ADVERTISEMENT

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಸಂಸದರ ಮುಂದಿರುವ ಸವಾಲುಗಳು?

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 5:23 IST
Last Updated 10 ಜೂನ್ 2024, 5:23 IST
ರೈಲ್ವೆ ಟ್ರ್ಯಾಕ್‌ ಕಾಮಗಾರಿ ನಡೆದಿರುವುದು (ಸಾಂದರ್ಭಿಕ ಚಿತ್ರ)
ರೈಲ್ವೆ ಟ್ರ್ಯಾಕ್‌ ಕಾಮಗಾರಿ ನಡೆದಿರುವುದು (ಸಾಂದರ್ಭಿಕ ಚಿತ್ರ)   

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಪಿ.ಸಿ.ಗದ್ದಿಗೌಡರ ಹೊಸಬರಲ್ಲ. ಜಿಲ್ಲೆಯ ಸಮಸ್ಯೆಗಳೂ ಅವರಿಗೆ ಗೊತ್ತಿಲ್ಲದೆ ಇಲ್ಲ. ಆದರೆ, ಅವುಗಳನ್ನು ಪರಿಹರಿಸಿಲ್ಲ ಎಂಬುದೇ ಪ್ರತಿಪಕ್ಷಗಳ ಆರೋಪ‍ವಾಗಿತ್ತು. ಮುಖ್ಯವಾಗಿ ಬಾಗಲಕೊಟೆ–ಕುಡಚಿ ರೈಲು ಮಾರ್ಗ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹರಿಸಬೇಕಿದೆ.

ಬಾಗಲಕೋಟೆ–ಕುಡಚಿ ಮಾರ್ಗ ಮಂದಗತಿಯಲ್ಲಿ ಸಾಗಿದೆ. ಭೂಸ್ವಾಧೀನ ಮಾಡದ್ದರಿಂದ ಕಾಮಗಾರಿ ವಿಳಂಬವಾಯಿತು ಎಂಬುದು ಆಡಳಿತಾತ್ಮಕ ಸಮಸ್ಯೆ. ಸ್ವಾಧೀನ ಮಾಡುವಂತೆ ಮಾಡಬೇಕಾದ ಜವಾಬ್ದಾರಿ ಸಂಸದರ ಮೇಲಿದೆ. ಅದಕ್ಕೇ ಅಲ್ಲವೇ ಜನರು ಆಯ್ಕೆ ಮಾಡಿರುವುದು. ಕೊನೆಗೂ ಭಸ್ವಾಧೀನ ಪೂರ್ಣಗೊಂಡಿದೆ ಎನ್ನುತ್ತಿದ್ದಾರೆ. ಕಾಮಗಾರಿಗೆ ಬೇಕಾದ ಅನುದಾನ ತಂದು ದಶಕದಿಂದ ನಡೆದಿರುವ ಕಾಮಗಾರಿ ಪೂರ್ಣಗೊಳಿಸಬೇಕಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿ ಮಂದಗತಿಯಲ್ಲಿ ನಡೆದಿದೆ. ಐ ತೀರ್ಪು ಹೊರಬಿದ್ದು ದಶಕ ಕಳೆದಿದ್ದರೂ, ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್‌ ಹೊರಡಿಸಿಲ್ಲ. ರಾಜ್ಯಗಳ ನಡುವಿನ ವ್ಯಾಜ್ಯವನ್ನು ಕೇಂದ್ರ ಮಧ್ಯಪ್ರವೇಶಿಸಿ ಬಗೆಹರಿಸುವ ಮೂಲಕ ನೀರಿನ ಬಳಕೆಗೆ ಅವಕಾಶ ನೀಡಬೇಕಿದೆ.

ADVERTISEMENT

ಯುಕೆಪಿ ಯೋಜನೆ ಪೂರ್ಣಗೊಳಿಸಲು ಲಕ್ಷ ಕೋಟಿಗೂ ಹೆಚ್ಚು ಮೊತ್ತ ಬೇಕಿದೆ. ದೊಡ್ಡ ಮೊತ್ತ ಬೇಕಿರುವುದರಿಂದ ಇದನ್ನು ರಾಷ್ಟ್ರೀಯ ಯೋಜನೆಯನ್ನಾಗಿಸಿ, ಕೇಂದ್ರದಿಂದ ಅನುದಾನ ಒದಗಿಸುವ ಕೆಲಸ ಆಗಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ. ಈ ನಿಟ್ಟಿನಲ್ಲಿಯೂ ಪ್ರಯತ್ನಗಳಾಗಬೇಕಿದೆ.

ಜಲ ಜೀವನ್‌ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲ ಗ್ರಾಮಗಳ ಮನೆಗಳ ಮನೆ ಬಾಗಿಲಿಗೆ ನಳದ ಸಂಪರ್ಕ ಕಲ್ಪಿಸಲಾಗುತ್ತಿದೆ. ಆದರೆ, ಕಾಮಗಾರಿಯ ಗುಣಮಟ್ಟದ ಬಗ್ಗೆ ಆಗಾಗ್ಗೆ ದೂರುಗಳು ಕೇಳಿ ಬಂದಿವೆ. ಸಂಸದರ ಪ್ರಗತಿ ಪರಿಶೀಲನೆ ಸಭೆಯಲ್ಲಿಯೂ ಪ್ತಸ್ತಾಪವಾಗಿತ್ತು. ಕಾಮಗಾರಿ ಸರಿಪಡಿಸುವ ಕೆಲಸ ಆಗಬೇಕಿದೆ.

ನೇಕಾರರು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿದ್ದಾರೆ. ಕೇಂದ್ರದ ಜವಳಿ ಇಲಾಖೆಯಿಂದ ಹೆಚ್ಚಿನ ನೆರವು ಒದಗಿಸುವ, ಈಗಾಗಲೇ ಘೋಷಣೆಯಾಗಿರುವ ಟೆಕ್ಸ್‌ಟೈಲ್‌ಗಳ ಪಾರ್ಕ್‌ ಆರಂಭಕ್ಕೂ ಕ್ರಮಕೈಗೊಳ್ಳಬೇಕಿದೆ. 

ಪಣಜಿ–ಹೈದರಾಬಾದ್ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆರಂಭವಾಗುತ್ತಿದೆ. ಅದು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಕೆಲಸ ಆಗಬೇಕಿದೆ. ₹969 ಕೋಟಿ ವೆಚ್ಚದಲ್ಲಿ ಬಾಣಾಪುರ–ಗದ್ದನಕೇರಿ ಹೆದ್ದಾರಿ, ಶಿರೂರದಿಂದ ಗದ್ದನಕೇರಿವರೆಗೆ ಚತುಷ್ಪತ ರಸ್ತೆಯಾಗಿ ಅಗಲೀಕರಣ ಕಾಮಗಾರಿ ನಡೆದಿದೆ. ಅದು ಪೂರ್ಣಗೊಳ್ಳಲು ಕ್ರಮಕೈಗೊಳ್ಳಬೇಕಾಗಿದೆ.

ಜಿಲ್ಲೆಗೊಂದು ವಿಮಾನ ನಿಲ್ದಾಣಗಳಾಗುತ್ತಿವೆ. ಪಕ್ಕದ ಜಿಲ್ಲೆಯ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಕಾದಿದೆ. ಬಾಗಲಕೋಟೆಯಲ್ಲಿಯೂ ಭೂಸ್ವಾಧೀನ ಕಾರ್ಯ ಆರಂಭವಾಗಿತ್ತು. ಅದು ಈಗ ಅತಂತ್ರ ಸ್ಥಿತಿಯಲ್ಲಿದೆ. ಎಲ್ಲಿ ನಿರ್ಮಿಸಬೇಕು ಎಂಬುದನ್ನು ನಿರ್ಧರಿಸಿ, ವಿಮಾನ ಸಂಚಾರ ಆರಂಭಕ್ಕೆ ಮುಂದಾಗಬೇಕಿದೆ.

ಸಂಸದರ ಅನುದಾನ ಬಳಕೆ ಸದ್ಬಳಕೆಯಾಗಲಿ: ಸಂಸದರಿಗೆ ಪ್ರತಿ ವರ್ಷ ನೀಡುವ ಅನುದಾನದಲ್ಲಿ ಬಹುತೇಕ ಮೊತ್ತವನ್ನು ಸಮುದಾಯ ಭವನಗಳ ನಿರ್ಮಾಣಕ್ಕೆ ನೀಡಲಾಗಿದೆ. ಆದರೆ, ಸಾಕಷ್ಟು ಕಡೆಗಳಲ್ಲಿ ಸಮುದಾಯ ಭವನಗಳ ನಿರ್ಮಾಣ ಪೂರ್ಣಗೊಂಡಿಲ್ಲ. ಅವುಗಳ ಬಳಕೆಯೂ ಸರಿಯಾಗಿ ಆಗುತ್ತಿಲ್ಲ. ಈ ಕಡೆಗೆ ಗಮನ ಹರಿಸಬೇಕಿದೆ.

ಪ್ರಮುಖ ಸವಾಲುಗಳು

  • ಬಾಗಲಕೋಟೆ–ಕುಡಚಿ ರೈಲು ಮಾರ್ಗ

  • ವಿಮಾನ ನಿಲ್ದಾಣ ನಿರ್ಮಾಣ

  • ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು

  • ಯುಕೆಪಿ ಯೋಜನೆಗೆ ಕೇಂದ್ರದಿಂದ ಅನುದಾನ

  • ಕೈಗಾರಿಕೆಗಳ ಸ್ಥಾಪನೆ

  • ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿ

  • ಏಮ್ಸ್‌ ಬೇಡಿಕೆಗೆ ಸ್ಪಂದನೆ

  • ನೇಕಾರರ ಅಭಿವೃದ್ಧಿಗೆ ಕೇಂದ್ರದ ಯೋಜನೆಗಳ ಜಾರಿ

  • ವಿಶೇಷ ಯೋಜನೆಗಳ ತರಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.