ಬಾಗಲಕೋಟೆ: ಪ್ರವಾಸೋದ್ಯಮ ಇಲಾಖೆಯಲ್ಲಿ ಎಂಟು ವರ್ಷಗಳಿಂದ ಲೆಕ್ಕ ಪರಿಶೋಧನೆ ನಡೆದಿಲ್ಲ. ಹೀಗಾಗಿ ಬಂದ ಅನುದಾನದಲ್ಲಿನ ಖರ್ಚು ಮತ್ತು ಮತ್ತು ಉಳಿಕೆ ಬಗ್ಗೆ ಮಾಹಿತಿಯೇ ಇಲ್ಲ.
ಪ್ರತಿ ವರ್ಷ ಇಲಾಖೆಗೆ ಬಂದ ಅನುದಾನ, ಖರ್ಚಿನ ಬಗ್ಗೆ ಲೆಕ್ಕ ಪರಿಶೋಧನೆ (ಆಡಿಟ್) ಆಗಬೇಕು. ಆದರೆ, ಅಧಿಕಾರಿಗಳ ಬದಲಾವಣೆ, ಪ್ರಭಾರ ಅಧಿಕಾರಿಗಳ ನಿರಾಸಕ್ತಿಯ ಫಲವಾಗಿ ಎಂಟು ವರ್ಷಗಳಿಂದ ಆಡಿಟ್ ಆಗಿಲ್ಲ.
ಜಿಲ್ಲೆಯಲ್ಲಿ ಐಹೊಳೆ, ಬಾದಾಮಿ, ಪಟ್ಟದಕಲ್ಲು, ಕೂಡಲಸಂಗಮದಂತಹ ಪ್ರವಾಸಿ ತಾಣಗಳಿವೆ. ಅವುಗಳ ಅಭಿವೃದ್ಧಿ, ಸೌಲಭ್ಯಕ್ಕೆ ಸರ್ಕಾರವು ಅನುದಾನ ಬಿಡುಗಡೆಯಾಗುತ್ತದೆ. ಆದರೆ, ಅದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
‘ಸರ್ಕಾರದಿಂದ ಬಿಡುಗಡೆಯಾದ ಅನುದಾನ ಐಡಿಬಿಐ ಬ್ಯಾಂಕ್‌ನ ಮೂರು ಖಾತೆಗಳಲ್ಲಿ ಜಮಾ ಮಾಡಲಾಗಿತ್ತು. ಅಲ್ಲಿಂದ ₹2.43 ಕೋಟಿ ಅನುದಾನ ಇಲಾಖೆಗೆ ಮಾಹಿತಿ ನೀಡದೇ ಖಾತೆಗಳಿಗೆ ವರ್ಗಾವಣೆಯಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಗದಿರುವುದಕ್ಕೆ ಲೆಕ್ಕ ಪರಿಶೋಧನೆ ಮಾಡಿಸದಿರುವುದೇ ಕಾರಣ’ ಎಂದು ಮೂಲಗಳು ತಿಳಿಸಿವೆ.
ಕ್ಯಾಶ್ ಬುಕ್ ದಾಖಲಾಗಿಲ್ಲ:
‘ಸರ್ಕಾರದಿಂದ ಬಂದ ಅನುದಾನ, ಖರ್ಚು ಮಾಡಿದ ವಿವರ ನಮೂದಿಸುವ ಕ್ಯಾಶ್ ಬುಕ್ ನಿರ್ವಹಣೆಯೂ ಸಮರ್ಪಕವಾಗಿಲ್ಲ. 2021ರವರೆಗೆ ಕ್ಯಾಶ್ ಬುಕ್‌ನಲ್ಲಿ ಎಲ್ಲವನ್ನೂ ಬರೆದಿಡಲಾಗಿದೆ. ಆ ನಂತರದಲ್ಲಿ ಕ್ಯಾಶ್ ಬುಕ್‌ನಲ್ಲಿ ಏನೂ ದಾಖಲಾಗಿಲ್ಲ. ಆದರೆ, ಚೆಕ್ ಬುಕ್ ರಿಜಿಸ್ಟರ್ ನಿರ್ವಹಣೆ ಸಮರ್ಪಕವಾಗಿದೆ.
‘ಏಳು ತಿಂಗಳ ಹಿಂದೆ ಹೆಚ್ಚುವರಿ ಪ್ರಭಾರ ಉಪನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಹಿಂದಿನ ವರ್ಷಗಳಲ್ಲಿ ಲೆಕ್ಕ ಪರಿಶೋಧನೆ ಆಗಿಲ್ಲ’ ಎಂದು ಅಧಿಕ ಪ್ರಭಾರ ಉಪನಿರ್ದೇಶಕ ಗೋಪಾಲ ಹಿತ್ತಲಮನಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.