ADVERTISEMENT

ಬಾಗಲಕೋಟೆ: ಜಿಲ್ಲಾಡಳಿತ ಭವನದ ಕಚೇರಿಗಳಿಗೆ ಹೋಗಲು ದಾರಿ ಯಾವುದಯ್ಯ?

ಜಿಲ್ಲಾಡಳಿತ ಭವನದಲ್ಲಿ ಮಾರ್ಗಸೂಚಿ ಫಲಕವಿಲ್ಲ

ಬಸವರಾಜ ಹವಾಲ್ದಾರ
Published 12 ಜುಲೈ 2024, 7:16 IST
Last Updated 12 ಜುಲೈ 2024, 7:16 IST
ಬಾಗಲಕೋಟೆಯ ಜಿಲ್ಲಾಡಳಿತ ಭವನದ ಫಲಕದಲ್ಲಿ 223 ಕೊಠಡಿಯಲ್ಲಿ ಉಪ ಅರಣ್ಯ ಇಲಾಖೆ ಕಚೇರಿಯಿದೆ ಎಂದಿದ್ದು, ವಾಸ್ತವದಲ್ಲಿ ಕರ್ನಾಟಕ ಗೃಹ ಮಂಡಳಿ ಕಚೇರಿ ಇರುವುದನ್ನು ಕಾಣಬಹುದಾಗಿದೆ
ಬಾಗಲಕೋಟೆಯ ಜಿಲ್ಲಾಡಳಿತ ಭವನದ ಫಲಕದಲ್ಲಿ 223 ಕೊಠಡಿಯಲ್ಲಿ ಉಪ ಅರಣ್ಯ ಇಲಾಖೆ ಕಚೇರಿಯಿದೆ ಎಂದಿದ್ದು, ವಾಸ್ತವದಲ್ಲಿ ಕರ್ನಾಟಕ ಗೃಹ ಮಂಡಳಿ ಕಚೇರಿ ಇರುವುದನ್ನು ಕಾಣಬಹುದಾಗಿದೆ   

ಬಾಗಲಕೋಟೆ: ಜಿಲ್ಲಾಡಳಿತ ಭವನದೊಳಗೆ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಬಹುತೇಕ ಇಲಾಖೆಗಳ ಕಚೇರಿಗಳು ಇವೆ. ಆದರೆ, ಯಾವ ಕಚೇರಿ, ಯಾವ ಕಡೆ ಇದೆ. ಯಾವ ಮಹಡಿಯಲ್ಲಿದೆ ಎಂಬ ಮಾರ್ಗಸೂಚಿ ಫಲಕವು ಕಚೇರಿಯ ಆರಂಭದಲ್ಲಿ ಇಲ್ಲದಿರುವುದರಿಂದ ಸಾರ್ವಜನಿಕರು ಕಚೇರಿ ಹುಡಕಲು ಪರದಾಡಬೇಕಿದೆ.

ಜಿಲ್ಲಾಡಳಿತ ಭವನ ಪ್ರವೇಶ ದ್ವಾರದ ಬಳಿ ಭವನದಲ್ಲಿರುವ ವಿವಿಧ ಕಚೇರಿಗಳ ಮಾರ್ಗದರ್ಶಿ ಮ್ಯಾಪ್‌ ಇತ್ತು. ಭವನಕ್ಕೆ ಬಣ್ಣ ಬಳಿಯುವಾಗ ಅದನ್ನು ಕಿತ್ತು ಹಾಕಿ ವರ್ಷಗಳೇ ಕಳೆದಿವೆ. ಮತ್ತೆ ಅದನ್ನು ಅಳವಡಿಸುವ ಕೆಲಸ ಆಗಿಲ್ಲ. ಇದರಿಂದಾಗಿ ವಿವಿಧ ಕೆಲಸಗಳಿಗಾಗಿ ಕಚೇರಿಗೆ ಬರುವ ಜನರು ಕಚೇರಿ ಹುಡುಕಿಕೊಂಡು ಹೋಗಬೇಕಾಗಿದೆ.

ಜನರು ಅಲೆದಾಡುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಭವನದಲ್ಲಿ ಬಹುತೇಕ ಕಚೇರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಭವನದೊಳಗೆ ಜನರು ಕಾರಿಡಾರ್‌ನಲ್ಲಿ ಅಲೆದಾಡುವವರನ್ನು ಕೇಳಿಕೊಂಡು ಓಡಾಡಬೇಕಿದೆ. ಅಲ್ಲಿರುವರು ಗೊತ್ತಿಲ್ಲ ಎಂದಾಗ ಎಲ್ಲಿ ಹೋಗಬೇಕು ಎಂಬ ಗೊಂದಲ ಅವರನ್ನು ಕಾಡುತ್ತದೆ.

ADVERTISEMENT

ವಿವಿಧ ಮಹಡಿಗಳಲ್ಲಿ ಈಗಲೇ ಕಚೇರಿಯ ಕೊಠಡಿ ಸಂಖ್ಯೆ, ಕಚೇರಿಗೆ ಹೋಗುವ ಮಾರ್ಗ ತೋರಿಸುವ ಫಲಕಗಳು ಇವೆ. ಅವುಗಳನ್ನು ಬಹಳ ವರ್ಷಗಳ ಹಿಂದೆಯೇ ಹಾಕಲಾಗಿದೆ. ಈಗ ಆ ಕೊಠಡಿಗಳಲ್ಲಿ ಬೇರೆ ಕಚೇರಿಗಳು ಬಂದಿದ್ದರೂ ಫಲಕ ಮಾತ್ರ ಹಳೆಯದ್ದೇ ಇದೆ. ಇದರಿಂದಾಗಿ ಜನರ ಅಲೆದಾಟ ತಪ್ಪುತ್ತಿಲ್ಲ.

223ನೇ ಕೊಠಡಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿಬ್ಬಂದಿ ಕಚೇರಿ ಇದೆ ಎಂದಿದೆ. ಆದರೆ, ಅಲ್ಲಿ ಈಗ ಕರ್ನಾಟಕ ಗೃಹ ಮಂಡಳಿಯ ಕಚೇರಿ ಇದೆ. ಇದೇ ಮಹಡಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಎಂದಿದೆ. ಅದು ಕೆಳಗಿನ ಮಹಡಿ ಸ್ಥಳಾಂತರವಾಗಿ ಹಲವಾರು ವರ್ಷಗಳೇ ಕಳೆದಿವೆ. ಆದರೆ, ಫಲಕಗಳನ್ನು ಮಾತ್ರ ಬದಲಾವಣೆ ಮಾಡಿಲ್ಲ.

ಮೇಲಿನ ಮಹಡಿಗಳಿಗೆ ಹೋಗಲು ಮೊದಲ ಹಾಗೂ ಹಿಂದಿನ ಭಾಗದ ಮಹಡಿಗಳಿಗೆ ಹೋಗಲು ಲಿಫ್ಟ್‌ಗಳನ್ನು ಅಳವಡಿಸಲಾಗಿದೆ. ಆದರೆ, ಲಿಫ್ಟ್‌ಗಳು ಎಲ್ಲಿವೆ ಎಂಬುದನ್ನು ಹುಡುಕಿಕೊಂಡು ಹೋಗಬೇಕಾಗಿದೆ. ವಯಸ್ಸಾದವರೂ, ಆರೋಗ್ಯ ಸಮಸ್ಯೆ ಹೊಂದಿದವರೂ ಮೆಟ್ಟಿಲುಗಳನ್ನು ಹತ್ತಿಕೊಂಡೇ ಹೋಗಬೇಕಾದ ಸ್ಥಿತಿ ಎದುರಾಗಿದೆ.

ಅಲ್ಲಲ್ಲಿ ಸಾರ್ವಜನಿಕರಿಗಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.