ADVERTISEMENT

ಬಾಗಲಕೋಟೆ ಬಿಟಿಡಿಎ: ಅಕ್ರಮಗಳಿಗೆ ಕಡಿವಾಣ ಯಾವಾಗ?

ಬಸವರಾಜ ಹವಾಲ್ದಾರ
Published 3 ಅಕ್ಟೋಬರ್ 2024, 5:50 IST
Last Updated 3 ಅಕ್ಟೋಬರ್ 2024, 5:50 IST
   

ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅವ್ಯವಸ್ಥೆಯ ಆಗರವಾಗಿದೆ. ನಿವೇಶನ ವಿತರಣೆಯಲ್ಲಿ ವಿವಿಧ ಬಗೆಯ ಲೋಪಗಳಾಗಿದ್ದರೂ ಕ್ರಮ ಆಗದಿರುವುದು ಬಿಟಿಡಿಎ ಬಗ್ಗೆ ಭರವಸೆಯನ್ನೇ ಕಳೆದುಕೊಂಡಿದ್ದಾರೆ.

ಜಲಸಂಪನ್ಮೂಲ ಇಲಾಖೆಯ ಅಧೀನ ಕಾರ್ಯದರ್ಶಿ ತಿಂಗಳ ಹಿಂದೆ ಬಿಟಿಡಿಎ ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆದು, ಬಸವೇಶ್ವರ ಸಂಘ ಸೇರಿದಂತೆ ನಾಲ್ವರಿಗೆ ನಿಯಮಗಳ ಉಲ್ಲಂಘಿಸಿ ನಿವೇಶನಗಳ ಹಂಚಿಕೆ ಮಾಡಲಾಗಿದೆ. ಅವುಗಳನ್ನು ರದ್ದುಪಡಿಸಬೇಕು ಎಂದು ಸೂಚಿಸಲಾಗಿತ್ತು. ಈ ಕುರಿತು ರಾಜಕೀಯ ಪಕ್ಷಗಳ ಮುಖಂಡರು ಕೆಸರೆರಚಾಟ ನಡೆಸಿದ್ದರು. 

ಕಾಂಗ್ರೆಸ್‌ ನಾಯಕರು ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ನಾಯಕರ ಅಕ್ರಮಗಳ ಬಗ್ಗೆ ಆರೋಪ ಮಾಡಿದ್ದರೆ, ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ಮಾಡಿ, ಕಾಂಗ್ರೆಸ್ ನಾಯಕರ ಅಕ್ರಮಗಳ ಬಗ್ಗೆ ಆರೋಪ ಮಾಡಿದ್ದರು. ಸಂತ್ರಸ್ತರಲ್ಲದವರ ಹಲವರು ನಿವೇಶನ ಪಡೆದಿರುವ, ಅರ್ಹರಿದ್ದರೂ, ಅರ್ಹತೆಗಿಂತ ಹೆಚ್ಚಿನ ನಿವೇಶನ ಪಡೆದ ಬಗ್ಗೆ ದೂರಿದ್ದರು.

ADVERTISEMENT

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನ ಪಡೆದ ಆರೋಪ ಕೇಳಿ ಬಂದಾಗಿ, ಬಿಟಿಡಿಎ ಆರಂಭವಾದಾಗಿನಿಂದ ಇಲ್ಲಿಯವರೆಗಿನ ಅಕ್ರಮಗಳ ಬಗ್ಗೆ ತನಿಖೆ ನಡೆಯಲಿ ಎಂದು ಬಿಟಿಡಿಎ ಮಾಜಿ ಅಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಆಗ್ರಹಿಸಿದ್ದರು. 

ಇದಕ್ಕೆ ಪ್ರತಿಯಾಗಿ ‘2013ರಲ್ಲಿ ಶಾಸಕನಾಗಿದ್ದಾಗಿನಿಂದ ಇಲ್ಲಿಯವರೆಗೆ ಬಿಟಿಡಿಎದಲ್ಲಿ ನಿವೇಶನ ಹಂಚಿಕೆ, ಕಾಮಗಾರಿ ಸೇರಿದಂತೆ ಎಲ್ಲ ನಿಯಮ ಉಲ್ಲಂಘನೆಗಳ ಬಗ್ಗೆ ಸಿಐಡಿ ತನಿಖೆಗೆ ವಹಿಸುವಂತೆ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ತಿಳಿಸಿದ್ದೇನೆ’ ಎಂದು ಶಾಸಕ ಎಚ್‌.ವೈ. ಮೇಟಿ ಹೇಳಿದ್ದರು.

ಈ ಹಿಂದೆ ಸಣ್ಣ ನಿವೇಶನ ಪಡೆದವರಿಗೆ, ಅದರ ಬದಲಾಗಿ ದೊಡ್ಡ ನಿವೇಶನ ನೀಡುವ ಜಾಲವೊಂದು ಸಕ್ರಿಯವಾಗಿದೆ. ಈಗಾಗಲೇ ಹಲವಾರು ಜನರಿಗೆ ಬದಲಾವಣೆ ಮಾಡಿಕೊಟ್ಟಿದ್ದಾರೆ ಎಂಬ ದೂರುಗಳಿವೆ. ಮಧ್ಯವರ್ತಿಗಳಿಲ್ಲದೇ ನಿವೇಶನ ಪಡೆಯುವ ಹಾದಿ ದುರ್ಗಮವಾಗಿದೆ. ಇಂದಿಗೂ ಹಲವಾರು ಸಂತ್ರಸ್ತರು ನಿವೇಶನಗಳಿಗಾಗಿ ಅಲೆದಾಡುತ್ತಲೇ ಇದ್ದಾರೆ.

ಪ್ರಾದೇಶಿಕ ಆಯುಕ್ತರಿಂದ ಬಿಟಿಡಿಎ ವತಿಯಿಂದ ತನಿಖೆ ನಡೆಸಲಾಗುತ್ತದೆ ಎಂದು ಸಚಿವರೂ ಹೇಳಿದ್ದಾರೆ. ಅಕ್ರಮಗಳ ಬಗ್ಗೆ ಮಾಹಿತಿ ಇದ್ದವರು ದೂರು ನೀಡಬಹುದು ಎಂದು ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದ್ದಾರೆ. ಆದರೆ, ತನಿಖೆ ನಡೆಯುತ್ತಿರುವ ಕುರುಗಳೇ ಇಲ್ಲದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.