ADVERTISEMENT

ಬಾಗಲಕೋಟೆ | ಆರೋಗ್ಯ ಇಲಾಖೆಗೆ ಬೇಕಿದೆ ಚಿಕಿತ್ಸೆ

ಸಾರ್ವಜನಿಕರ ಆರೋಗ್ಯ ಕಾಪಾಡುವರೇ ಸಚಿವ ದಿನೇಶ ಗುಂಡೂರಾವ್?

ಬಸವರಾಜ ಹವಾಲ್ದಾರ
Published 28 ಜೂನ್ 2024, 4:30 IST
Last Updated 28 ಜೂನ್ 2024, 4:30 IST
   

ಬಾಗಲಕೋಟೆ: ಭ್ರೂಣಹತ್ಯೆ ಪ್ರಕರಣಗಳು, ಶಿಶುಗಳ ಮರಣ ಪ್ರಮಾಣ ಹೆಚ್ಚಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಜಿಲ್ಲೆಯನ್ನು ಕಾಡುತ್ತಿವೆ. ಆಸ್ಪತ್ರೆಗಳು ಸೋರುತ್ತಿವೆ. ವೈದ್ಯರು ಸೇರಿದಂತೆ ಸಿಬ್ಬಂದಿ ಸಮಸ್ಯೆ ಎದುರಿಸುತ್ತಿವೆ. ಈ ಸಮಸ್ಯೆಗಳ ನಡುವೆ ಅಧಿಕಾರಿಗಳ ಕಿತ್ತಾಟ ಬೇರೆ. ಇವೆಲ್ಲಕ್ಕೂ ಚಿಕಿತ್ಸೆ ನೀಡಿ, ಆರೋಗ್ಯ ಇಲಾಖೆ ರಕ್ಷಿಸಬೇಕಿದೆ.

ಜಿಲ್ಲೆಯಲ್ಲಿ ಈಗಾಗಲೇ ಏಳು ಭ್ರೂಣಹತ್ಯೆ ಪ್ರಕರಣಗಳು ದಾಖಲಾಗಿವೆ. ಮಹಾಲಿಂಗಪುರದಲ್ಲಿ ಒಬ್ಬರೇ ಆರೋಪಿ ಮೂರನೇ ಬಾರಿಗೆ ಸಿಕ್ಕಿಬಿದ್ದಿದ್ದಾರೆ. ಎರಡನೇ ಬಾರಿ ಪ್ರಕರಣ ಮರುಕಳಿಸಿದಾಗಲೇ ಎಚ್ಚೆತ್ತುಕೊಳ್ಳಬೇಕಾದ ಇಲಾಖೆ ಗಾಢ ನಿದ್ರೆಯಲ್ಲಿದ್ದರಿಂದಲೇ ಪ್ರಕರಣಗಳು ಮರು ಕಳಿಸುತ್ತಲೇ ಇವೆ.

ಬಹುತೇಕ ಪ್ರಕರಣಗಳಲ್ಲಿ ಸಾವು, ಸಾರ್ವಜನಿಕರು ದೂರು ನೀಡಿದ ನಂತರವಷ್ಟೇ ಪ್ರಕರಣಗಳು ಬೆಳಕಿಗೆ ಬರುತ್ತವೆ. ಹಾಗಾದರೆ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಅಧಿಕಾರಿಗಳು ಏನು ಮಾಡುತ್ತಿದ್ದರು. ಅವರಿಗೆ ಹೇಗೆ ಗೊತ್ತಾಗಲಿಲ್ಲ ಎಂಬ ಪ್ರಶ್ನೆ ಏಳುತ್ತದೆ.

ADVERTISEMENT

ಶಿಶುಗಳ ಮರಣ ಪ್ರಮಾಣವೂ ಜಿಲ್ಲೆಯಲ್ಲಿ ಹೆಚ್ಚಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿರುವುದು, ಪೌಷ್ಟಿಕ ಆಹಾರದ ಕೊರತೆ ಸೇರಿದಂತೆ ಹಲವು ಕಾರಣಗಳಿವೆ. ಮಾತೃಪೂರ್ಣ ಯೋಜನೆ ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳಿಗೆ ತಲುಪದ್ದರಿಂದ ಗರ್ಭಿಣಿಯರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಎಚ್‌ಐವಿ/ಏಡ್ಸ್‌ ಬಾಧಿತರ ಸಂಖ್ಯೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿರುತ್ತಿತ್ತು. ಈಗ ಅದರ ಪ್ರಮಾಣ ಕಡಿಮೆಯಾಗಿದ್ದರೂ, ಹೊಸ ಪ್ರಕರಣಗಳು ವರದಿಯಾಗುತ್ತಲೇ ಇವೆ. ಎಚ್‌ಐವಿ ಹರಡುವ ಅಕ್ರಮ ತಾಣಗಳಿಗೆ ಪೂರ್ಣ ಪ್ರಮಾಣದಲ್ಲಿ ಬೀಗ ಬೀಳದಿರುವುದೇ ಪ್ರಕರಣಗಳು ವರದಿಯಾಗುತ್ತಿರುವುದಕ್ಕೆ ಕಾರಣ.

ಜಿಲ್ಲೆಯ ಹಲವಾರು ಸರ್ಕಾರಿ ಆಸ್ಪತ್ರೆಗಳು ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿವೆ. ಸಿಬ್ಬಂದಿ ಸಮಸ್ಯೆ ರಾಜ್ಯಮಟ್ಟದ್ದಾದರೂ, ಇವರು ಸಿಬ್ಬಂದಿಯಲ್ಲಿಯೂ ಹಲವರು ಕೆಲಸ ಸರ್ಕಾರದಲ್ಲಿ, ಸೇವೆ ಖಾಸಗಿ ಆಸ್ಪತ್ರೆಗಳಲ್ಲಿ ಎಂಬ ನೀತಿ ಮುಂದುವರಿಸಿಕೊಂಡು ಬಂದಿದ್ದಾರೆ.

ಬೆಡ್‌ಗಳ ಕೊರತೆ, ದುರಸ್ತಿಗೊಳ್ಳದ ಯಂತ್ರಗಳು, ಸೋರುವ ಕಟ್ಟಡಗಳು ಸೇರಿದಂತೆ ಹಲವು ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ನೀಡುವ ಕೆಲಸ ಆಗಲಿ ಎಂದು ಜಿಲ್ಲೆಯ ಜನತೆ ಶುಕ್ರವಾರ ಜಿಲ್ಲೆಗೆ ಭೇಟಿ ನೀಡಲಿರುವ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಂದ ನಿರೀಕ್ಷಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.