ಬಾಗಲಕೋಟೆ: ಜಮಖಂಡಿ ತಾಲ್ಲೂಕು ಸಾವಳಗಿಯಲ್ಲಿ ಬುಧವಾರ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿಒಪಿ) ಮಾಡಿದ 600ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ತಹಶೀಲ್ದಾರ್ ಪ್ರಶಾಂತ ಚನಗೊಂಡ ನೇತೃತ್ವದಲ್ಲಿ ಗ್ರಾಮದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಮಾರಾಟಕ್ಕೆ ಸಿದ್ಧಪಡಿಸಿ ಇಡಲಾಗಿದ್ದ ಮೂರ್ತಿಗಳನ್ನು ವಶಪಡಿಸಿಕೊಂಡರು. ಈ ವೇಳೆ ತಹಶೀಲ್ದಾರ್‌ಗೆ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸಾಥ್ ನೀಡಿದರು.
‘ಸಾವಳಗಿಯಲ್ಲಿ ಪಿಒಪಿ ಗಣಪತಿ ಮೂರ್ತಿ ಮಾರಾಟಕ್ಕೆ ಇಟ್ಟಿರುವ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು. ಮೂರ್ತಿಗಳ ಸಮೇತ ಅಂಗಡಿ ಮುಟ್ಟುಗೋಲು ಹಾಕಿಕೊಂಡಿದ್ದೇವೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಅಧಿಕಾರಿ ಎಂ.ಎ.ಮಣಿಯಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾವಳಗಿಗೆ ನಾನೂ ಹೋಗಿದ್ದೆ. ಮುಟ್ಟುಗೋಲು ಹಾಕಿಕೊಂಡ ಪಿಒಪಿ ಮೂರ್ತಿಗಳನ್ನು ಪರಿಸರಕ್ಕೆ ಹಾನಿಯಾಗದಂತೆ ವಿಲೇವಾರಿ ಮಾಡಲು ಹಾಗೂ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಸೂಚಿಸಿದ್ದೇನೆ’ ಎಂದು ಮಣಿಯಾರ ತಿಳಿಸಿದರು.
ನ್ಯಾಯಾಲಯದ ಆದೇಶ ಪಾಲಿಸಬೇಕಿದೆ
’ಪರಿಸರಕ್ಕೆ ಹಾನಿ ಹಿನ್ನೆಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನ ಮೂರ್ತಿ ತಯಾರಿಕೆ ಹಾಗೂ ಮಾರಾಟವನ್ನು ಹೈಕೋರ್ಟ್ ನಿಷೇಧಿಸಿದೆ. ನ್ಯಾಯಾಲಯದ ಆದೇಶದ ಅನುಷ್ಠಾನದ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ಆಯಾ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದೆ. ಅದರ ಮೇಲುಸ್ತುವಾರಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಡಿಕೊಳ್ಳಲಿದೆ’ ಎಂದು ಅಧಿಕಾರಿ ಮಣಿಯಾರ ಹೇಳುತ್ತಾರೆ.
’ಈಗಾಗಲೇ ಗಣಪತಿ ಮೂರ್ತಿ ಮಾರಾಟಗಾರರ ಸಭೆ ಕರೆದು ನ್ಯಾಯಾಲಯದ ಆದೇಶ ಪಾಲನೆ ಮಾಡುವಂತೆ ಮನವಿ ಮಾಡಿದ್ದೇವೆ. ಅದಕ್ಕೆ ಎಲ್ಲರೂ ಸಮ್ಮತಿಸಿದ್ದಾರೆ. ಯಾರೊ ಕೆಲವರು ಈ ರೀತಿ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಅನಿವಾರ್ಯ. ಮಂಡಳಿಯಲ್ಲಿ ಸಿಬ್ಬಂದಿ ಕೊರತೆಯೂ ನಿರ್ಬಂಧ ಪಾಲನೆಯಾಗುವಂತೆ ನೋಡಿಕೊಳ್ಳಲು ತೊಡಕಾಗಿದೆ’ ಎಂಬುದು ಮಣಿಯಾರ ಅಭಿಮತ.
ಸಾವಳಗಿಯಲ್ಲಿ ನಿಷೇಧಿತ ಪಿಒಪಿ ಮೂರ್ತಿ ವಿಚಾರ ಗಮನಕ್ಕೆ ಬಂದಿದೆ. ಸ್ಥಳೀಯರು ಇಲ್ಲವೇ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದೂರು ಪಡೆದು ಪ್ರಕರಣ ದಾಖಲಿಸಲಿದ್ದೇವೆ.
– ಸಿ.ಬಿ.ರಿಷ್ಯಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.