ಬಾಗಲಕೋಟೆ: ನಗರದ ಐಡಿಬಿಐ ಬ್ಯಾಂಕ್‌ನಲ್ಲಿ ನಡೆದ ಪ್ರವಾಸೋದ್ಯಮ ಇಲಾಖೆಯ ಹಣ ಅಕ್ರಮ ವರ್ಗಾವಣೆ ಹಗರಣ ಪ್ರಕರಣವು ಈಗ ಪಂಚಾಯತ್ ರಾಜ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೂ ವಿಸ್ತರಿಸಿದೆ. ಎರಡೂ ಇಲಾಖೆಗಳ ಒಟ್ಟು ₹1.66 ಕೋಟಿ ಅನುದಾನ ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿದೆ.
2023 ಮತ್ತು 2024ನೇ ಸಾಲಿನಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ₹86.40 ಲಕ್ಷ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ₹79.75 ಲಕ್ಷ ಹಣ ವರ್ಗಾವಣೆಯಾಗಿದೆ. ಇದಕ್ಕೂ ಮೊದಲು ಇದೇ ಬ್ಯಾಂಕ್‌ನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ ₹2.47 ಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿತ್ತು.
ಹಣ ವರ್ಗಾವಣೆ ಹೇಗೆ?:
‘ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆಗೆ ಕೋರಿ ಇಲಾಖೆ ನೀಡಿದ್ದ ಪತ್ರದ ಇಲಾಖೆಯ ಹೆಡ್ಡಿಂಗ್ ಮತ್ತು ಸಹಿ ತುಂಡರಿಸಿಕೊಂಡು, ಬಿಳಿ ಹಾಳೆಯ ಮೇಲೆ ಕಲರ್ ಪ್ರಿಂಟ್ ತೆಗೆದುಕೊಳ್ಳುತ್ತಿದ್ದರು. ಬೇಕಾದ ಮೊತ್ತ ಬರೆದುಕೊಂಡು ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು’ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಖಾತೆ ತೆರೆದದ್ದು ಯಾಕೆ?:
ಸರ್ಕಾರದ ವಿವಿಧ ಕಚೇರಿಗಳಿಗೆ ತೆರಳುತ್ತಿದ್ದ ಐಡಿಬಿಐ ಬ್ಯಾಂಕ್‌ನ ಪ್ರತಿನಿಧಿ, ‘ಉತ್ತಮ ಸೇವೆ ನೀಡುತ್ತೇವೆ. ನಮ್ಮ ಬ್ಯಾಂಕ್‌ನಲ್ಲೇ ಖಾತೆ ತೆರೆಯಿರಿ’ ಎಂದು ಕೋರುತ್ತಿದ್ದರು. ಕಚೇರಿಗೆ ಬೇಕಾದ ಕುರ್ಚಿ, ಮೇಜು, ಕಂಪ್ಯೂಟರ್‌ನಂತಹ ವಸ್ತುಗಳನ್ನು ನೀಡುವುದಾಗಿ ಆಮಿಷ ಒಡ್ಡುತ್ತಿದ್ದರು.
‘ಖಾತೆ ತೆರೆದ ಬಳಿಕ ಬ್ಯಾಂಕ್‌ನ ಸಿಬ್ಬಂದಿಯೇ ಪ್ರತಿ ತಿಂಗಳು ಇಲಾಖೆ ಅಧಿಕಾರಿಗಳಿಗೆ ಸ್ಟೇಟ್‌ಮೆಂಟ್ ತಲುಪಿಸುತ್ತಿದ್ದರು. ಖಾತೆಯಲ್ಲಿನ ಹಣ ವರ್ಗಾವಣೆ ಮಾಡಿದ್ದರೂ, ಹಣ ಖಾತೆಯಲ್ಲಿದ್ದಂತೆಯೇ ನಕಲಿ ದಾಖಲೆ ಸೃಷ್ಟಿಸುತ್ತಿದ್ದರು. ಅದನ್ನೇ ನಂಬಿದ್ದರಿಂದ ಹಣ ವರ್ಗಾವಣೆಯಾಗಿರುವುದು ಇಲಾಖೆಯ ಅಧಿಕಾರಿಗಳಿಗೆ ಗೊತ್ತಾಗುತ್ತಿರಲಿಲ್ಲ. ಸರ್ಕಾರದ ವಿವಿಧ ಇಲಾಖೆ ತೆರೆದಿರುವ ಖಾತೆಗಳನ್ನು ಪರಿಶೀಲಿಸುತ್ತಿದ್ದರು. ಎರಡು ವರ್ಷಗಳಿಂದ ಚಾಲ್ತಿಯಿರದ ಖಾತೆಯನ್ನು ಗುರುತಿಸಿ, ಅಂತಹ ಖಾತೆಗಳಿಂದ ಹಣ ತೆಗೆಯುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೆರಡು ಇಲಾಖೆಗಳಲ್ಲಿ ಸಿಗದ ಲೆಕ್ಕ:
ಪ್ರವಾಸೋದ್ಯಮ ಇಲಾಖೆಯ ಮಾದರಿಯಲ್ಲೇ ಜವಳಿ ಹಾಗೂ ಕೈಮಗ್ಗ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲೂ ಹಣ ಅಕ್ರಮ ವರ್ಗಾವಣೆಯಾಗಿದೆ. ಆದರೆ, ಎಷ್ಟು ಮೊತ್ತ ವರ್ಗಾವಣೆಯಾಗಿದೆ ಎಂಬ ಲೆಕ್ಕ ಇಲಾಖೆ ಅಧಿಕಾರಿಗಳಿಗೆ ಇನ್ನೂ ಸಿಕ್ಕಿಲ್ಲ.
ಸಹಾಯಕ ವ್ಯವಸ್ಥಾಪಕಿ ಬಂಧನ
ಸರ್ಕಾರದ ವಿವಿಧ ಇಲಾಖೆಗಳ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಗುರುವಾರ ಐಡಿಬಿಐ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕಿ ಸರಸ್ವತಿ ಎಂಬವರನ್ನು ಬಂಧಿಸಲಾಗಿದೆ. ಬ್ಯಾಂಕ್ ಸಿಬ್ಬಂದಿ ಸೂರಜ್ ಸಗರ, ರೋಹಿತ್ ಜತೆಗೆ ಸೂರಜ್‌ನ ಆರು ಜನ ಸ್ನೇಹಿತರನ್ನು ಈಗಾಗಲೇ ಬಂಧಿಸಲಾಗಿದೆ.
ಸರ್ಕಾರದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ಬಂಧನವಾಗಿದೆ. ಉಳಿದವರ ಬಂಧನಕ್ಕೆ ಶೋಧ ನಡೆದಿದೆಅಮರನಾಥ ರೆಡ್ಡಿ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ, ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.