ರಬಕವಿ ಬನಹಟ್ಟಿ: ಸಮೀಪದಲ್ಲಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಇಲ್ಲಿಯ ಶ‍್ರೀಶೈಲ ಭ್ರಮರಾಂಬಾ ಮಲ್ಲಿಕಾರ್ಜುನ ದಾಸೋಹ ಸೇವಾ ಸಮಿತಿಯವರು ಗುರುವಾರ ಬಾಗಿನ ಅರ್ಪಿಸಿದರು.
ಸೇವಾ ಸಮಿತಿಯ ಸದಸ್ಯ ಮಹಾರುದ್ರಪ್ಪ ಬರಗಲ ಕೃಷ್ಣಾ ನದಿಗೆ ಪೂಜೆ ಸಲ್ಲಿಸಿದ ನಂತರ ಸಮಿತಿಯ ಸದಸ್ಯರು ಹಾಗೂ ನಗರದ ಪ್ರಮುಖರು ಕೂಡಿಕೊಂಡು ಬಾಗಿನ ಅರ್ಪಿಸಿದರು.
ಕಳೆದ ಬಾರಿ ಮಳೆಯ ಕೊರತೆಯಿಂದಾಗಿ ಈ ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿತ್ತು. ಕೆಲವು ದಿನಗಳ ಕಾಲ ನೀರಿನ ಸಮಸ್ಯೆಯಾಗಿತ್ತು. ಈಗ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಸುತ್ತ ಮುತ್ತಲಿನ ತಾಲ್ಲೂಕಿನ ರೈತರಲ್ಲಿ ಮತ್ತು ಜನರಲ್ಲಿ ಸಂತೋಷವನ್ನುಂಟು ಮಾಡಿದೆ ಎಂದು ಮಹಾರುದ್ರಪ್ಪ ಬರಗಲ ತಿಳಿಸಿದರು.
ನಗರದ ಪ್ರಮುಖರಾದ ಸಿದ್ದನಗೌಡ ಪಾಟೀಲ, ಶ್ರೀಶೈಲ ಧಬಾಡಿ, ಸಿದ್ಧರಾಜ ಪೂಜಾರಿ, ಗುರು ಕಾಡದೇವರ, ಶಿವಕುಮಾರ ಜುಂಜಪ್ಪನವರ, ಗುರು ಗಾಣಿಗೇರ, ಮುತ್ತಪ್ಪ ಗುಂಡಿ, ಭೀಮಶಿ ಮನವಡ್ಡರ, ಮಲ್ಲಪ್ಪ ಹನಗಂಡಿ, ಬಸಪ್ಪ ಕೊಣ್ಣೂರ, ಮಹಾನಿಂಗಪ್ಪ ಮಂಡಿ, ಅಶೋಕ ಚಿಂಡಕ, ಈರಯ್ಯ ಕತ್ತಿ, ಮಹಾದೇವ ಬಾಗಲಕೋಟ, ಅರುಣ ಕುಲಕರ್ಣಿ, ಈರಪ್ಪ ಬರಗಲ, ರವಿ ಪುಂಡೆ ಇದ್ದರು.
ಹಿಪ್ಪರಗಿ ಜಲಾಶಯಕ್ಕೆ 60,310 ಕ್ಯುಸೆಕ್ ಒಳ ಹರಿವು: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಗುರುವಾರ ಬೆಳಿಗ್ಗೆ ಒಟ್ಟು 60,310 ಕ್ಯುಸೆಕ್ ಒಳ ಹರಿವು ಇದ್ದು, 64,884 ಕ್ಯುಸೆಕ್ ಹೊರ ಹರಿವು ಇದೆ. ಗರಿಷ್ಠ 524.87 ಮೀಟರ್ ನೀರಿನ ಮಟ್ಟ ಮತ್ತು ಆರು ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಬ್ಯಾರೇಜ್‌ನಲ್ಲಿ ಸದ್ಯ 2.38 ಕ್ಯುಸೆಕ್ ನೀರು ಇದೆ ಎಂದು ಜಮಖಂಡಿಯ ಹಿರಿಯ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.