ಕೂಡಲಸಂಗಮ: ಕೂಡಲಸಂಗಮದಿಂದ ಐಹೊಳೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 44ರ ಬೆಳಗಲ್ಲ ಕ್ರಾಸ್ ದಿಂದ ಅಮೀನಗಡ ದವರೆಗಿನ 14 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು ನಿತ್ಯ ಪ್ರವಾಸಿಗರು, ಸ್ಥಳೀಯರು ಸಂಚರಿಸಲು ಹರಸಾಹಸ ಪಡುವರು.
14 ಕಿ.ಮೀ ರಸ್ತೆ ಮಾರ್ಗದಲ್ಲಿ ಹಡಗಲಿ, ಮೇದನಾಪೂರ, ಚಿತ್ತರಗಿ, ಕಿರಸೂರ, ಹುಲಿಗನಾಳ, ಗಂಗೂರ ಗ್ರಾಮಗಳು ಇದ್ದು, ಈ ಗ್ರಾಮದ ಜನ ನಿತ್ಯದ ಕೆಲಸಗಳಿಗೆ ಅಮೀನಗಡಕ್ಕೆ ಹೋಗುತ್ತಾರೆ. ಅಮೀನಗಡದ ದನ, ಕುರಿಗಳ ಸಂತೆಗೆ ವಿಜಯಪುರ ಜಿಲ್ಲೆಯ ಜನ ಹಾಗೂ ಕೂಡಲಸಂಗಮ ಭಾಗದ ಜನ ಈ ಮಾರ್ಗದ ಮೂಲಕವೇ ಹೋಗಬೇಕು.
ಕಿರಸೂರ-ಗಂಗೂರ ಬಳಿಯಂತೂ ವಾಹನ ಸಂಚರಿಸಲು ಚಾಲಕರು ಹರಸಾಹಸ ಪಡುವಂತಾಗಿದೆ. ಮಳೆ ಬಂದಾಗ ರಸ್ತೆಯ ತಗ್ಗು ಗುಂಡಿಗಳು ಸಂಪೂರ್ಣ ನೀರು ತುಂಬಿಕೊಂಡು ಸಂಚರಿಸಲು ಆಗದ ಸ್ಥಿತಿ ನಿರ್ಮಾಣವಾಗುವುದು. ದ್ವಿ ಚಕ್ರವಾಹನ ಸವಾರರು ಸ್ವಲ್ಪ ಆಯ ತಪ್ಪಿದರೆ ಬೀಳುವುದು ಖಚಿತ ಎನ್ನುವಂತ ಸ್ಥಿತಿ ಈ ಮಾರ್ಗದಲ್ಲಿ ನಿರ್ಮಾಣವಾಗಿದೆ.
ಸ್ಥಳೀಯರು ಈ ಮಾರ್ಗದಲ್ಲಿ ಸಂಚರಿಸದೇ ಅಮೀನಗಡದಿಂದ ಹುನಗುಂದಕ್ಕೆ ಬಂದು ಹುನಗುಂದದಿಂದ ರಾಷ್ಟ್ರೀಯ ಹೆದ್ದಾರಿ 50ರ ಮೂಲಕ ಕೂಡಲಸಂಗಮಕ್ಕೆ ಹೋಗುತ್ತಾರೆ. 21 ಕಿ.ಮೀ ಅಂತರದ ಸ್ಥಳಕ್ಕೆ 31 ಕಿ.ಮೀ ಕ್ರಮಿಸಬೇಕಾಗಿದೆ. ಇದರಿಂದ ಸಮಯ, ಹಣವು ವ್ಯರ್ಥವಾಗುತ್ತಿದೆ.
ದೂರದಿಂದ ಬಂದ ಪ್ರವಾಸಿಗರು ಈ ಮಾರ್ಗದಲ್ಲಿ ಸಂಚರಿಸಿ ತೊಂದರೆ ಅನುಭವಿಸಿ ಇಲ್ಲಿಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುವ ದೃಶ್ಯ ನಿತ್ಯವು ಈ ಮಾರ್ಗದಲ್ಲಿ ಕಾಣಬಹುದಾಗಿದೆ.
ಈ ಕುರಿತು ಮಾಹಿತಿ ಪಡೆಯಲು ಹುನಗುಂದ ಲೋಕೋಪಯೋಗಿ ಇಲಾಖೆ ಎಇಇ ವೆಂಕಟೇಶ ಹೂಲಗೇರಿಯವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.
3 ವರ್ಷದಿಂದ ರಸ್ತೆ ದುರಸ್ತಿ ಮಾಡಿಸದೇ ಇರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಕಾರ್ಯ ಮಾಡಿಸಬೇಕುಸಂಜು ಗೌಡರ ಅಧ್ಯಕ್ಷ ಕರವೇ ಕೂಡಲಸಂಗಮ ಘಟಕ
ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಿ
ಈ ರಸ್ತೆ ಸಂಪೂರ್ಣ ಹಾಳಾಗಿದೆ ರಸ್ತೆಯಲ್ಲಿ ತೆಗ್ಗು ಗುಂಡಿಗಳಿದ್ದು ಕಾರಗಳು ಸಂಚರಿಸಲು ಬಹಳ ತೊಂದರೆಯಾಗುವುದು. 14 ಕಿ.ಮೀ ಕ್ರಮಿಸಲು ವಾಹನ ಸವಾರರು ಹರಸಾಹಸ ಪಡಬೇಕು. ಕೂಡಲೇ ರಸ್ತೆ ದುರಸ್ತಿ ಮಾಡಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಿ. ಈ ರಸ್ತೆಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ಒಂದು ಬಾರಿ ಪ್ರಯಾಣಿಸಿ ಅದರ ಅನುಭವವಾಗುತ್ತದೆ ಎಂದು ಹಾವೇರಿಯ ಪ್ರವಾಸಿ ಪ್ರವೀಣ ನರಗುಂದ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.