ADVERTISEMENT

ರಾಂಪುರ: ಹೆಸರು, ತೊಗರಿ ಬಿತ್ತನೆ ಪ್ರಾರಂಭ

ಮುಂಗಾರು ಪೂರ್ವ ಉತ್ತಮ ಮಳೆ: ಬಿತ್ತನೆಗೆ ಹದವಾದ ಭೂಮಿ

ಪ್ರಕಾಶ ಬಾಳಕ್ಕನವರ
Published 6 ಜೂನ್ 2024, 4:31 IST
Last Updated 6 ಜೂನ್ 2024, 4:31 IST
ಬಾಗಲಕೋಟೆ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ರೈತರೊಬ್ಬರು ತೊಗರಿ ಬಿತ್ತನೆ ಮಾಡಿದರು
ಬಾಗಲಕೋಟೆ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ರೈತರೊಬ್ಬರು ತೊಗರಿ ಬಿತ್ತನೆ ಮಾಡಿದರು   

ರಾಂಪುರ: ಬಾಗಲಕೋಟೆ ತಾಲ್ಲೂಕಿನ ಶಿರೂರ, ಕಲಾದಗಿ ಹಾಗೂ ರಾಂಪುರ ವಲಯದಲ್ಲಿ ವಾರದಲ್ಲಿ ಉತ್ತಮ ಮಳೆ ಬಂದಿರುವ ಕಾರಣ ರೈತರು ಮುಂಗಾರು ಬಿತ್ತನೆ ಆರಂಭಿಸಿದ್ದಾರೆ.

ಮೇ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ಬಿತ್ತನೆಗೆ ಭೂಮಿ ಹದವಾಗಿದೆ. ಹೀಗಾಗಿ ರೈತರು ಬಿತ್ತನೆಯ ಬೀಜ, ಗೊಬ್ಬರ ಪಡೆಯಲು ರೈತ ಸಂಪರ್ಕ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲಿತ್ತಿದ್ದಾರೆ. ಹೆಸರು, ತೊಗರಿ ಬೀಜಗಳಿಗೆ ಬೇಡಿಕೆ ಹೆಚ್ಚಿದ್ದು, ಸೂರ್ಯಕಾಂತಿ ಹಾಗೂ ಗೋವಿನಜೋಳದ ಬೀಜಗಳನ್ನು ರೈತರು ಪಡೆಯುತ್ತಿದ್ದಾರೆ.

ಕೃಷಿ ಇಲಾಖೆ ತಾಲ್ಲೂಕಿನಲ್ಲಿ ಈ ವರ್ಷ ಮುಂಗಾರು ಹಂಗಾಮಿಗೆ 23,735 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈಗಾಗಲೇ ಅನೇಕ ಕಡೆಗಳಲ್ಲಿ ರೈತರು ಹೆಸರು, ತೊಗರಿ ಬಿತ್ತನೆ ಮಾಡಿದ್ದಾರೆ. ಶಿರೂರ ಹಾಗೂ ಕಲಾದಗಿ ಭಾಗದ ಹಳ್ಳಿಗಳಲ್ಲಿ ಹೆಚ್ಚಾಗಿ ಹೆಸರು ಬಿತ್ತನೆಯಾಗುತ್ತಿದ್ದರೆ, ರಾಂಪುರ ಭಾಗದಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ತೊಗರಿ ಬಿತ್ತುತ್ತಾರೆ.

ADVERTISEMENT

ಇಲಾಖೆಯ ಪ್ರಕಾರ ಬಾಗಲಕೋಟೆ ತಾಲ್ಲೂಕಿನಲ್ಲಿ (ಕಲಾದಗಿ, ಶಿರೂರ, ರಾಂಪುರ ಭಾಗ ಸೇರಿ) 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯ ಗುರಿಯಿದೆ. ಗೋವಿನಜೋಳ 4,050, ಹೆಸರು 3,500, ಸೂರ್ಯಕಾಂತಿ 1,500 ಹಾಗೂ ಸಜ್ಜಿ 2,750 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ.

ಕಳೆದ 2-3 ವರ್ಷಗಳಲ್ಲಿ ಮುಂಗಾರು ಮಳೆ ಪ್ರಾರಂಭದಲ್ಲಿ ಕೈಕೊಟ್ಟಿದ್ದರಿಂದಾಗಿ ರೈತರಿಗೆ ಹೆಸರು ಬಿತ್ತನೆಗೆ ಅವಕಾಶವೇ ಸಿಕ್ಕಿರಲಿಲ್ಲ. ಈ ವರ್ಷ ಪ್ರಾರಂಭದಲ್ಲೇ ಉತ್ತಮ ಮಳೆಯಾಗಿದ್ದು ಬಿತ್ತನೆಗೆ ಒಳ್ಳೆ ಅವಕಾಶ ಇರುವುದರಿಂದಾಗಿ ಹೆಚ್ಚು ರೈತರು ಹೆಸರು ಬಿತ್ತನೆ ಮಾಡುತ್ತಿದ್ದಾರೆ.

‘ಮೇ ತಿಂಗಳಲ್ಲಿ ತಾಲ್ಲೂಕಿನಲ್ಲಿ 5.3 ಸೆಂ.ಮೀ. ಮಳೆಯಾಗಬೇಕಿತ್ತಾದರೂ ವಾಡಿಕೆಗಿಂತ ಹೆಚ್ಚು, ಅಂದರೆ 9 ಸೆಂ.ಮೀ. ಮಳೆ ಬಂದಿದೆ. ಹೀಗಾಗಿ ಬಿತ್ತನೆ ಮಾಡಲು ರೈತರಿಗೆ ಯಾವುದೇ ಆತಂಕವಿಲ್ಲ. ಜೂನ್ 15ರ ವರೆಗೆ ಹೆಸರು ಬಿತ್ತನೆ ಮಾಡಬಹುದಾಗಿದ್ದು, ತೊಗರಿ ಬಿತ್ತನೆಗೆ ತಿಂಗಳ ಕೊನೆಯವರೆಗೂ ಅವಕಾಶಗಳಿವೆ’ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿಜಿಎಸ್-9 ತಳಿಯ ಹೆಸರು ಬೀಜ ದೊರೆಯುತ್ತಿದ್ದು, ಖಾಸಗಿಯವರಿಂದಲೂ ರೈತರು ಬೀಜ ಖರೀದಿಸಿದ್ದಾರೆ. ಅದರಂತೆ ಟಿಎಸ್3ಆರ್ ತಳಿಯ ತೊಗರಿ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ದೊರೆಯುತ್ತಿವೆ. ಇದರ ಹೊರತಾಗಿಯೂ ರೈತರು ಬೇರೆ ಜಿಲ್ಲೆಗಳಿಂದ ತೊಗರಿ ಬೀಜ ಖರೀದಿಸಿರುವ ಮಾಹಿತಿಯಿದೆ. ಇದರ ಜೊತೆಗೆ ಸಜ್ಜೆ, ಸೂರ್ಯಕಾಂತಿ, ಗೋವಿನಜೋಳ ಬಿತ್ತನೆ ಬೀಜಗಳನ್ನು ಸಹ ಅನೇಕ ರೈತರು ಪಡೆಯುತ್ತಿದ್ದಾರೆ.

ಒಟ್ಟಾರೆ ಈ ಬಾರಿ ಮುಂಗಾರು ಆಶಾದಾಯಕವಾಗಿದ್ದು, ರೈತರು ಉತ್ತಮ ಬೆಳೆಯ ನಿರೀಕ್ಷೆ ಹೊಂದಿದ್ದಾರೆ.

ಬಾಗಲಕೋಟೆ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ರೈತರೊಬ್ಬರು ತೊಗರಿ ಬಿತ್ತನೆ ಮಾಡಿದರು
ಬಾಗಲಕೋಟೆ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ರೈತರೊಬ್ಬರು ತೊಗರಿ ಬಿತ್ತನೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.