ರಬಕವಿ ಬನಹಟ್ಟಿ: ರಬಕವಿ, ಬನಹಟ್ಟಿ, ರಾಮಪುರ ಮತ್ತು ಹೊಸೂರಿನ ನಗರದ ಜನತೆ ಬೀದಿ ಕತ್ತೆ ಮತ್ತು ನಾಯಿಗಳಿಂದ ಹೈರಾಣಾಗಿದ್ದಾರೆ.
ಬೀಡಾಡಿ ಜಾನುವಾರು ಹಾವಳಿ ಇಲ್ಲಿ ನಿತ್ಯದ ಸಮಸ್ಯೆಯಾಗಿದೆ. ಬನಹಟ್ಟಿ ಬಸ್ ನಿಲ್ದಾಣದ ಹತ್ತಿರದ ಜಮಖಂಡಿ–ಕುಡಚಿ ರಾಜ್ಯ ಹೆದ್ದಾರಿಯ ಮೇಲೆ, ತಮ್ಮಣ್ಣಪ್ಪ ಚಿಕ್ಕೋಡಿ ರಸ್ತೆ ಮೇಲೆ ಮತ್ತು ರಬಕವಿಯ ಈಶ್ವರ ಸಣಕಲ್ ರಸ್ತೆ ಮಾರ್ಗದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬೀದಿ ಜಾನುವಾರು ಮಲಗಿಕೊಂಡು ರಸ್ತೆ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿವೆ. ಇದರಿಂದ ಸಾರ್ವಜನಿಕರಿಗೆ, ಬಸ್ ಸಂಚಾರಕ್ಕೆ ಬಹಳ ಸಮಸ್ಯೆಯಾಗಿದೆ.
ಕತ್ತೆಗಳ ಕಾಟವೂ ಹೆಚ್ಚಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ನಗರದ ಪ್ರಮುಖ ಬೀದಿ, ನೂಲಿನ ಗಿರಣಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಕತ್ತೆಗಳು ನಿಂತಿರುತ್ತವೆ. ಸ್ಥಳೀಯ ತಮ್ಮಣ್ಣಪ್ಪ ರಸ್ತೆಯ ಮೇಲೆ ನಗರಸಭೆಯ ಪೌರ ಕಾರ್ಮಿಕರು ಕಸ ವಿಲೇವಾರಿಗಾಗಿ ಕಸ ಸಂಗ್ರಹ ಮಾಡಿರುತ್ತಾರೆ. ಈ ಕಸದ ರಾಶಿಯಲ್ಲಿ ಬಹಳಷ್ಟು ಕತ್ತೆಗಳು ನಿಂತಿರುತ್ತವೆ. ಇದರಿಂದ ದಿನವೂ ಶಾಲೆ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಹಳ ಸಮಸ್ಯೆಯಾಗಿದೆ. ಈ ಕತ್ತೆಗಳು ಪೂರ್ತಿ ರಸ್ತೆಯನ್ನು ಆಕ್ರಮಿಸಿಕೊಂಡಿರುತ್ತವೆ. ತಿರುಗಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಬೀದಿ ನಾಯಿಗಳ ಕಾಟವಂತೂ ಹೇಳತೀರದು. ಕತ್ತೆ ಮತ್ತು ಬೀದಿ ನಾಯಿಗಳಿಂದಾಗಿ ನಿತ್ಯ ಅಪಘಾತ ಸಂಭವಿಸುತ್ತವೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರಂತೂ ಬಿದ್ದ ಪ್ರಕರಣಗಳು ಸಾಕಷ್ಟು ಇವೆ. ಸ್ಥಳೀಯ ಜೇಡರ ದಾಸಿಮಯ್ಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಅಂಗಡಿಕಾರರರು ಸಂಜೆ ಕಸ ಹಾಕಿ ಹೋಗುತ್ತಿದ್ದಾರೆ. ಈ ಕಸದಲ್ಲಿಯ ಆಹಾರ ತಿನ್ನಲು ಐವತ್ತಕ್ಕಿಂತ ಹೆಚ್ಚು ನಾಯಿಗಳು ಇಲ್ಲಿ ಸೇರುತ್ತವೆ. ಇವು ಜಗಳವಾಡುತ್ತ ರಸ್ತೆಗೆ ಬರುವುದರಿಂದ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ.
ಬೀದಿ ಜಾನುವಾರು ಕತ್ತೆ ಮತ್ತು ನಾಯಿಗಳಿಂದಾಗಿ ಜನರಿಗೆ ಬಹಳಷ್ಟು ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕುಗೌರಿ ಮಿಳ್ಳಿ ನಗರಸಭಾ ಸದಸ್ಯೆ
ಕತ್ತೆಗಳ ಮಾಲೀಕರಿಗೆ ದಂಡ
ಈಗಾಗಲೇ ಕತ್ತೆಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಎರಡು ಸಭೆಗಳನ್ನು ಕೂಡ ಮಾಡಲಾಗಿದೆ. ಕೆಲವು ಬಾರಿ ದಂಡ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೊಂದು ಸಭೆ ಮಾಡಿ ಕತ್ತೆಯ ಮಾಲೀಕರಿಗೆ ಕಟ್ಟು ನಿಟ್ಟಾಗಿ ತಿಳಿಸಲಾಗುವುದು. ಜೊತೆಗೆ ಇನ್ನಷ್ಟು ದಂಡ ವಿಧಿಸಲಾಗುವುದುಜಗದೀಶ ಈಟಿ ಪೌರಾಯುಕ್ತರು ರಬಕವಿ ಬನಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.