ಮಹಾಲಿಂಗಪುರ: ಸಹಕಾರಿ ತತ್ವದಿಂದ ಮುನ್ನಡೆದಿರುವ ಸಮೀಪದ ಬಿಸನಾಳ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘವು ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ನೀಡುವ 2024ರ ‘ರಾಷ್ಟ್ರೀಯ ಗೋಪಾಲ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದೆ.
ನವದೆಹಲಿಯಲ್ಲಿ ನ.26ರಂದು ಪಶುಪಾಲನೆ ಮತ್ತು ಹೈನುಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ಹಾಲು ದಿನಾಚರಣೆ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಯು ₹ 5 ಲಕ್ಷ ನಗದು ಬಹುಮಾನ ಹೊಂದಿದೆ. ಪ್ರಶಸ್ತಿಯ ‘ಅತ್ಯುತ್ತಮ ಡೇರಿ ಸಹಕಾರ ಸಂಘ’ದ ವಿಭಾಗದಲ್ಲಿ ಬಿಸನಾಳದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಪ್ರಥಮ ಸ್ಥಾನ ದೊರತಿದೆ.
ಜೋಪಡಿಯಲ್ಲಿ 1993ರ ಜ.16ರಂದು 100 ಜನ ಸದಸ್ಯರಿಂದ ಪ್ರತಿದಿನ 10 ಲೀ ಹಾಲು ಶೇಖರಣೆಯೊಂದಿಗೆ ಪ್ರಾರಂಭವಾದ ಈ ಸಂಘವು ಇಂದು ನಿತ್ಯ 2,200 ಲೀ ಹಾಲು ಸಂಗ್ರಹಣೆ ಮಾಡುತ್ತಿದ್ದು, 200ಕ್ಕೂ ಅಧಿಕ ಸದಸ್ಯರಿದ್ದಾರೆ. ಮಹಾದೇವ ಚಿನಗುಂಡಿ ಅವರು ದಾನವಾಗಿ ನೀಡಿದ ಜಾಗೆಯಲ್ಲಿ 2016ರ ಆಗಸ್ಟ್ 8ರಂದು ನೂತನ ಕಟ್ಟಡಕ್ಕೆ ಸಂಘವು ಸ್ಥಳಾಂತರಗೊಂಡಿದ್ದು, ವಿವಿಧ ಮೂಲಗಳಿಂದ ಸಂಗ್ರಹಿಸಲಾದ ₹ 16.90 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಒಕ್ಕೂಟದಿಂದ 5 ಸಾವಿರ ಲೀ ಸಾಮರ್ಥ್ಯದ ಶಿಥಿಲೀಕರಣ ಘಟಕವನ್ನು ಸಂಘ ಹೊಂದಿದ್ದು, ಪ್ರತಿದಿನ 2200 ಲೀ ಹಾಲು ಸಂಗ್ರಹಣೆ ಜತೆಗೆ ಸುತ್ತಲಿನ ಕೆಸರಗೊಪ್ಪ, ಸೈದಾಪುರ ಸಹಕಾರಿ ಸಂಘಗಳಿಂದಲೂ 2300 ಲೀ ಕ್ಕಿಂತ ಹೆಚ್ಚು ಹಾಲು ಸಂಗ್ರಹಣೆ ಮಾಡಲಾಗುತ್ತದೆ.
ಲಾಭದಲ್ಲಿ ಮುಂದು: 2023-24ನೇ ಸಾಲಿಗೆ ₹ 9.56 ಲಕ್ಷ ನಿವ್ವಳ ಲಾಭ ಹೊಂದಿರುವ ಈ ಸಂಘದಲ್ಲಿ ನಾಲ್ವರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ ಹಾಲು ಸಂಗ್ರಹಣೆ ಮಾಡಿ ಲಾಭ ಪಡೆದುಕೊಳ್ಳದೇ ಸಾಮಾಜಿಕ ಕಾರ್ಯದಲ್ಲೂ ಸಂಘವು ತೊಡಗಿಕೊಂಡಿರುವುದು ವಿಶೇಷ. ಕೋವಿಡ್ ವೇಳೆಯಲ್ಲಿ ಹಾಲು ಉತ್ಪಾದಕ ಸದಸ್ಯರಿಗೆ 1 ಲೀ ಹಾಲಿಗೆ ₹ 1 ಪ್ರೋತ್ಸಾಹದಂತೆ ₹ 1.53 ಲಕ್ಷ ಹಣವನ್ನು ನೀಡಿದೆ. ಅಲ್ಲದೆ, ಆಶಾ ಕಾರ್ಯಕರ್ತರಿಗೆ ಗೌರವಧನ ನೀಡಿದೆ. ಶುದ್ಧ ಹಾಲು ಉತ್ಪಾದನೆಯ ಸಲುವಾಗಿ ಎಲ್ಲ ಹಾಲು ಉತ್ಪಾದಕರಿಗೆ ಸಂಘದಿಂದ ₹ 1.29 ಲಕ್ಷ ವೆಚ್ಚದಲ್ಲಿ ಉಚಿತವಾಗಿ ಸ್ಟೀಲ್ ಕ್ಯಾನ್ ವಿತರಿಸಿದೆ.
ಮಿಶ್ರತಳಿ ಆಕಳು ಮತ್ತು ಕರುಗಳ ಪ್ರದರ್ಶನ ಆಯೋಜನೆ ಮಾಡಿ ಬಹುಮಾನ ನೀಡಿದೆ. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್‍ಸಿಡಿಸಿ)ದ ಡೇರಿ ವಲಯದ ಅತ್ಯುತ್ತಮ ಪ್ರಾಥಮಿಕ ಸಹಕಾರಿಗಳ ವಿಭಾಗದ ಪ್ರಶಸ್ತಿಯೂ ಇದಕ್ಕೆ ದೊರಕಿದೆ.
ಬೋನಸ್ ವಿತರಣೆ: ನೆರೆ ಹಾವಳಿಯಿಂದ ಬಾಧಿತವಾದ ಢವಳೇಶ್ವರ ಹಾಗೂ ನಂದಗಾಂವ ಗ್ರಾಮಗಳಲ್ಲಿ ರಾಸುಗಳಿಗೆ ಆಹಾರ ವಿತರಿಸುವ ಕಾರ್ಯವನ್ನು ಸಂಘ ಮಾಡಿದೆ. ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಸಾಧನೆ ಮಾಡುವ ಸಂಘದ ಸದಸ್ಯರ ಮಕ್ಕಳಿಗೆ ಸಂಘದ ವಾರ್ಷಿಕ ಸಭೆಯಲ್ಲಿ ಪ್ರತಿ ವರ್ಷ ನಗದು ರೂಪದಲ್ಲಿ ಬಹುಮಾನ ನೀಡಲಾಗುತ್ತದೆ.
ಮಿಶ್ರ ತಳಿ ಅಭಿವೃದ್ಧಿಗೆ ಜಾನುವಾರುಗಳ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಅಂದಾಜು 500 ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮಾಡುವುದು ಸಂಘದ ಹೆಗ್ಗಳಿಕೆಯಾಗಿದೆ. ಪ್ರತಿ ವರ್ಷ ಸಂಘದ ಲಾಭಾಂಶದಲ್ಲಿ ಹಾಲು ಉತ್ಪಾದಕರಿಗೆ ಶೇ 15ರಷ್ಟು ಡಿವಿಡೆಂಡ್ ಹಾಗೂ ಶೇ 65 ರಷ್ಟು ಬೋನಸ್ ವಿತರಣೆ ಮಾಡಲಾಗುತ್ತದೆ. ಸಂಚಾರಿ ವಾಹನದ ಮೂಲಕ ರೈತರ ಮನೆಗೆ ತೆರಳಿ ಹಾಲು ಶೇಖರಣೆ ಮಾಡಲಾಗುತ್ತದೆ.
ಹಾಲು ಉತ್ಪಾದಕರ ಸಂಘ ಸ್ಥಾಪಿಸಿ ಎಲ್ಲರಿಗೂ ನೆರವಾಗಬೇಕು ಎಂಬ ಹಿರಿಯರು ಕಂಡುಕೊಂಡ ಕನಸು ಸಾಕಾರಗೊಂಡು ಇದೀಗ ಹೆಮ್ಮರವಾಗಿ ಬೆಳೆದಿದ್ದು ಸದಸ್ಯರ ಪ್ರೋತ್ಸಾಹವೇ ಸಂಘದ ಬೆಳವಣಿಗೆಗೆ ಕಾರಣ.ಶಿವಲಿಂಗಪ್ಪ ವಾಲಿ, ಅಧ್ಯಕ್ಷರು, ಬಿಸನಾಳ ಹಾಲು ಉತ್ಪಾದಕರ ಸಹಕಾರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.