ಕೂಡಲಸಂಗಮ : ಬಸವಣ್ಣನನ್ನು ಕೇಂದ್ರವಾಗಿಟ್ಟುಕೊಂಡು 12ನೇ ಶತಮಾನದ ಶರಣ ಸಂಕುಲ, ವಚನಗಳನ್ನು ಕಪ್ಪು ಬಿಳುಪು ಚಿತ್ರ, ವರ್ಣಚಿತ್ರ, ಉಬ್ಬುಶಿಲ್ಪ, ಶಿಲ್ಪಗಳ ಮೂಲಕ ಇಂದಿನ ಯುವ ಜನಾಂಗಕ್ಕೆ ಪರಿಚಯಿಸಲು ಕೂಡಲಸಂಗಮದಲ್ಲಿ ಬಸವ ಕಲಾ ಮ್ಯೂಸಿಯಂ ಸಿದ್ದಗೊಂಡಿದೆ.
ಬಸವಾದಿ ಶರಣರ ತತ್ವಪ್ರಸಾರಕ್ಕೆ ಆರಂಭವಾದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಮೂರು ದಶಕ ಕಳೆಯಲು ಬಂದರೂ ಬಸವಾದಿ ಶರಣರ ತತ್ವ, ಚಿಂತನೆಗಳನ್ನು ಪರಿಚಯಿಸದೇ ಭೌತಿಕ ಕಟ್ಟಡಗಳ ಕೇಂದ್ರವಾಗಿಸಿತು. ಬಸವಣ್ಣನ ವಿದ್ಯಾಭೂಮಿ, ಐಕ್ಯಕ್ಷೇತ್ರ ಎಂದು ಬಂದ ಭಕ್ತರು ಬಸವಣ್ಣನ ಐಕ್ಯ ಮಂಟಪ ವೀಕ್ಷಿಸಿ, ಕ್ಷೇತ್ರಾಧಿಪತಿ ಸಂಗಮನಾಥನ ದರ್ಶನ ಪಡೆದು ಮರಳುತಿದ್ದರು. ಭೌತಿಕ ಕಟ್ಟಡಗಳಿಗಿಂತ ಬೌದ್ಧಿಕ ಸಾಹಿತ್ಯವೇ ಶ್ರೇಷ್ಠ ಎಂದು ನಂಬಿದ ಶರಣರ ತತ್ವ ಸಂದೇಶಗಳ ಪ್ರಸಾರ ಕಾರ್ಯವನ್ನು ಕಲಾವಿದ ಬಸವರಾಜ ಅನಗವಾಡಿ ಇಲ್ಲಿ ಮಾಡಿದ್ದಾರೆ.
1659 ಚದರ ಅಡಿಯಲ್ಲಿರುವ ಈ ಮ್ಯೂಸಿಯಂನಲ್ಲಿ ಬಸವಣ್ಣನವರ ಜೀವನ, ಸಾಧನೆ, ವಚನಗಳು ಹಾಗೂ ಶರಣರ ಸಂದೇಶಗಳನ್ನು ದೃಶ್ಯಗಳಲ್ಲಿ ಅನಾವರಣ ಮಾಡಲಾಗಿದೆ. ವಚನಗಳನ್ನು ತಿಳಿಸುವ ವರ್ಣಚಿತ್ರಗಳು, ಬಸವಣ್ಣನೇ ಎಲ್ಲ ಶರಣರಿಗೆ ಉಸಿರು, ವಿಶ್ರಾಂತಿಯಲ್ಲಿರುವ ಬಸವಣ್ಣನ ಬೃಹತ್ ಕಪ್ಪು ಬಿಳುಪು ಚಿತ್ರಗಳು, ವಚನಗಳನ್ನು ತಿಳಿಸುವ 55 ಉಬ್ಬು ಶಿಲ್ಪಗಳು, ಬೃಹತ್ ಅನುಭವ ಮಂಟಪದ ಉಬ್ಬುಶಿಲ್ಪ, ಬಸವಪೂರ್ವ ಯುಗದ ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆ, ಬಸವಣ್ಣ ಈ ವ್ಯವಸ್ಥೆ ಬದಲಾಯಿಸಲು ಪಟ್ಟ ಪರಿಶ್ರಮದ ಅನಾವರಣದ 180 ಶಿಲ್ಪಗಳು ಮ್ಯೂಸಿಯಂಗೆ ಮೆರುಗುಕೊಟ್ಟಿವೆ.
ಏಳು ವಿಭಾಗದಲ್ಲಿರುವ ಈ ಮ್ಯೂಸಿಯಂಅನ್ನು ಒಂದು ಬಾರಿ ನೋಡಿ ಬಂದರೆ 12ನೇ ಶತಮಾನದಲ್ಲಿ ಶರಣರ ಬದುಕು ಅನುಭವಕ್ಕೆ ಬರುವುದು. ಬಸವಣ್ಣನ ಜೀವನದ ಆರಂಭ, ಅಂತ್ಯ ಕೂಡಲಸಂಗಮವಾಗಿದ್ದು, ಬಸವಣ್ಣನಿಗೆ ಕೂಡಲಸಂಗಮ ಸುವರ್ಣಭೂಮಿಯಾಗಿತ್ತು ಎಂಬ ಸಂದೇಶ ಇಲ್ಲಿದೆ. ಬೃಹತ್ ಅನುಭವ ಮಂಟಪ ಮ್ಯೂಸಿಯಂನ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. 2,195 ಚದರ ಅಡಿಯಲ್ಲಿ ನಿರ್ಮಾಣವಾದ ಅನುಭವ ಮಂಟಪ ಕಲಾಕೃತಿಯಲ್ಲಿ 270 ಶಿವಶರಣರು ಒಂದೆಡೆ ಸೇರಿರುವ ಹಾಗೂ ಅಕ್ಕಮಹಾದೇವಿ, ಅಲ್ಲಮಪ್ರಭು, ಬಸವಣ್ಣ ಸಂವಾದದಲ್ಲಿ ತೊಡಗಿರುವುದು, ಅವರೊಂದಿಗೆ ಚರ್ಚಿಸುತ್ತಿರುವ 75 ಶರಣರ ಬೃಹತ್ ಕಲಾಕೃತಿಯು 12ನೇ ಶತಮಾನದ ಅನುಭವ ಮಂಟಪಕ್ಕೆ ಕರೆದುಕೊಂಡು ಹೋಗುವುದನ್ನು ಒಳಗೊಂಡಿದೆ.
ನಾಡಿನ ವಿವಿಧ ಕಲಾವಿದರ ಕೈಯಲ್ಲಿ ಅರಳಿದ ಬಸವಣ್ಣನ 175 ವರ್ಣಚಿತ್ರಗಳು, 45 ಛಾಯಾಚಿತ್ರಗಳೂ ಇವೆ. ಭಾಗ 7ರಲ್ಲಿ ಬಸವಪೂರ್ವಯುಗದ ಸಾಮಾಜಿಕ ವ್ಯವಸ್ಥೆಯ ಅನಾವರಣ ಇದೆ. 2 ರಿಂದ 3 ಗಂಟೆಗಳ ಕಾಲ ವೀಕ್ಷಿಸಬಹುದು. ಈ ಮ್ಯೂಸಿಯಂ ಬಸವಾದಿ ಶರಣರನ್ನು ಪರಿಚಯಿಸಿ, ವಚನಗಳ ಜ್ಞಾನದ ಅರಿವು ಮೂಡಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.