲ್ಲಿ ಮಂದಿರ ಕೆಡವಿ ಮಸೀದಿ ಮಾಡಿದ ಎಲ್ಲವೂಗಳನ್ನು ಕಾನೂನು ಮುಖಾಂತರ ಮಂದಿರ ಮಾಡಲಾಗುವುದು. ದೇಶದಲ್ಲಿ ಏಕ ನಾಗರಿಕ ಸಂಹಿತೆ ಜನಸಂಖ್ಯೆ ನಿಯಂತ್ರಣ ಕಾಯ್ದೆ ಬರಲಿದೆ. ದೇಶಕ್ಕಾಗಿ ದುಡಿದ ಮಹಾಪುರುಷರನ್ನು ಜಾತಿಗಳಿಗೆ ಸೀಮಿತಗೊಳಿಸಬೇಡಿ’ ಎಂದು ಹೇಳಿದರು.

ಮೈಗೂರ ಶಿವಾನಂದ ಮಠದ ಕ್ರಾಂತಿಯೋಗಿ ಗುರುಪ್ರಸಾದ ಶ್ರೀ ಮಾತನಾಡಿ, ಮುಸ್ಲಿಂ ಹಬ್ಬಗಳಲ್ಲಿ ಹಿಂದೂಗಳು ಭಾಗಿಯಾಗಬಾರದು ಎಂಬುದನ್ನು ವಿವರಿಸಿದರು.

ಬಾಗಲಕೋಟೆ ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯದರ್ಶಿ ನಂದು ಗಾಯಕವಾಡ ಮಾತನಾಡಿದರು.

ಬರಗಿ ರಾಚೋಟೇಶ್ವರ ಮಠದ ಮಲ್ಲಯ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು. ಗುರುಪಾದಯ್ಯ ಶಿರೂರ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ ದಾಸರಡ್ಡಿ, ಲಕ್ಷ್ಮಣ ಚಿನ್ನಣ್ಣವರ, ಪರಮಾನಂದ ನಿಂಗನೂರ, ಶ್ರೀಶೈಲ ಕಲಮಡಿ, ಹಣಮಂತ ಪೂಜಾರಿ, ಸಿದ್ದಪ್ಪ ತೋಟದ, ಈರಪ್ಪ ಇಂಗಳಗಿ, ರವಿ ಉದಪುಡಿ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.