ಜಮಖಂಡಿ: ಇಲ್ಲಿನ ಬಾಗಲಕೋಟೆ ವಿಶ್ವವಿದ್ಯಾಲಯ ಪ್ರಾರಂಭವಾಗಿ ಒಂದು ವರ್ಷ ಕಳೆದರು ಇನ್ನೂ ಸರಿಯಾದ ವಿಷಯ ಮುಖ್ಯಸ್ಥರು, ಬೋಧಕರು, ರಜಿಸ್ಟರಗಳು ಇಲ್ಲದೇ ಸಮಸ್ಯೆಗಳ ಸುಳಿಯಲ್ಲಿ ಬಳಲುತ್ತಿದೆ.
ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ವರ್ಗಾವಣೆ ಬಯಸಿದ 15 ಜನ ಬೋಧಕ ಮತ್ತು ಬೋಧಕೇತರು ವರ್ಗಾವಣೆಯಾಗಿ ಬಂದಿದ್ದಾರೆ. ಪರೀಕ್ಷೆ, ಆಡಳಿತ ವಿಭಾಗ, ಶೈಕ್ಷಣಿಕ ವಿಭಾಗ, ಸಿಡಿಸಿ ಕಾರ್ಯಗಳು ಸುಗಮವಾಗಿ ನಡೆಯಲು ಇನ್ನೂ 15ಕ್ಕೂ ಅಧಿಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಅವಶ್ಯಕತೆ ಇದೆ. ನೇಮಕ ಮಾಡಿಕೊಳ್ಳಲು ಸರ್ಕಾರದಿಂದ ಅನುಮತಿ ಸಿಗಬೇಕು.
ಸರ್ಕಾರದಿಂದ ₹2 ಕೋಟಿ ಅನುದಾನ ನೀಡುವದಾಗಿ ಭರವಸೆ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ನಯಾಪೈಸೆ ಹಣ ಬಂದಿಲ್ಲ. ವಿದ್ಯಾರ್ಥಿಗಳ ಪ್ರವೇಶ, ಪರೀಕ್ಷಾ ಶುಲ್ಕದಲ್ಲಿ ವಿಶ್ವವಿದ್ಯಾಲಯದ ಸಣ್ಣಪುಟ್ಟ ಖರ್ಚು ಮಾಡಲಾಗುತ್ತಿದೆ ಹಾಗೂ ಅದೇ ಹಣದಲ್ಲಿ ಗುತ್ತಿಗೆ ಆಧಾರದ ಮೇಲೆ ತುಂಬಿಕೊಂಡಿರುವ ಉನ್ಯಾಸಕರ ವೇತನ ನೀಡಲಾಗುತ್ತಿದೆ.
ಬಾಗಲಕೋಟೆ ವಿಶ್ವವಿದ್ಯಾಲಯದ ಅಡಿಯಲ್ಲಿ 78 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. 14 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಆದರೆ ವಿಶ್ವವಿದ್ಯಾಲಯದ ನಿರ್ವಹಣೆಗೆ ಬೇಕಾದಷ್ಟು ಸಿಬ್ಬಂದಿಗಳು ಇಲ್ಲದ ಕಾರಣ ಇರುವ ಸಿಬ್ಬಂದಿಗಳ ಮೇಲೆ ವಿಪರಿತ ಕೆಲಸದ ಒತ್ತಡವಾಗುತ್ತಿರುವುದರಿಂದ ವರ್ಗಾವಣೆಯಾಗಿ ಬೇರೆಡೆ ಹೋಗುವಂತಾಗಿದೆ.
ಇಂಗ್ಲಿಷ, ಸಮಾಜಶಾಸ್ತ್ರ, ವಾಣಿಜ್ಯ ಶಾಸ್ತ್ರ, ರಾಜ್ಯಶಾಸ್ತ್ರ, ಎಂ.ಬಿ.ಎ, ಎಂಸಿಎ ಮತ್ತು ಗಣಿತಶಾಸ್ತ ಸೇರಿ ಒಟ್ಟು ಏಳು ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಕನಿಷ್ಠ ವಿಷಯಕ್ಕೆ ಒಬ್ಬರಂತೆ ಮುಖ್ಯಸ್ಥರನ್ನಾದರೂ ಪರ್ಮನೆಂಟ್ ಬೋಧಕರು ಬೇಕು. ಆದರೆ ಇಲ್ಲಿ ಕೇವಲ ಮೂರು ಜನ ಮಾತ್ರ ಪರ್ಮನೆಂಟ್ ಬೋಧಕರಿದ್ದು, ಉಳಿದ ನಾಲ್ಕು ವಿಷಯ ಮುಖ್ಯಸ್ಥರು ಹಾಗೂ ವಿವಿಧ ವಿಷಯಗಳ ಭೋಧಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಶಿಕ್ಷಣ ಗುಣಮಟ್ಟ ಕ್ಷೀಣಿಸುತ್ತಿದೆ ಎನ್ನುತ್ತಾರೆ ಬೋಧಕರೊಬ್ಬರು.
ತರಗತಿಗಳು ನಡೆಸಲು ಕೊಠಡಿಗಳ ಸಮಸ್ಯೆ ಇರುವುದರಿಂದ ಗ್ರಂಥಾಲಯ, ಕಾವಲುಗಾರನಿಗೆ ನೀಡಿರುವ ಕೊಠಡಿಯಲ್ಲಿ ತರಗತಿಗಳು ನಡೆಸುತ್ತಿದ್ದಾರೆ. ವಿಶ್ವವಿದ್ಯಾಲಯದ ಅಧಿನದಲ್ಲಿ ಬರುವ ವಿವಿಧ ಕಾಲೇಜುಗಳ ಉತ್ತರ ಪತ್ರಿಕೆಗಳು ವಿಶ್ವವಿದ್ಯಾಲಯಕ್ಕೆ ಬರಬೇಕು. ಸ್ಥಳ ಇಲ್ಲದಿದ್ದರೆ ಸಮೀಪದ ಸರ್ಕಾರಿ ಕಾಲೇಜಿನಲ್ಲಿ ಒಂದು ಕೇಂದ್ರವನ್ನು ತೆರೆಯಬೇಕು. ಆದರೆ ಆದರೆ ಬಾಗಲಕೋಟೆ ವಿಶ್ವವಿದ್ಯಾಲಯದ ಅಧಿನದಲ್ಲಿ ಬರುವ ಕಾಲೇಜುಗಳ ಉತ್ತರ ಪತ್ರಿಕೆಗಳು ಒಂದು ಖಾಸಗಿ ಕಾಲೇಜಿಗೆ ಹೋಗುತ್ತವೆ ಎಂಬ ಆರೋಪ ಇದೆ.
ನಿಯಮ ಮೀರಿ ಉಪನ್ಯಾಸಕರ ನೇಮಕ: ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಆಹ್ವಾನ ಮಾಡಿದಾಗ 8 ಜನರಲ್ಲಿ ಆರು ಜನರು ಸ್ಥಳೀಯ ಹಾಗೂ ಅರ್ಹತೆ ಇದ್ದವರು ಅರ್ಜಿ ಹಾಕಿದ್ದರು. ಆದರೆ 8 ಜನರಲ್ಲಿ ಒಬ್ಬರನ್ನು ಮಾತ್ರ ತೆಗೆದುಕೊಂಡು ಅರ್ಜಿ ಹಾಕದ ಹಾಗೂ ಬೇರೆ ಖಾಸಗಿ ಕಾಲೇಜಿನಲ್ಲಿ ವಯೋನಿವೃತ್ತಿ ಹೊಂದಿರುವವರನ್ನು ನಿಯಮ ಮೀರಿ ನೇಮಕ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ತನಿಖೆಯಾಗಬೇಕು ಎಂದು ಅಭ್ಯರ್ಥಿಯೊಬ್ಬರು ಒತ್ತಾಯಿಸಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆನಂದ ದೇಶಪಾಂಡೆ ಸರಿಯಾಗಿ ವಿಶ್ವವಿದ್ಯಾಲಯಕ್ಕೆ ಬರುವುದಿಲ್ಲ. ವಾರದಲ್ಲಿ ಎರಡು ದಿನ ಮಾತ್ರ ಬರುತ್ತಾರೆ. ಉಳಿದ ದಿನ ಮೀಟಿಂಗ್ ನೆಪ ಹೇಳುತ್ತಾರೆ. ಇಲ್ಲಿನ ಬೋಧಕ ಬೋಧಕೇತರರಿಗೆ ಸರಿಯಾದ ಮಾರ್ಗದರ್ಶನ ಇಲ್ಲದಂತಾಗಿದೆ. ಡಿ ಗ್ರೂಪ್ ನೌಕರರೊಬ್ಬರನ್ನು ಅನಧಿಕೃತವಾಗಿ ಕುಲಪತಿಗಳು ಮನೆಗೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಉಪನ್ಯಾಸಕರೊಬ್ಬರು.
ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಹಾಗೂ ವಿವಿಧ ಚಟುವಟಿಕೆಗಳನ್ನು ನಡೆಸಲು ವಿಸ್ತಾರವಾದ ಸ್ಥಳ ಹಾಗೂ ಕಟ್ಟಡ ನೀಡಬೇಕು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ-ಆನಂದ ದೇಶಪಾಂಡೆ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.