ಇಳಕಲ್ (ಬಾಗಲಕೋಟೆ): ಆನ್‌ಲೈನ್‌ನಲ್ಲಿ ಖರೀದಿಸಿದ ಹೇರ್ ಡ್ರೈಯರ್ ಸ್ಫೋಟಗೊಂಡು ಪಟ್ಟಣದ ಬಸವರಾಜೇಶ್ವರಿ ಯರನಾಳ ಎಂಬುವರ ಎರಡೂ ಕೈಗಳ ಬೆರಳುಗಳು ಛಿದ್ರಗೊಂಡಿವೆ. ಆದರೆ, ಹೇರ್‌ಡ್ರೈಯರ್‌ನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದು ಮತ್ತು ಕೊರಿಯರ್‌ನಲ್ಲಿ ಕಳುಹಿಸಿದ್ದು ಯಾರು ಎಂಬುದು ನಿಗೂಢವಾಗಿದೆ.
‘ಶಶಿಕಲಾ ಹಡಪದ ಎಂಬುವರ ಹೆಸರಿನಲ್ಲಿ ಪಾರ್ಸಲ್ ಬಂದ ಹಿನ್ನೆಲೆಯಲ್ಲಿ ಕೊರಿಯರ್ ಸಂಸ್ಥೆಯವರು ದೂರವಾಣಿ ಕರೆ ಮಾಡಿದಾಗ, ‘ಯಾವುದನ್ನೂ ಆರ್ಡರ್ ಮಾಡಿಲ್ಲ’ ಎಂದಿದ್ದಾರೆ. ಸ್ನೇಹಿತರು ಆರ್ಡರ್ ಮಾಡಿರಬಹುದೆಂದು ಭಾವಿಸಿ ಶಶಿಕಲಾ ಅವರು ಸ್ನೇಹಿತೆ ಬಸವರಾಜೇಶ್ವರಿಗೆ ಅದನ್ನು ತರಲು ತಿಳಿಸಿದ್ದಾರೆ. ಪಾರ್ಸಲ್‌ನಲ್ಲಿದ್ದ ಹೇರ್‌ಡ್ರೈಯರ್‌ನ್ನು ಮನೆಗೆ ತಂದು ಬಸವರಾಜೇಶ್ವರಿ ಬಳಸಲು ಮುಂದಾದಾಗ, ಅದು ಸ್ಫೋಟಗೊಂಡಿದೆ’ ಎಂದು ಇಳಕಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಪಾರ್ಸಲ್ ಯಾರು ಮತ್ತು ಯಾಕೆ ಕಳುಹಿಸಿದರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿ, ತನಿಖೆ ನಡೆಸಿದಾಗ ಸತ್ಯಾಂಶ ಗೊತ್ತಾಗಲಿದೆ’ ಎಂದು ಅವರು ತಿಳಿಸಿದ್ದಾರೆ.
‘ಸ್ಫೋಟದಿಂದ ಬಸವರಾಜೇಶ್ವರಿ ಅವರ ಒಂಬತ್ತು ಬೆರಳುಗಳ ಮಾಂಸ ಛಿದ್ರವಾಗಿವೆ. ಅವುಗಳನ್ನು ಮೊದಲಿನ ಸ್ಥಿತಿಗೆ ತರಲು ಆಗದು. ಅವರಿಗೆ ಚಿಕಿತ್ಸೆ ಮುಂದುವರೆದಿದೆ’ ಎಂದು ಡಾ.ಎನ್.ಆರ್. ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.