ADVERTISEMENT

ಬಾಗಲಕೋಟೆ | ನಿಗಮ, ಮಂಡಳಿ ನೇಮಕ: ಜಿಲ್ಲಾ ಮುಖಂಡರ ಕಡಗಣನೆ

ಬಸವರಾಜ ಹವಾಲ್ದಾರ
Published 1 ಮಾರ್ಚ್ 2024, 5:36 IST
Last Updated 1 ಮಾರ್ಚ್ 2024, 5:36 IST

ಬಾಗಲಕೋಟೆ: ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯನ್ನು ಕಡೆಗಣಿಸಲಾಗಿತ್ತು. ಈಗ ರಾಜ್ಯ ಸರ್ಕಾರ 44 ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ. ನಿಗಮ, ಮಂಡಳಿಗಳ ನೇಮಕದಲ್ಲೂ ಜಿಲ್ಲೆಯ ಮುಖಂಡರನ್ನು ಕಡೆಗಣಿಸಲಾಗಿದೆ.

ಮುಖಂಡರು ಹಾಗೂ ಕಾರ್ಯಕರ್ತರ ಕೋಟಾದಲ್ಲಿ ಜಿಲ್ಲೆಯ ಒಂದಿಬ್ಬರಿಗಾದರೂ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಯಾರನ್ನೂ ಪರಿಗಣಿಸಿಲ್ಲ. ಇದರಿಂದ ನೇಮಕದ ನಿರೀಕ್ಷೆಯಲ್ಲಿದ್ದ ಮುಖಂಡರಿಗೆ ನಿರಾಸೆಯಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಐವರು ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಲು ಕಾರ್ಯಕರ್ತರು, ಮುಖಂಡರು ಹಗಲು–ರಾತ್ರಿ ದುಡಿದಿದ್ದರು. ಪರಿಣಾಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಧಿಕಾರದ ವಿಷಯ ಬಂದಾಗ ತಮ್ಮನ್ನು ಕೈ ಬಿಡಲಾಗಿದೆ ಎಂಬ ಅಸಮಾಧಾನ ಕಾರ್ಯಕರ್ತರದ್ದಾಗಿದೆ.

ADVERTISEMENT

ಶಾಸಕರನ್ನು ನಿಗಮ–ಮಂಡಳಿಗೆ ನೇಮಕ ಮಾಡಿದಾಗ ಜಿಲ್ಲೆಯ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಶಾಸಕ ಎಚ್‌.ವೈ. ಮೇಟಿ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಜೆ.ಟಿ.ಪಾಟೀಲ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಮಾಡಲಾಗಿತ್ತು.

ಶಾಸಕರ ಒಗ್ಗಟ್ಟಿನ ಕೊರತೆ: ಸರ್ಕಾರಿ ವೈದ್ಯಕೀಯ ಕಾಲೇಜು, ಜವಳಿ ಪಾರ್ಕ್‌ ಸೇರಿದಂತೆ ವಿವಿಧ ಘೋಷಿತ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಶಾಸಕರು ಯಶಸ್ವಿಯಾಗಿಲ್ಲ. ಈಗ ಕಾರ್ಯಕರ್ತರಿಗೆ ಅಧಿಕಾರ ಕೊಡಿಸುವಲ್ಲಿಯೂ ಅವರು ಹಿಂದುಳಿದಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಸೇರಿದಂತೆ ಐವರು ಶಾಸಕರ ನಡುವೆ ಒಗ್ಗಟ್ಟಿನ ಕೊರತೆ ಕಾಣುತ್ತಿದೆ. ವೈಯಕ್ತಿಕವಾಗಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಯತ್ನಿಸುತ್ತಿದ್ದಾರೆಯೇ ಹೊರತು, ಜಿಲ್ಲೆ ಸಮಸ್ಯೆ ಪರಿಹಾರಕ್ಕೆ ಒಟ್ಟಾಗಿ ಧ್ವನಿ ಎತ್ತುತ್ತಿಲ್ಲ. ಪರಿಣಾಮ ಜಿಲ್ಲೆ ಕಡಗಣೆನೆ ಒಳಗಾಗುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ದೂರುತ್ತಾರೆ.

‘ಶಾಸಕರಾಗಿರುವುದೇ ಒಂದು ಅಧಿಕಾರ. ಹಾಗಿದ್ದ ಮೇಲೂ ಶಾಸಕರು ಪೈಪೋಟಿಗೆ ಬಿದ್ದು, ನಿಗಮ–ಮಂಡಳಿಗೆ ನೇಮಕವಾಗಿದ್ದಾರೆ. ಇದೇ ಜಿದ್ದನ್ನು ಕಾರ್ಯಕರ್ತರ ನೇಮಕದಲ್ಲಿ ತೋರಿಸಿಲ್ಲ. ಪಕ್ಷವನ್ನು ಗೆಲ್ಲಿಸಲು ಮುಖಂಡರು, ಕಾರ್ಯಕರ್ತರು ಬೇಕು. ಆದರೆ, ಅಧಿಕಾರದ ವಿಷಯ ಬಂದಾಗ ಬೇಕಿಲ್ಲ ಎಂಬ ನೀತಿ ಅವರದ್ದಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷಕ್ಕಾಗಿ ಹಲವಾರು ವರ್ಷ ಕೆಲಸ ಮಾಡಿದ ನಾರಾಯಣ ಭಾಂಡಗೆ ಅವರನ್ನು ಗುರುತಿಸಿ ಒಮ್ಮೆ ವಿಧಾನ ಪರಿಷತ್‌ ಹಾಗೂ ಈಗ ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ಆದರೆ, ನಮ್ಮಲ್ಲಿ ಪಕ್ಷ ದುಡಿದವರನ್ನು ಗುರುತಿಸುವ ಕೆಲಸ ಆಗುತ್ತಿಲ್ಲ. ಪರಿಣಾಮ ಪಕ್ಷದಿಂದ ಕಾರ್ಯಕರ್ತರು ದೂರ ಸರಿಯುತ್ತಿದ್ದಾರೆ ಎನ್ನುವುದು ಕಾರ್ಯಕರ್ತರ ಅನಿಸಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.