ಬಾಗಲಕೋಟೆ: ಹಿಪ್ಪರಗಿ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಶುಕ್ರವಾರ ಆರಂಭಿಸಿರುವ ಪ್ರತಿಭಟನೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದೆ.
ಹಿಪ್ಪರಗಿ ಗ್ರಾಮದಲ್ಲಿ ಆನಂದ ನ್ಯಾಮಗೌಡ ಪ್ರತಿಭಟನೆ ಆರಂಭಿಸಿದ್ದಾರೆ. ಅವರಿಗೆ ನದಿ ಪಾತ್ರದ ಹಳ್ಳಿಗಳ ನೂರಾರು ರೈತರು ಸಾಥ್ ನೀಡಿದ್ದಾರೆ. ಕೊರೊನಾ ವೈರಸ್ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಈಗ ಲಾಕ್ ಡೌನ್ ಆದೇಶವಿದೆ. ಇಂತಹ ಸಂದರ್ಭದಲ್ಲಿ ಜನರನ್ನು ಸೇರಿಸಿ ಪ್ರತಿಭಟನೆ ನಡೆಸುವುದು ಸಲ್ಲ. ಇದರಿಂದ ನಮ್ಮೂರಿನ ಸುರಕ್ಷತೆಗೆ ಧಕ್ಕೆಯಾಗಲಿದೆ. ಕೊರೊನಾ ಹರಡುವ ಸಾಧ್ಯತೆಯೂ ಇದೆ. ಬೇಕಿದ್ದರೆ ನೀವು ಬೇರೆ ಕಡೆ ಪ್ರತಿಭಟನೆ ನಡೆಸಿ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಜಮಖಂಡಿ ಡಿವೈಎಸ್ಪಿ ಆರ್.ಕೆ.ಪಾಟೀಲ ಅವರಿಗೆ ದೂರು ನೀಡಿದ್ದಾರೆ.
ನೀರು ಬಿಟ್ಟರಷ್ಟೇ ಪ್ರತಿಭಟನೆ ಹಿಂದಕ್ಕೆ: ಹಿಪ್ಪರಗಿ ಬ್ಯಾರೇಜ್ ನಿಂದ ನೀರು ಬಿಟ್ಟರೆ ಚಿಕ್ಕಪಡಸಲಗಿಯ ಶ್ರಮಬಿಂದು ಸಾಗರದವರೆಗಿನ ನದಿ ಪಾತ್ರದ 30 ಹಳ್ಳಿಗಳ ಜನ-ಜಾನುವಾರುಗಳ ಬಾಯಾರಿಕೆ ನೀಗಲಿದೆ. ಬೆಳೆಗಳು ಉಳಿಯಲಿವೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಹೀಗಾಗಿ ಹಿಪ್ಪರಗಿ ಜಲಾಶಯದಿಂದ ನದಿಗೆ 0.3 ಟಿಎಂಸಿ ಅಡಿ ನೀರು ಹರಿಸುವಂತೆ ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಗುರುವಾರ ಮಧ್ಯಾಹ್ನ ಆದೇಶ ಹೊರಡಿಸಿದ್ದಾರೆ. ಆದರೆ ಅದು ಇಲ್ಲಿಯವರೆಗೂ ಪಾಲನೆಯಾಗಿಲ್ಲ ಎಂದು ಶಾಸಕ ಆನಂದ ನ್ಯಾಮಗೌಡ ಆರೋಪಿಸಿದರು.
ನೀರು ಹರಿಸುವಂತೆ ಹೇಳಲು ಜಮಖಂಡಿ ಉಪವಿಭಾಗಾಧಿಕಾರಿಗೆ ಕರೆ ಮಾಡಿದರೆ ಅವರ ಮೊಬೈಲ್ ಪೋನ್ ಸ್ಚಿಚ್ ಆಫ್ ಆಗಿದೆ. ತಹಶೀಲ್ದಾರ್ ಕೇಳಿದರೆ ಕೊರೊನಾ ಕರ್ತವ್ಯದ ಕಾರಣ ಬಿಡುವಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಶಾಂತಿಯುತವಾಗಿ ಪ್ರತಿಭಟನೆ ಆರಂಭಿಸಿದ್ದೇವೆ. ಇಲ್ಲಿಯೂ ಸಾಮಾಹಿಕ ಅಂತರ ಕಾಯ್ದುಕೊಳ್ಳಲಿದ್ದೇವೆ ಎಂದರು.
ಉಪವಿಭಾಗಾಧಿಕಾರಿ ಸ್ಥಳಕ್ಕೆ ಬಂದು ಜಲಾಶಯದಿಂದ ನದಿಗೆ ನೀರು ಹರಿಸಿದ ಮೇಲೆಯೇ ಸ್ಥಳದಿಂದ ತೆರಳುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಬಂದಿರುವ ಡಿವೈಎಸ್ಪಿ ಆರ್.ಕೆ.ಪಾಟೀಲ ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಲು ಮುಂದಾಗಿದ್ದರು. ಆದರೆ ಪ್ರತಿಭಟನೆ ಸ್ಥಳದಲ್ಲಿ ನೆರೆದವರಲ್ಲಿ ಯಾವುದೇ ಸಾಮಾಜಿಕ ಅಂತರ ಕಂಡುಬರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.