ಪ್ರಜಾವಾಣಿ ವಾರ್ತೆ
ಗುಳೇದಗುಡ್ಡ: ‘ಮನುಷ್ಯನು ಗುರುವಿನ ಮಾರ್ಗದರ್ಶನದಲ್ಲಿ ನಡೆದು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಲ್ಲರಿಗೂ ತಾಯಿಯೇ ನಿಜವಾದ ದೇವರು ಹಾಗೂ ಮೊದಲ ಗುರುವಾಗಿದ್ದಾಳೆ’ ಎಂದು ನಿಜಗುಣಪ್ರಭು ತೋಂಟದಾರ್ಯ ಶ್ರೀ ಹೇಳಿದರು.
ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ದ ಪಟ್ಟದಾರ್ಯ ಶ್ರೀಗಳ 39ನೇ ವಾರ್ಷಿಕ ಪುಣ್ಯಾರಾಧನೆಯ ಅಂಗವಾಗಿ ಏರ್ಪಡಿಸಿರುವ ಮಾಸಿಕ ಪ್ರವಚನದ ಆರನೇ ದಿನವಾದ ಬುಧವಾರ ಪ್ರವಚನ ನೀಡಿದ ಅವರು, ‘ಮನುಷ್ಯನ ಜೀವನದಲ್ಲಿ ಮೂವರು ಗುರುಗಳಿದ್ದಾರೆ. ಮೊದಲು ಗುರು ತಾಯಿ, ಅವಳು ಮಗುವಿಗೆ ತನುವಿನಿಂದ ಪೂಷಿಸುತ್ತಾಳೆ’ ಎಂದರು.
‘ಎರಡನೇ ಗುರು ಪ್ರಾಥಮಿಕ ಶಾಲೆ ಶಿಕ್ಷಕ. ಮಗು ಬಾಲ್ಯದಲ್ಲಿ ಶಾಲೆಗೆ ಬಂದಾಗ ಖಾಲಿ ಪುಟವೆಂಬ ಮನಸ್ಸಿನಲ್ಲಿ ಬೋಧನೆ ಮಾಡಿ ಬದುಕು ರೂಪಿಸುತ್ತಾನೆ. ಮೂರನೇ ಗುರು ಆತ್ಮ. ಅದು ತನ್ನ ಅರಿವು ತನಗೆ ಗುರುವಾಗಬೇಕು. ಅಧ್ಯಾತ್ಮ ಗುರು ಮುಖ್ಯವಾಗುತ್ತಾರೆ, ಮಾನವನ ಪರಿಪೂರ್ಣ ಜೀವನ ರೂಪಿಸುವಲ್ಲಿ ಗುರುವಿನ ಪಾತ್ರ ಮುಖ್ಯವಾಗಿದೆ. ಅದಕ್ಕೆ ‘ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೂ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ’ ಎಂದು ಹೇಳಿದರು.
‘ಮನುಷ್ಯ ಪ್ರತಿದಿನ ತನ್ನ ಸ್ವಾರ್ಥಕ್ಕೆ ಕೆಟ್ಟ ಕೆಲಸ ಮಾಡುತ್ತಾನೆ, ಸುಳ್ಳು, ಮೋಸ, ವಂಚನೆ ಮಾಡುತ್ತಾನೆ. ಅದನ್ನು ಬಿಟ್ಟು, ಗುರು ತೋರಿದ ಬೆಳಕಿನ ಹಾದಿಯಲ್ಲಿ ಶಿಷ್ಯ ನಡೆಯಬೇಕು. ಮನುಷ್ಯ ಪಕ್ಷಿಯಂತೆ ಹಾರಲು, ಮೀನಿನಂತೆ ಈಜಲು ಕಲಿತ ಆದರೆ ಮನುಷ್ಯ, ಮನುಷ್ಯನಾಗಿ ಬಾಳಲು ಕಲಿಯಲಿಲ್ಲ ಎಂದು ಸರ್ವಪಲ್ಲಿ ರಾಧಾಕೃಷ್ಣನ್ ಹೇಳಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.