ADVERTISEMENT

ರಾಜಮಹಮ್ಮದ್‌ ನದಾಫ್‌ಗೆ ʼಆವಿಷ್ಕಾರಿ ರೈತʼ ಪ್ರಶಸ್ತಿಯ ಗರಿ

ಸಮಗ್ರ, ಸಾವಯವ ಕೃಷಿ ಪದ್ಧತಿ ಅಳವಡಿಕೆ

ಬಸವರಾಜ ಅ.ನಾಡಗೌಡ
Published 18 ಅಕ್ಟೋಬರ್ 2024, 7:43 IST
Last Updated 18 ಅಕ್ಟೋಬರ್ 2024, 7:43 IST
ಕೃಷಿ ಚಿವುಟುವ ಯಂತ್ರ ತಯಾರಿಸಿ, ಬಳಸುತ್ತಿರುವ ರಾಜಮಹಮ್ಮದ್‌ ನದಾಫ್
ಕೃಷಿ ಚಿವುಟುವ ಯಂತ್ರ ತಯಾರಿಸಿ, ಬಳಸುತ್ತಿರುವ ರಾಜಮಹಮ್ಮದ್‌ ನದಾಫ್   

ಇಳಕಲ್‌: ತಾಲ್ಲೂಕಿನ ಕಂದಗಲ್ ಗ್ರಾಮದ ರೈತ ರಾಜಮಹಮ್ಮದ್ ನದಾಫ್ ಸ್ಥಳೀಯ ಹಾಗೂ ಗುಜರಿ ವಸ್ತುಗಳನ್ನು ಬಳಸಿ ಅತ್ಯಂತ ಕಡಿಮೆ ವೆಚ್ಚದಲ್ಲಿ ತೊಗರಿ, ಕಡಲೆ ಬೆಳೆಗಳ ಕುಡಿ ಚಿವುಟುವ ಯಂತ್ರ ತಯಾರಿಸಿ 'ಆವಿಷ್ಕಾರಿ ರೈತ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜಮಹಮ್ಮದ್ 4ನೇ ತರಗತಿವರೆಗೆ ಒದಿದ್ದಾರೆ. ಕಡಿಮೆ ವೆಚ್ಚದಲ್ಲಿ ಕುಡಿ ಚಿವುಟುವ ಯಂತ್ರ ತಯಾರಿಸಿ, ಅದರ ಪ್ರಾತ್ಯಕ್ಷಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಧಾರವಾಡದ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ತಜ್ಞರ ಗಮನ ಸೆಳೆದಿದ್ದು, ಅವರಿಗೆ 'ಆವಿಷ್ಕಾರಿ ರೈತ' ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

ಆಸಕ್ತಿ ಹಾಗೂ ಹವ್ಯಾಸದಿಂದ ಗಳಿಸಿಕೊಂಡಿರುವ ತಾಂತ್ರಿಕ ಕೌಶಲದಿಂದ ಪುಣೆಯ ಕೈಗಾರಿಕೆಯೊಂದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಉತ್ತಮ ಸಂಬಳವೂ ಇತ್ತು. ಕೃಷಿಯಲ್ಲಿ ಪ್ರಯೋಗ ಮಾಡಿ, ರೈತರು ತಾವೇ ಮಾಡಿಕೊಳ್ಳಬಹುದಾದ ಕಡಿಮೆ ವೆಚ್ಚದ ಮಾದರಿಗಳನ್ನು ರೂಪಿಸುವ ಬಯಕೆಯೊಂದಿಗೆ ಊರಿಗೆ ಬಂದು ಕೃಷಿಕರಾದರು.

ADVERTISEMENT

ತೊಗರಿ ಬೆಳೆಯ ಕುಡಿ ಚಿವುಟುವದರಿಂದ ಗಿಡ ಅಗಲವಾಗಿ ಬೆಳೆದು, ಹೆಚ್ಚು ಫಸಲು ನೀಡುತ್ತದೆ ತಿಳಿದು, ತಾವೇ ಯಂತ್ರ ರೂಪಿಸಲು ಮುಂದಾದರು. ಕೆಟ್ಟು ಮೂಲೆ ಸೇರಿದ್ದ ಬ್ಯಾಟರಿ ಚಾಲಿತ ಸ್ಪ್ರೇಯರ್, ಅರ್ಧ ಅಡಿ ಪಿವಿಸಿ ಪೈಪ್, ಎರಡು ಪಿವಿಸಿ ಕ್ಯಾಪ್, ತರಕಾರಿ ಕತ್ತರಿಸುವ 8 ಇಂಚಿನ ಚಾಕು, ನಟ್, ಬೋಲ್ಟ್ ಬಳಸಿಕೊಂಡು, ಮೋಟಾರ್‌ ಶಾಫ್ಟ್ ಗೆ ವೆಲ್ಡಿಂಗ್‌ ಮೂಲಕ ಬ್ಲೇಡ್‌ ಜೋಡಿಸಿ ಕುಡಿ ಚಿವುಟುವ ಯಂತ್ರ ಸಿದ್ಧಪಡಿಸಿದ್ದಾರೆ. ಪಿವಿಸಿ ಪೈಪ್ ಗೆ ರಂಧ್ರಗಳನ್ನು ಹಾಕಿ ಗಾಳಿಯಾಡುವಂತೆ ಮಾಡಿದರು. ಸ್ಪ್ರೇಯರ್‌ನ 12ವೊಲ್ಟ್ ಬ್ಯಾಟರಿ ಬಳಸಿದ್ದರಿಂದ ಪರಿಣಾಮಕಾರಿಯಾಗಿದೆ. ದಿನಕ್ಕೆ ಸತತ 6 ಗಂಟೆ ಬಳಸಿದರೂ ಮೋಟಾರ್ ಬಿಸಿಯಾಗುವುದಿಲ್ಲ. ಒಬ್ಬ ವ್ಯಕ್ತಿ ಯಂತ್ರದಿಂದ ದಿನಕ್ಕೆ ನಾಲ್ಕು ಎಕರೆ ಕುಡಿ ಚಿವುಟಬಹುದಾಗಿದೆ.

ʼರೈತರು ಒಂದೇ ಬೆಳೆಯ ಬದಲು ಮಿಶ್ರಬೆಳೆ ಜಾನುವಾರ ಸಾಗಾಣಿಕೆ ಮೂಲಕ ಸಮಗ್ರ ಕೃಷಿ ಮಾಡಿದರೆ ಸಂತೋಷ ಆರೋಗ್ಯ ಹಾಗೂ ಲಾಭ ಮೂರು ಸಿಗುತ್ತವೆ.
– ರಾಜಮಹಮ್ಮದ್.‌ನದಾಫ್‌ ಕೃಷಿಕ

16 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಅಳವಡಿಸಿಕೊಂಡು ಅನೇಕ ಪ್ರಯೋಗ ಮಾಡುತ್ತಿದ್ದಾರೆ. ಆಡು, ಕುರಿ, ಕೋಳಿ, ಎತ್ತು, ಆಕಳು, ಎಮ್ಮೆ ಸಾಕಾಣಿಕೆ ಶುರು ಮಾಡಿದರು. ಹೊಲದ ಬದುವಿಗೆ 80 ತೆಂಗು, ಐದು ನುಗ್ಗೆ, 60 ಮಹಾಗನಿ, 80 ಸಾಗವಾನಿ ಬೆಳೆದಿದ್ದಾರೆ. ಕೊಟ್ಟಿಗೆ, ಎರೆಹುಳುವಿನ ಗೊಬ್ಬರ ಬಳಸುತ್ತಿದ್ದಾರೆ. ಕೃಷಿ ಹೊಂಡ ನಿರ್ಮಿಸಿದ್ದಾರೆ. ಎರೆಹುಳುವಿನ ತೊಟ್ಟಿ ಇದೆ. ಒಣಬೇಸಾಯದಲ್ಲಿ ಎರಡು ಎಕರೆಯಲ್ಲಿ 20 ಕ್ವಿಂಟಾಲ್ ಬಿಳಿಜೋಳ ಬೆಳೆದಿದ್ದಾರೆ.

ರಾಜಮಹಮ್ಮದ್‌ ಕೃಷಿಯೊಂದಿಗೆ ʼವಿಶ್ವಜ್ಯೋತಿʼ ಎಂಬ ಸಾಮಾಜಿಕ ಸೇವಾ ಸಂಸ್ಥೆ ಕಟ್ಟಿ, ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳ ಓದಿಗೂ ಸಹಾಯ ಮಾಡುತ್ತಿದ್ದಾರೆ. ರಾಜಮಹಮ್ಮದ್‌ರನ್ನು ಮೊ.ಸಂ 9632196593 ಮೂಲಕ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.