ಬಾಗಲಕೋಟೆ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಈಗಾಗಲೇ ಆರಂಭವಾಗಿದ್ದು, ಮಕ್ಕಳಿಗೆ ಪಾಠ ಮಾಡಲು ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಉತ್ತಮ ಫಲಿತಾಂಶ ಪಡೆಯಬೇಕು ಎಂಬ ಗುರಿಗೆ ಅಡ್ಡಿಯಾಗಿ ಶಿಕ್ಷಕರು ಸೇರಿದಂತೆ ವಿವಿಧ ಸೌಲಭ್ಯಗಳ ಕೊರತೆ ಎದುರಾಗಿದೆ.
ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ಪಡೆಬೇಕು ಎಂಬ ಪ್ರಯತ್ನ ಸಾಗುತ್ತಲೇ ಇದೆ. ಈ ವರ್ಷ ಜಿಲ್ಲೆಯು ರಾಜ್ಯಮಟ್ಟದಲ್ಲಿ 27ರಿಂದ 13ನೇ ಸ್ಥಾನಕ್ಕೆ ಜಿಗಿತ ಕಂಡಿದ್ದರೆ, ಶೇಕಡವಾರು ಫಲಿತಾಂಶದಲ್ಲಿ ಶೇ 84.21 ರಿಂದ ಶೇ 77.92ಕ್ಕೆ ಕುಸಿದಿದೆ. ಫಲಿತಾಂಶ ಕುಸಿತ ಶಿಕ್ಷಣ ಪ್ರೇಮಿಗಳನ್ನು ಆತಂಕಕ್ಕೆ ದೂಡಿದೆ.
ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 1,088 ಹಾಗೂ ಪ್ರೌಢಶಾಲೆಗಳಲ್ಲಿ 279 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಆ ಮೂಲಕ ಮಕ್ಕಳಿಗೆ ಶಿಕ್ಷಕರ ಕೊರತೆ ಸರಿದೂಗಿಸಲು ಕ್ರಮಕೈಗೊಂಡಿದೆ.
ಶಾಲಾ ಹಂತದಲ್ಲಿಯೇ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಕೆಲವು ಕಡೆಗಳಲ್ಲಿ ಕಳೆದ ವರ್ಷ ಕರ್ತವ್ಯ ನಿರ್ವಹಿಸಿದ ಶಿಕ್ಷಕರನ್ನೇ ಮುಂದುವರಿಸಲಾಗುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಹೊಸದಾಗಿ ಭರ್ತಿ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ. ನಂದನೂರ.
ಪಠ್ಯ ಬೋಧನೆಯ ಜತೆಗೆ ಚುನಾವಣೆ, ವಿವಿಧ ಸಮೀಕ್ಷೆ ಕೆಲಸ, ವೃತ್ತಿ ಸಂಬಂಧಿತ ವಿವಿಧ ತರಬೇತಿಗಳಿಗೆ ಕಾಯಂ ಶಿಕ್ಷಕರು ಹೋಗಬೇಕಾಗುತ್ತದೆ. ಅವರು ಪಠ್ಯದ ಜತೆಗೆ ಸರ್ಕಾರದ ವಿವಿಧ ಯೋಜನೆಗಳ ಜಾರಿಗೆ ಅವಶ್ಯವಿರುವ ಸೇವೆಯನ್ನೂ ಸಲ್ಲಿಸಬೇಕು. ಅಂತಹ ಸಂದರ್ಭಗಳಲ್ಲಿಯೂ ಅತಿಥಿ ಶಿಕ್ಷಕರು ಬೊಧನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಶಿಕ್ಷಕರ ಕೊರತೆಯಿಂದಾಗಿ ಕೆಲವು ಕಡೆಗಳಲ್ಲಿ ಪಾಠ ಬೋಧನೆಗೆ ಹಿನ್ನಡೆಯುಂಟಾಗುತ್ತಿತ್ತು. ಇಂಗ್ಲಿಷ್, ಗಣಿತ, ವಿಜ್ಞಾನ ಶಿಕ್ಷಕರಿಲ್ಲದ ಕಡೆಗಳಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳ ಕಲಿಕೆಗೂ ತೊಂದರೆಯುಂಟಾಗಿತ್ತು. ಪರೀಕ್ಷೆಗಳ ಫಲಿತಾಂಶ ಸುಧಾರಣೆಯಾಗಬೇಕಾದರೆ, ಪಠ್ಯಕ್ರಮವನ್ನು ಪೂರ್ಣಗೊಳಿಸಬೇಕಾದ ಅವಶ್ಯಕತೆ ಇದೆ.
ಗೌರವ ಧನದ ಆಧಾರದ ಮೇಲೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ₹10,500 ಗೌರವ ಧನ ನೀಡಲಾಗುತ್ತದೆ. ಬೇಸಿಗೆ ರಜಾ ಕಾಲಾ ಹೊರತುಪಡಿಸಿದ 10 ತಿಂಗಳ ಅವಧಿಗೆ ನೀಡಲಾಗುತ್ತದೆ. ಗೌರವ ಧನ ಹೆಚ್ಚಿಸಬೇಕು ಎಂಬ ಕೂಗು ಸರ್ಕಾರವನ್ನು ಮುಟ್ಟಿಲ್ಲ.
ಕಟ್ಟಡ ಕೊಠಡಿಗಳು ಶಿಥಿಲ
ಬಾಗಲಕೋಟೆ: ಜಿಲ್ಲೆಯ ಹಲವು ಶಾಲೆಗಳ ಕಟ್ಟಡ ಕೊಠಡಿಗಳು ಶಿಥಿಲಗೊಂಡಿವೆ. ಕೆಲವು ಶಾಲೆಯ ಕಟ್ಟಡಗಳು ಬಹಳ ಹಳೆಯದಾಗಿದ್ದು ಹೊಸದಾಗಿ ಕಟ್ಟಡ ನಿರ್ಮಾಣ ಮಾಡಬೇಕಾದ ಅವಶ್ಯಕತೆ ಇದೆ. ಕೆಲವು ಕಡೆಗಳಲ್ಲಿ ಕೊಠಡಿಗಳ ಕಿಟಕಿಗಳು ಕಿತ್ತು ಹೋಗಿದ್ದರೆ ಹೆಂಚುಗಳು ಒಡೆದು ಹೋಗಿವೆ. ಅಂತಹ ಕೊಠಡಿಗಳಲ್ಲಿಯೇ ಕುಳಿತು ಪಾಠ ಕೇಳಬೇಕಾದ ಸ್ಥಿತಿ ಇದೆ.
ಸೌಲಭ್ಯ ನೀಡದಿದ್ದರೆ ಸುಧಾರಣೆ ಹೇಗೆ?
ಬಾಗಲಕೋಟೆ: ಜಿಲ್ಲೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಕೊಣ್ಣೂರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಅಂತಹ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಶಿಕ್ಷಕರ ಕೊರತೆಯ ಕತೆ ಈ ವರ್ಷದ್ದಲ್ಲ. ಹಲವಾರು ವರ್ಷಗಳಿಂದ ಶಿಕ್ಷಕರ ಕೊರತೆ ಇದ್ದೇ ಇದೆ. ಇದರಿಂದಾಗಿ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರ್ಪಡೆ ಮಾಡಲು ಹಿಂದೇಟು ಹಾಕುತ್ತಾರೆ. ಪಠ್ಯಪುಸ್ತಕ ಸರಿಯಾದ ಸಮಯಕ್ಕೆ ಬರುವುದಿಲ್ಲ. ವರ್ಷದ ಮಧ್ಯದಲ್ಲಿ ಸಮವಸ್ತ್ರ ಬರುತ್ತವೆ. ಮಕ್ಕಳಿಗೆ ನೀಡುತ್ತಿದ್ದ ಸೈಕಲ್ ಯೋಜನೆ ರದ್ದಾಗಿದೆ. ವಸತಿ ನಿಲಯಗಳಲ್ಲಿ ಪ್ರವೇಶ ದೊರೆಯದ್ದರಿಂದ ಹಲವಾರು ವಿದ್ಯಾರ್ಥಿಗಳು ಬಸ್‌ನಲ್ಲಿ ಸಂಚರಿಸಿ ಶಾಲೆ ತಲುಪಬೇಕಿದೆ. ತಿರುಗಾಟದಲ್ಲಿಯೇ ಅವರ ಅರ್ಧ ಸಮಯ ವ್ಯರ್ಥವಾಗುತ್ತದೆ. ಸೌಲಭ್ಯಗಳಿಲ್ಲದೇ ಫಲಿತಾಂಶ ಸುಧಾರಣೆ ಹೇಗೆ ಸಾಧ್ಯ ಎಂಬುದೇ ಪ್ರಶ್ನೆಯಾಗಿದೆ.
ಬಾಗಲಕೋಟೆ ಜಿಲ್ಲೆ ಅತಿಥಿ ಶಿಕ್ಷಕರ ನೇಮಕ ವಿವರ
ತಾಲ್ಲೂಕು;ಪ್ರಾಧಮಿಕ;ಪ್ರೌಢಶಾಲೆ
ಬಾದಾಮಿ;194;41
ಬಾಗಲಕೋಟೆ;129;17
ಬೀಳಗಿ;83;35
ಹುನಗುಂದ;159;37
ಜಮಖಂಡಿ;276;86
ಮುಧೋಳ;247;63
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.