ADVERTISEMENT

ಬಾದಾಮಿ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಕಳೆದ ವರ್ಷ ಬರ, ಈ ಬಾರಿ ನೆರೆ– ಪ್ರವಾಹ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 13:31 IST
Last Updated 6 ಆಗಸ್ಟ್ 2024, 13:31 IST
ನವಿಲುತೀರ್ಥ ಜಲಾಶಯದಿಂದ ಹೆಚ್ಚುವರಿ ನೀರನ್ನು ಮಲಪ್ರಭಾ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ನದಿ ದಂಡೆಯ ಮುಮರಡ್ಡಿಕೊಪ್ಪ ಗ್ರಾಮದ ಹೊಲಗಳಲ್ಲಿ ಬೆಳೆಯು ಸಂಪೂರ್ಣವಾಗಿ ಜಲಾವೃತವಾಗಿದೆ.
ನವಿಲುತೀರ್ಥ ಜಲಾಶಯದಿಂದ ಹೆಚ್ಚುವರಿ ನೀರನ್ನು ಮಲಪ್ರಭಾ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ನದಿ ದಂಡೆಯ ಮುಮರಡ್ಡಿಕೊಪ್ಪ ಗ್ರಾಮದ ಹೊಲಗಳಲ್ಲಿ ಬೆಳೆಯು ಸಂಪೂರ್ಣವಾಗಿ ಜಲಾವೃತವಾಗಿದೆ.   

ಬಾದಾಮಿ: ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಹೆಚ್ಚುವರಿ ನೀರನ್ನು ಬಿಟ್ಟಿರುವ ಕಾರಣದಿಂದ ನದಿ ದಂಡೆಯ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆಗಳಿಗೆಲ್ಲ ಹಾನಿಯಾಗಿವೆ.

ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ಚಿರ್ಲಕೊಪ್ಪ, ಹಾಗನೂರು, ಎಸ್.ಕೆ.ಆಲೂರ, ಬೀರನೂರ, ಗೋವಿನಕೊಪ್ಪ, ಜಕನೂರ, ಮುಮರಡ್ಡಿಕೊಪ್ಪ, ಕಿತ್ತಲಿ, ಸುಳ್ಳ, ಹೆಬ್ಬಳ್ಳಿ, ನೀರಲಗಿ, ಬೂದಿಹಾಳ, ಖ್ಯಾಡ, ಕಾತರಕಿ, ಚೊಳಚಗುಡ್ಡ , ನಸಬಿ ಗ್ರಾಮಗಳ ರೈತರ ಜಮೀನಿನಲ್ಲಿ ಬೆಳೆದ ಹೆಸರು ಮತ್ತು ಮೆಕ್ಕೆಜೋಳ ಹಾನಿಯಾಗಿದೆ.

‘ಹ್ವಾದ ವರ್ಸ ಮಳಿ ಆಗಲಿಲ್ಲ ಬರ ಬಿತ್ತು ಬೆಳಿ ಬರಲಿಲ್ಲ. ಈ ವರ್ಸ್ ಮಳಿ ಚೊಲೋ ಆಗಿತ್ತು ಪೀಕು ಕೈಗೆ ಬಂದಿದ್ದುವು. ಆದರ ಹೆಚ್ಚಿನ ನೀರು ನದಿಗೆ ಬಿಟ್ಟರು ಬೆಳಿ ಎಲ್ಲಾ ಹಾಳಾದೂವು. ಹಿಂಗಾದ್ರ ರೈತರು ಹ್ಯಾಂಗ್ ಬದಕಬೇಕು ತಿಳಿವಲ್ಲದು ’ ಎಂದು ಮುಮರಡ್ಡಿಕೊಪ್ಪ ಗ್ರಾಮದ ರೈತ ವೀರಬಸಯ್ಯ ಹಳ್ಳೂರ ಬೇಸರಿಸಿದರು.

ADVERTISEMENT

ಪ್ರಾಥಮಿಕ ವರದಿಯಂತೆ ತಾಲ್ಲೂಕಿನಲ್ಲಿ ಇದುವರೆಗೆ ನದಿ ದಂಡೆಯ ರೈತರ ಅಂದಾಜು 2,470 ಹೆಕ್ಟೇರ್ ಕ್ಷೇತ್ರದಲ್ಲಿನ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇನ್ನೂ ಹಾನಿ ಹೆಚ್ಚಾಗಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಬೆಳೆಹಾನಿಯಾದ ರೈತರಿಗೆ ಗೊಬ್ಬರ , ಬೀಜ , ಔಷಧ ಮತ್ತು ಕಾರ್ಮಿಕರ ವೆಚ್ಚ ಸೇರಿದಂತೆ ಸರ್ಕಾರ ರೈತರಿಗೆ ವೈಜ್ಞಾನಿಕವಾಗಿ ಬೆಲೆಯ ಪರಿಹಾರವನ್ನು ಕೊಡಬೇಕು ’ ಎಂದು ರೈತ ಸಂಘದ ಅಧ್ಯಕ್ಷ ಅಶೋಕ ಸಾತನ್ನವರ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.