ರಾಂಪುರ: ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯ ನಂತರದ ಶುಕ್ರವಾರ ‘ಆಷಾಢಪರ್ವ’ ಎಂಬ ವಿಶಿಷ್ಟ ಬಗೆಯ ಕಾರ್ಯಕ್ರಮ ಜರುಗುತ್ತದೆ. ಇದನ್ನು ರೈತರ ಹಬ್ಬ ಎಂತಲೂ ಕರೆಯಲಾಗುತ್ತದೆ.
ಜೋಳದ ಕಿಚಡಿ ಹಾಗೂ ವಿವಿಧ ಬಗೆಯ ಸಾರು ಸವಿಯುವುದೇ ಈ ಹಬ್ಬದ ವೈಶಿಷ್ಟ್ಯ. ಗ್ರಾಮೀಣ ಪ್ರದೇಶಗಳಲ್ಲಿ ರೈತರ ಮನೆಗಳಲ್ಲಿ ಜೋಳದ ಕಿಚಡಿ ಮಾಡುವುದು ಪರಂಪರೆಯಾಗಿದ್ದರೂ, ಈಚಿನ ದಿನಗಳಲ್ಲಿ ಜೋಳದ ಕಿಚಡಿ ಮಾಡುವವರು ಹಾಗೂ ಅದನ್ನು ಊಟ ಮಾಡುವವರ ಸಂಖ್ಯೆ ತೀರ ಕಡಿಮೆ.
ಹೀಗಿದ್ದರೂ ಬೆನಕಟ್ಟಿ ಗ್ರಾಮದಲ್ಲಿ ಜೋಳದ ಕಿಚಡಿಯ ಪರಂಪರೆ ಅನೇಕ ಕುಟುಂಬಗಳಲ್ಲಿ ಈಗಲೂ ಮುಂದುವರೆದಿದೆಯಾದರೂ ಈ ಆಷಾಢಪರ್ವದ ದಿನ ಮಾತ್ರ ಎಲ್ಲರ ಮನೆಯಲ್ಲೂ ಕಿಚಡಿ ತಯಾರಾಗುತ್ತದೆ.
ಹಬ್ಬದ ಹಿನ್ನೆಲೆ: ಮಳೆ-ಬೆಳೆ ಚೆನ್ನಾಗಿ ಬರಲಿ, ರೈತಾಪಿ ಜನಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಎಂಕಂಚೆಪ್ಪ (ಕಂಚಿ ವೆಂಕಟೇಶ)ನಿಗೆ ಕಿಚಡಿಯ ನೈವೇದ್ಯ ಸಮರ್ಪಿಸುವುದು ಈ ಹಬ್ಬದ ವೈಶಿಷ್ಟ್ಯತೆ ಎಂದು ಹೇಳಲಾಗುತ್ತಿದೆಯಾದರೂ, ಮತ್ತೊಂದು ಐತಿಹ್ಯದ ಪ್ರಕಾರ, ಗೋ ಪಾಲಕರು ಗೋವರ್ಧನ ಗಿರಿಯಲ್ಲಿ ಗೋವುಗಳನ್ನು ಮೇಯಿಸುತ್ತಿರಬೇಕಾದರೆ ದೇವೇಂದ್ರ ಅವರ ಮೇಲೆ ಕಲ್ಲಿನ ಮಳೆಗರೆದನಂತೆ. ಆಗ ಶ್ರೀಕೃಷ್ಣ ಗೋವರ್ಧನ ಗಿರಿಯನ್ನೇ ತನ್ನ ಕೈಯಿಂದ ಮೇಲಕ್ಕೆ ಎತ್ತಿ ಹಿಡಿದು ಗೋಪಾಲಕರನ್ನು ರಕ್ಷಿಸಿದನಂತೆ. ಅದರ ದ್ಯೋತಕವಾಗಿ ರೈತಾಪಿ ಜನ ಬೆಟ್ಟದ ಮೇಲಿರುವ ಯಂಕಂಚೆಪ್ಪ ದೇವರಿಗೆ ನೈವೇದ್ಯ ಸಮರ್ಪಿಸುವ ದೃಷ್ಠಿಯಿಂದ ಈ ಹಬ್ಬವನ್ನು ಆಚರಿಸುತ್ತಾರೆ ಎಂದು ಹೇಳಲಾಗುತ್ತದೆ.
ಆಷಾಢದ ಹುಣ್ಣಿಮೆಯ ನಂತರದ ಶುಕ್ರವಾರ ನಡೆಯುವ ಈ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ ಗ್ರಾಮದ ಎಲ್ಲರ ಮನೆಗಳಲ್ಲೂ ಗಡಿಗೆಗಳಲ್ಲಿ(ಬಾಂಡಿ) ಜೋಳದ ಕಿಚಡಿ ತಯಾರಿಸಲಾಗುತ್ತದೆ. ಮಧ್ಯಾಹ್ನ ಮನೆಯ ಯುವಕರು ತಲೆಗೆ ರೇಷ್ಮೆ ರುಮಾಲು ಸುತ್ತಿಕೊಂಡು ಕರಿಯ ಕಂಬಳಿ ಹೊದ್ದು ಕಿಚಡಿಯ ಗಡಿಗೆಯನ್ನು ಇಟ್ಟಿರುವ ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಗ್ರಾಮದ ಮಧ್ಯಭಾಗದಲ್ಲಿರುವ ಹನಮಂತ ದೇವರ ದೇವಸ್ಥಾನಕ್ಕೆ ಆಗಮಿಸುತ್ತಾರೆ.
ಅಲ್ಲಿ ಪೂಜೆ ನೆರವೇರಿದ ನಂತರ ಡೊಳ್ಳು, ಭಜನೆ, ಹಲಗೆ ಮತ್ತಿತರ ವಾದ್ಯ ಮೇಳಗಳೊಂದಿಗೆ ಸಾಲು ಸಾಲಾಗಿ ಮೆರವಣಿಗೆಯಲ್ಲಿ ಹೊರಡುವ ಗಡಿಗೆ ಹೊತ್ತ ಪುರುಷರು ಮಾರ್ಗದುದ್ದಕ್ಕೂ ‘ವೆಂಕಟರಮಣ ಗೋವಿಂದಾ.. ಗೋವೀಂದ...! ಎಂಬ ಉದ್ಘೋಷಣೆ ಹಾಕುತ್ತ ಊರ ಹೊರವಲಯದ ಗುಡ್ಡದ ಮೇಲಿರುವ ಕಂಚಿ ವೆಂಕಟೇಶ್ವರ(ಎಂಕಂಚೆಪ್ಪ)ದೇವಸ್ಥಾನಕ್ಕೆ ಆಗಮಿಸುತ್ತಾರೆ.
ದೇವಸ್ಥಾನದ ಮುಂದಿರುವ ಕಟ್ಟೆಯ ಮೇಲೆ ಎಲ್ಲರೂ ತಾವು ತಂದಿರುವ ಕಿಚಡಿಯನ್ನು ರಾಶಿಯಾಗಿ ಸುರಿಯುತ್ತಾರೆ. ಜೊತೆಗೆ ಮನೆಯಿಂದ ತಂದಿರುವ ಕಟ್ಟಿನ ಸಾರು ಹಾಗೂ ಮಜ್ಜಿಗೆ ಸಾರನ್ನು ಊರ ದೈವದ ವತಿಯಿಂದ ತಯಾರಿಸಲಾದ ಸಾರಿನ ಕೊಳಗ(ದೊಡ್ಡಪಾತ್ರೆ)ದಲ್ಲಿ ಹಾಕುತ್ತಾರೆ.
ಕಿಚಡಿ ರಾಶಿಯಾದ ಮೇಲೆ ದೇವರಿಗೆ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ, ಗೋಪಾಳ ತುಂಬಿಸಲಾಗುತ್ತದೆ. ಇದಾದ ನಂತರ ರಾಶಿಯಾಗಿ ಹಾಕಿರುವ ಕಿಚಡಿಯನ್ನು ಬಾಂಡಿ(ಬುಟ್ಟಿಗಳಿಗೆ)ಗೆ ತೋಡಿಕೊಂಡು ಎಲ್ಲರಿಗೂ ಉಣಬಡಿಸುತ್ತಾರೆ. ಗ್ರಾಮದ ಸಮಸ್ತ ಜನ, ಮಕ್ಕಳು, ಪರ ಊರಿನಿಂದ ಬರುವ ಜನ ಪ್ರಸಾದವಾಗಿ ಈ ಜೋಳದ ಕಿಚಡಿ ಊಟದ ಸವಿಯನ್ನು ಸವಿಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.