ADVERTISEMENT

ಕಲಾದಗಿ | ಸಮಗ್ರ ಕೃಷಿಯಿಂದ ಸಮೃದ್ಧ ಬೆಳೆ: ಉತ್ತಮ ಆದಾಯ

ರೈತ ಹಣಮಂತ ಪೂಜಾರ ಕೃಷಿ ಕಾರ್ಯದಿಂದ ಕುಟುಂಬಕ್ಕೆ ಆದಾಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 6:18 IST
Last Updated 8 ನವೆಂಬರ್ 2024, 6:18 IST
ಕಲಾದಗಿ ಸಮೀಪದ ಹಿರೇಸಂಶಿ ಗ್ರಾಮದ ಹಣಮಂತ ಪೂಜಾರ ಅವರು ಬೆಳೆದ ಸಮೃದ್ಧಿ ಬಾಳೆ
ಕಲಾದಗಿ ಸಮೀಪದ ಹಿರೇಸಂಶಿ ಗ್ರಾಮದ ಹಣಮಂತ ಪೂಜಾರ ಅವರು ಬೆಳೆದ ಸಮೃದ್ಧಿ ಬಾಳೆ   

ಕಲಾದಗಿ: ಮಣ್ಣು ನಂಬಿದರೆ ಹೊನ್ನು ಎನ್ನುವಂತೆ ಮಣ್ಣನ್ನೇ ನಂಬಿ ಬದುಕು ಕಟ್ಟಿಕೊಂಡ ಹಿರೇಸಂಶಿ ಗ್ರಾಮದ ರೈತ ಹಣಮಂತ ಪೂಜಾರ ತನ್ನ 3 ಎಕರೆ 35 ಗುಂಟೆ ಜಮೀನಿನಲ್ಲಿ ಬಾಳೆ, ಕಬ್ಬು, ತರಕಾರಿ ಮಿಶ್ರ ಕೃಷಿ ಮಾಡಿ, ನಿರಂತರ ಆದಾಯ ಕಂಡುಕೊಂಡಿದ್ದಾರೆ.

ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಬಾಳೆ ಸಸಿ ನಾಟಿ ಮಾಡಲು ₹ 20 ಸಾವಿರ ಖರ್ಚು ಮಾಡಿದ್ದಾರೆ. ಕಳೆದ ತಿಂಗಳು ಬಾಳೆ ಕಟಾವು ಮಾಡಿದ್ದಾರೆ, ಅಂದಾಜು ₹ 30 ರಿಂದ 40 ಸಾವಿರ ಆದಾಯ ಗಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಇಳುವರಿಯೊಂದಿಗೆ ಆದಾಯ ದ್ವಿಗುಣವಾಗುವ ನಿರೀಕ್ಷೆಯಲ್ಲಿ ಇದ್ದಾರೆ.

ಮೂಲತಃ ಕೃಷಿ ಕುಟುಂಬವಾಗಿದ್ದು ಸಾವಯವ ಪದ್ಧತಿ ಅನುಸರಿಸುತ್ತಿದ್ದು, ಮನೆಯಲ್ಲಿ ಎರಡು ಆಕಳು, ಎಮ್ಮೆ ಸಾಕಿದ್ದೇನೆ. ಜಾನುವಾರು ಹಾಕಿದ ಸೆಗಣಿ ತೆಗೆದುಕೊಂಡು ಜಮೀನಿನಲ್ಲಿ ಕೊಟ್ಟಿಗೆ ಗೊಬ್ಬರ ಸಿದ್ಧಪಡಿಸುತ್ತೇನೆ ಎಂದರು.

ADVERTISEMENT

ಎರಡು ಎಕರೆ ಕಬ್ಬು, 35 ಗುಂಟೆ ಜಮೀನಿನಲ್ಲಿ ಈರುಳ್ಳಿ, ಕೊತ್ತಂಬರಿ, ಬದನೆಕಾಯಿ, ಟೊಮೆಟೊ ಬೆಳೆಯುತ್ತಿದ್ದೇನೆ. ಕಬ್ಬಿನಿಂದ ಎಕರೆಗೆ ವರ್ಷಕ್ಕೆ ₹2 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ.

ಸ್ವಂತ ಮಾರಾಟ ಹೆಚ್ಚಿನ ಆದಾಯ: ವಾರದಲ್ಲಿ ಎರಡು ಸಂತೆಗಳಿಗೆ ಹೆಣ್ಣು ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತೇನೆ. ಸ್ವತಃ ಹಣ್ಣುಗಳನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಆದಾಯ ಬರುತ್ತಿದೆ. ಕಲಾದಗಿ, ನವನಗರದ ವಾರದ ಸಂತೆಗಳಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತೇನೆ. ಪ್ರತಿ ಡಜನ್‌ಗೆ ₹ 50 ಮಾರಾಟವಾಗುತ್ತದೆ. ಸಮ್ಮಿಶ್ರ ಬೇಸಾಯ ಪದ್ಧತಿಯಲ್ಲಿ ಸಮೃದ್ಧ ಬೆಳೆ ಬೆಳೆದು ಉತ್ತಮ ಫಲ ಪಡೆಯುತ್ತಿರುವ ಇವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ.

’ಉತ್ತಮ ಮಣ್ಣು, ನೀರಿನ ಸೌಲಭ್ಯವಿದ್ದರೆ ಸಮರ್ಪಕ ನಿರ್ವಹಣೆಯಿಂದ ಕೃಷಿಯಲ್ಲಿ ಸಾಧನೆ ಮಾಡಬಹುದು. ನನ್ನ ಮನೆ ನಿರ್ವಹಣೆಗೆ ಮಿಶ್ರ ಕೃಷಿ ಪದ್ಧತಿ ನನಗೆ ಹೆಚ್ಚಿನ ನೆರವು ನೀಡಿದೆ‘ ಎಂದು ರೈತ ಹಣಮಂತ ಪೂಜಾರ ಹೇಳುತ್ತಾರೆ.

ಹವಾಮಾನ ಬದಲಾವಣೆಯಿಂದ ಅತಿವೃಷ್ಟಿ ಅನಾವೃಷ್ಟಿ ಹಾಗೂ ಮಾರುಕಟ್ಟೆ ದರ ವ್ಯತ್ಯಾಸದಿಂದ ರೈತರು ತೊಂದರೆಗೆ ಸಿಲುಕಿದ್ದಾರೆ. ಇದಕ್ಕೆ ಸಮಗ್ರ ಕೃಷಿ ಪದ್ದತಿ ಅಧಿಕ ಲಾಭ ತರಲಿದೆ
-ಹಣಮಂತ ಪೂಜಾರ ರೈತ ಹಿರೇಸಂಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.