ADVERTISEMENT

ಬಾಗಲಕೋಟೆ: ಗದ್ದಿಗೌಡರ ಮೇಲೆ ಪ್ರೀತಿ; ವೀಣಾಗೂ ಅಕ್ಕರೆ

ಅಖಾಡದಲ್ಲೊಂದು ಸುತ್ತು

ವಿಶಾಲಾಕ್ಷಿ
Published 7 ಮೇ 2019, 6:42 IST
Last Updated 7 ಮೇ 2019, 6:42 IST
ಕೂಡಲಸಂಗಮದ ಬಸವೇಶ್ವರ ಐಕ್ಯಮಂಟಪ
ಕೂಡಲಸಂಗಮದ ಬಸವೇಶ್ವರ ಐಕ್ಯಮಂಟಪ   

ಬಾಗಲಕೋಟೆ: ಹ್ಯಾಟ್ರಿಕ್‌ ಗೆಲುವಿನ ಸಂಸದ, ಬಿಜೆಪಿಯ ಪಿ.ಸಿ. ಗದ್ದಿಗೌಡರ ಹಾಗೂ ಕ್ಷೇತ್ರದ ಮೊದಲ ಮಹಿಳಾ ಅಭ್ಯರ್ಥಿ ಕಾಂಗ್ರೆಸ್‌ನ ವೀಣಾ ಕಾಶಪ್ಪನವರ ಇಬ್ಬರ ಬಗೆಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಒಳ್ಳೆಯ ಮಾತುಗಳು ಕೇಳಿಬರುತ್ತವೆ.

ಗದ್ದಿಗೌಡರ ಸಜ್ಜನಿಕೆ, ಕಳಂಕರಹಿತ ವ್ಯಕ್ತಿತ್ವಕ್ಕಾಗಿ ಇಲ್ಲಿನ ಜನ ಅವರ ಬಗ್ಗೆ ಮೆಚ್ಚುಗೆಯ ಮಾತಾಡಿದರೆ, ವೀಣಾರ ಕೆಲಸ ಹಾಗೂ ನಡುವಳಿಕೆ ಎರಡಕ್ಕೂ ಶಹಬ್ಬಾಸ್‌ ಹೇಳುತ್ತಾರೆ. ಒಬ್ಬರು ಮೋದಿ ಬಲಪಡಿಸಲು; ಇನ್ನೊಬ್ಬರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲ ಇರುವವರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ವೀಣಾ ಕಾಶಪ್ಪನವರ ಮಾಡಿದ ಕೆಲಸ, ಗ್ರಾಮವಾಸ್ತವ್ಯ, ನೀರಿನ ಸಮಸ್ಯೆಗೆ ಸ್ಪಂದಿಸಿದ ಪರಿ ಅವರ ಕೈಹಿಡಿಯುವ ವಿಶ್ವಾಸ ಕ್ಷೇತ್ರದಲ್ಲಿದೆ. ಇದೇ ವೇಳೆಗೆ, ಅವರ ಪತಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರ ನಡವಳಿಕೆ ಬಗ್ಗೆ ಇರುವ ಆಕ್ರೋಶ, ಅಸಮಾಧಾನ ವೀಣಾಗೆ ಮುಳುವಾಗುವ ಅಪಾಯವನ್ನೂ ಉಸುರುತ್ತಾರೆ ಜನ.

ಮೂರು ಬಾರಿ ಅಲೆಯ ಮೇಲೇ ಗದ್ದುಗೆ ಹಿಡಿದ ಗದ್ದಿಗೌಡರಿಗೆ ಈ ಸಲವೂ ಮೋದಿಯ ಅಲೆಯೇ ಬಲ. ಮೋದಿಗಾಗಿ ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕೆನ್ನುವವರ ಸಂಖ್ಯೆ ಹೆಚ್ಚಿದೆ. ‘ಒಳ್ಳೆಯ ಮನುಷ್ಯ’ ಎಂಬ ಸರ್ಟಿಫಿಕೇಟ್‌ ಇದ್ದರಷ್ಟೇ ಸಾಲದು. ಮೂರು ಸಲ ಆಯ್ಕೆಯಾಗಿ ಬಂದವರಿಂದ ಏನಾದರೂ ಕೆಲಸ ಆಗಬೇಕಲ್ಲ? ಎಂದೂ ಜನರು ಕೇಳುತ್ತಿದ್ದಾರೆ. ಹೀಗಾಗಿ, ಈ ಸಲ ಕ್ಷೇತ್ರದಲ್ಲಿ ಬದಲಾವಣೆ ಬೇಕು ಎನ್ನುವ ಕೂಗೂ ಬಲವಾಗಿ ಕೇಳಿಬರುತ್ತಿದೆ.

‘ಆಕಳು ಚೊಲೊ ಐತಿ ಹೌದು. ಆದರೆ ಹಿಂಡುವುದಿಲ್ಲ ಎಂದರೆ ಅದನ್ನು ತೆಗೆದುಕೊಂಡು ಏನು ಮಾಡುವುದು?’ ಎಂದು ಬಾದಾಮಿಯ ರಾಘವೇಂದ್ರ ಹರ್ತಿ ಕೇಳಿದರೆ; ಅವರ ಸ್ನೇಹಿತರಾದ ಇಷ್ಟಲಿಂಗ ನರೇಗಲ್, ಮಹಾಂತೇಶ ವಡ್ಡರ, ರಮೇಶ ಗುಡಿಮನಿ ಅವರು, ಸಜ್ಜನಿಕೆ ಮತ್ತು ಕೆಲಸ (ಶೇ20) ಹಾಗೂ ಮೋದಿ ಅಲೆ (ಶೇ 80) ಮೇಲೆ ಗದ್ದಿಗೌಡರ ಆಯ್ಕೆ ಖಚಿತ ಎನ್ನುತ್ತಾರೆ. ‘ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದ ಬಾಲಾಕೋಟ ದಾಳಿ ಯುವಕರ ಮನಸ್ಸಿಗೆ ನಾಟಿದೆ. ಅದೊಂದೇ ಮೋದಿ ಮತ್ತೊಮ್ಮೆ ಆರಿಸಿ ಬರಲು ಸಾಕು’ ಎನ್ನುತ್ತಾರೆ ಅವರು.

ಒಂದಾದರೂ ಎಕ್ಸ್‌ಪ್ರಸ್‌ ರೈಲು ನಿಲ್ಲಿಸಬಾರದಿತ್ತಾ?: ಹದಿನೈದು ವರ್ಷ ಎಂಪಿ ಆದವರಿಗೆ, ಬಾದಾಮಿಯಲ್ಲಿ ಒಂದಾದರೂ ಎಕ್ಸ್‌ಪ್ರೆಸ್ ಟ್ರೇನ್‌ ನಿಲ್ಲಿಸುವುದಾಗಲಿಲ್ಲ ಎಂದು ವಿಷಾದಿಸುತ್ತಾರೆ ನಿವೃತ್ತ ಪ್ರಾಧ್ಯಾಪಕ ಎಸ್. ಎಚ್‌. ವಾಸನದ. ವಿಶ್ವ ಪಾರಂಪರಿಕ ತಾಣವೆನಿಸಿದ ಪಟ್ಟದಕಲ್ಲಿಗೆ ಸಮೀಪದಲ್ಲಿರುವ ಬಾದಾಮಿಯಲ್ಲಿ ಯಾವುದಾದರೂ ಒಂದು ಎಕ್ಸ್‌ಪ್ರಸ್‌ ರೈಲು ಒಂದು ನಿಮಿಷ ಸ್ಟಾಪ್‌ ಕೊಟ್ಟಿದ್ದರೂ ಸಾಕಿತ್ತು; ಪ್ರವಾಸೋದ್ಯಮ ಬೆಳೆಯುತ್ತಿತ್ತು. ‘ರೈಲ್ವೆ ಮೇಲ್ಸೇತುವೆ ಆಗಬೇಕಿತ್ತು, ಚಂದೂರು ಕೆರೆ ‍ಪಕ್ಷಿಧಾಮ ಮಾಡಬೇಕಿತ್ತು. ಆಗಸ್ತ್ಯತೀರ್ಥದ ಮೇಲೆ 96 ಮನಗೆಳು ಸ್ಥಳಾಂತರ ಆಗಬೇಕಿತ್ತು...’ ಹೀಗೆ ಆಗಬೇಕಿದ್ದ ಕೆಲಸಗಳ ಪಟ್ಟಿಯನ್ನು ಮುಂದಿಟ್ಟ ಅವರು, ಸಂಸದರಾಗಿ ಮಾಡಬೇಕಾದ ಕೆಲಸದಲ್ಲಿ ಗದ್ದಿಗೌಡರ ಅವರು ಕನಿಷ್ಠ ಪ್ರಯತ್ನವನ್ನೂ ಹಾಕಲಿಲ್ಲ ಎಂದು ಬೇಸರಿಸುತ್ತಾರೆ.

‘ಯಾವುದೇ ಒಂದು ದೊಡ್ಡ ಯೋಜನೆಯನ್ನು ಕ್ಷೇತ್ರಕ್ಕೆ ತಂದಿಲ್ಲ. ಹೃದಯ, ಅಮೃತ, ನಗರೋತ್ಥಾನ ಸ್ಕೀಂನಲ್ಲಿ ಸೇರಿಸಿದ್ದಕ್ಕಾಗಿ ಬಾದಾಮಿ ತುಸು ಅಭಿವೃದ್ಧಿ ಆಗಿದೆ. ಇವರೇನು ಸ್ವಂತ ಸಾಮರ್ಥ್ಯದಿಂದ ಒಂದೂ ಯೋಜನೆ ತಂದಿಲ್ಲ. ನಮ್ಮವರು ಸಜ್ಜನರು ಅನ್ನೋದನ್ನು ಬಿಟ್ಟರೆ, ಕೆಲಸದಲ್ಲಿ ಬಿಗ್‌ ಜೀರೊ’ ಎಂದರು.

‘ಮೋದಿ ಹೊರತು ಬೇರೆ ಆಯ್ಕೆಯೇ ಇಲ್ಲ’ ಎನ್ನುತ್ತಾರೆ ಬನಹಟ್ಟಿಯ ಮೆಡಿಕಲ್‌ ಶಾಪ್‌ನ ವಿಜಯಾನಂದ ಹೊಸೂರು, ಬದರೀನಾರಾಯಣ ಭಟ್ಟಡ. ಮಿರ್ಚಿಬಜಿ ಅಂಗಡಿಯಲ್ಲಿ ಸಿಕ್ಕ ಯುವಕರಾದ ಶ್ರೀಶೈಲ, ರಮೇಶ ಅವರಿಗೆ ಗದ್ದಿಗೌಡರ ಸಜ್ಜನಿಕೆ ಮೆಚ್ಚು. ಆದರೆ, ಮೋದಿ ಅಲೆ ಈ ಸಲವೂ ಪೂರ್ತಿ ಕೆಲಸ ಮಾಡೀತು ಎನ್ನುವ ವಿಶ್ವಾಸ ಇಲ್ಲ. ಏಕೆಂದರೆ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ತಮಗೆ ಪ್ರತಿಷ್ಠೆ ಎನಿಸಿದ ಈ ಕ್ಷೇತ್ರವನ್ನು ಬಿಜೆಪಿಗೆ ಸುಲಭದ ತುತ್ತಾಗಿಸರು; ಜಿದ್ದಾಜಿದ್ದಿ ಇರುತ್ತದೆ ಎನ್ನುತ್ತಾರೆ.

ನರಗುಂದ ತಾಲ್ಲೂಕು ಕಲಕೇರಿಯ ಲಿಂಗಪ್ಪ ಮತ್ತು ಫಕೀರಪ್ಪ, ‘ಅವರು ಕೆಲ್ಸ ಮಾಡ್ಲಿ ಬಿಡ್ಲಿ. ಮೋದಿ ಮುಖ ನೋಡಿ ವೋಟ್‌ ಮಾಡ್ತೇವಿ’ ಎನ್ನುತ್ತಾರೆ. ಉಡಚಾಪರಮೇಶ್ವರಿ ದೇವಸ್ಥಾನದ ವಿಶಾಲ ಅರಳೀಕಟ್ಟೆಯ ಮೇಲೆ ಚೌಕಾಬಾರಾ ಆಡುತ್ತಿದ್ದವರನ್ನು ಮಾತಿಗೆಳೆದರೆ, ‘ನೀರಿಲ್ಲ ನಿಡಿ ಇಲ್ಲ. ದನಕರಾ ಸಾಯಕತ್ತಾವು. ಕುಂತೇವಿ ನೋಡ್ರಿ. ಕಳಸಾ ಬಂಡೂರೀದ ಪರ್ಲ ಹರದಿದ್ರ ಅನುಕೂಲ ಆಗ್ತಿತ್ತು’ ಎಂದು ಸಮಸ್ಯೆ ಎದುರಿಗಿಟ್ಟರು ಪರಮೇಶ ಸೀತೊಳೆ, ಗೋವಿಂದ, ವಿಠ್ಠಲ ಜಿಡ್ಡಿಮನಿ. ಕಳಸಾ– ಬಂಡೂರಿ ನಾಲಾ ಜೋಡಣೆಯ ಹೋರಾಟದ ನೆಲವಾದ ಇಲ್ಲಿನ ಜನರು ನೀರು ಕೊಟ್ಟವರಿಗೆ ತಮ್ಮ ವೋಟು ಎನ್ನುತ್ತಿದ್ದಾರೆ.

ಕೊಣ್ಣೂರಿನ ಹಾಲುಮತದ ಸಮುದಾಯದ ಬೀರಪ್ಪ, ಯಲ್ಲಪ್ಪ ಅವರು, ಗದ್ದಿಗೌಡರ ಮನಸು ಮಾಡಿದ್ದರೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾಗುತ್ತಿತ್ತು ಎನ್ನುತ್ತಾರೆ. ಮಳೆ ಇಲ್ಲದೇ ಕಂಗಾಲಾಗಿರುವ ಇಲ್ಲೆಲ್ಲ ಅನ್ನಭಾಗ್ಯ, ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆ ಆಸರೆಯಾಗಿದ್ದನ್ನು ನೆನೆಯುತ್ತಾರೆ.

ಕುಳಗೇರಿ ಕ್ರಾಸ್‌ನಲ್ಲಿ ಸಿಕ್ಕ ಬಹುತೇಕರು ‘ಮನಷ್ಯಾ ಚೊಲೊ. ಮೋದಿ ಸಲುವಾಗಿ ಇನ್ನೊಮ್ಮೆ ಆರಿಸಿ ಬರ್ಲಿ’ ಎಂದರು. ವೀಣಾ ಕಾಶಪ್ಪನವರ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಬಿಜೆಪಿಯ ಲಿಂಗಾಯತ ಮತಗಳೆಲ್ಲ ಈ ಸಲ ಅತ್ತಲೇ ಹರಿಯುತ್ತವೆ. ಹೀಗಾಗಿ ‘ಫೈಟ್‌ ಟಫ್‌ ಐತಿ’ ಎಂದು ಮುತ್ತಪ್ಪ ಗಾಜಿ ವಿಶ್ಲೇಷಿಸಿದರು. ಆದರೆ, ಅಂತರ ಕಡಿಮೆಯಾದರೂ ಗದ್ದಿಗೌಡರ ಗೆಲ್ಲುವ ವಿಶ್ವಾಸ ಅವರದು.

‘ಯಾವುದಾದರೂ ಉದ್ದಿಮೆ ತರಬೇಕಿತ್ತು. ಗುಳೇ ತಡೆಗೆ ಮುಂದಾಗಬೇಕಿತ್ತು. ಆದರೆ ಮೂರು ಅವಧಿಯಲ್ಲಿ ನಿರೀಕ್ಷಿತ ಕೆಲಸ ಮಾಡಲಿಲ್ಲ’ ಎಂದು ಶಿಕ್ಷಕ ಮಹಾಲಿಂಗಪ್ಪ ಬೇಸರ ಮಾಡಿಕೊಂಡರೆ, ‘ಕ್ಷೇತ್ರ ಸುತ್ತಿಲ್ಲ. ನಾಕ ಮಂದಿನ್ನ ಮಾತಾಡಿಸಿಲ್ಲ. ರಸ್ತೆ ಮಾಡಿಸಿಲ್ಲ. ಕಿಸಾನ್‌ ಸಮ್ಮಾನ್‌ ತೊಗೊಂಡ್‌ ಏನ್‌ ಮಾಡ್ತೀರಿ? ಭೂಮಿ ಇದ್ದವ್ರು ಹದ್ನಾರ ಆಣೆದಾಗ ನಾಕಾಣೆ ಅಷ್ಟ. ಉಳದವ್ರೆಲ್ಲ ದುಡ್ಕೊಂಡ್‌ ತಿನ್ನೋರು. ಅವರಿಗೆ ಏನ್‌ ಮಾಡ್ಯಾರ? ರೈತರಿಗೆ ನೀರು ಕೊಟ್ರ ಹೊಳ್ಳಿ ಸರ್ಕಾರಕ್ಕ... ಸಾಲ ಕೊಡ್ತಾರ’ ಎಂಬುದು ಹೋಟೆಲ್‌ ನವೀನ್‌ನಲ್ಲಿ ಸಿಕ್ಕ ಬಸವರಾಜ ಅವರ ವಾದ.

‘ಹೊಸಮುಖ. ಯುವ ಮಹಿಳೆ ಮೇಲಾಗಿ ಕೆಲಸಗಾರ್ತಿ. ಕ್ಷೇತ್ರದ ಬಗ್ಗೆ ವೀಣಾ ಮಾತಾಡ್ತಾರೆ. ಅವರೇ ಗೆಲ್ತಾರೆ’ ಎಂಬುದು ಮುಧೋಳದ ಹನುಮಂತ ತೇಲಿ, ಅಡವಿ, ಬಳಿಗಾರ, ಬಸವರಾಜ ಯಡಹಳ್ಳಿ, ಶಿವು ಸ್ವತಂತ್ರಮಠ ಅವರ ಅನಿಸಿಕೆ. ಅಮೀನಗಡದ ಕಬ್ಬಿನ ಹಾಲಿನ ಅಂಗಡಿಯ ಪ್ರಕಾಶ, ಹುನಗುಂದದ ಶಿವಾನಂದ, ರಮೇಶ ಹುಣಸೀಗಿಡದ ಅವರು, ‘ವೀಣಾ ಪರಿಚಿತ ಮುಖ. ಗ್ರಾಮ ವಾಸ್ತವ್ಯ ಮಾಡಿ ಜನರ ಮನಸ್ಸು ಗೆದ್ದಿದ್ದಾರೆ’ ಎನ್ನುತ್ತಾರೆ.

ಮೋದಿ ಬಂದು ಹೋದ ಮೇಲೆ ಬಿಜೆಪಿ ಹವಾ ಇನ್ನೂ ಜಾಸ್ತಿಯಾಗುತ್ತದೆ ಎನ್ನುವ ಬಿಜೆಪಿ ಬೆಂಬಲಿಗರು, ಬದಲಾವಣೆ ಬೇಕು ಎನ್ನುವವರು ಕೂಡ ಮೋದಿಯೊಂದಿಗೇ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ‘ಸಿದ್ದರಾಮಯ್ಯ ಬಂದು ಹೋದರೆ ಸಾಕು; ಮೋದಿ ಆಟ ಇಲ್ಲಿ ನಡೆಯದು. ಮೋದಿಯ ಅಲೆಯ ಪ್ರವಾಹಕ್ಕೆ ಸಿದ್ದರಾಮಯ್ಯಗೆ ಮಾತ್ರ ಒಡ್ಡು ಕಟ್ಟಲು ಸಾಧ್ಯ. ಆದರೆ, ಮೈಸೂರೊಂದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡು ಬಾಗಲಕೋಟೆ ಮರೆತರೆ ಕಷ್ಟ’ ಎಂದು ವಿಶ್ಲೇಷಿಸುತ್ತಾರೆ.

ಯುವಕರು ರಾಷ್ಟ್ರೀಯ ಭದ್ರತೆ, ಬಾಲಾಕೋಟ ಸರ್ಜಿಕಲ್‌ ಸ್ಟ್ರೈಕ್‌ ವಿಷಯವನ್ನು ಮುಂದಿಟ್ಟು ಮೋದಿಯನ್ನು ಜಪಿಸುತ್ತಿದ್ದಾರೆ. ಒಂದೆಡೆ, ಸೇನಾ ಸಮವಸ್ತ್ರ ಧರಿಸಿದ ಮೋದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವಿಡಿಯೊಗಳು; ಮತ್ತೊಂದೆಡೆ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಕಾಂಗ್ರೆಸ್‌ ಮುಖಂಡರಿಗೆ ವಾಚಾಮಗೋಚರವಾಗಿ ಬೈದ ವಿಡಿಯೊಗಳು ಕ್ಷೇತ್ರದ ಮತದಾರರ ಬಾಯಿಗೆ ಆಹಾರವಾಗಿವೆ. ಕಳೆದ ವಿಧಾನಸಭಾ ಚುನಾವಣೆ ವೇಳೆಗೆ ಸದ್ದು ಮಾಡಿದ್ದ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆಗಾಗಿನ ಹೋರಾಟದ ಬಗ್ಗೆ ಎಲ್ಲೂ ಮಾತು ಬರಲಿಲ್ಲ.

ಕೊನೆಗೆ, ‘ಗದ್ದಿಗೌಡರ ಗೆದ್ದರೆ ಮೋದಿ ಅಲೆ ಕಾರಣ; ವೀಣಾ ಸೋತರೆ ಅವರ ಪತಿ ವಿಜಯಾನಂದ ಕಾಶಪ್ಪನವರ ಕಾರಣ’ ಎನ್ನುವುದು ಕ್ಷೇತ್ರದ ಮತದಾರರ ಜಾಣ ನುಡಿ.

ಜಿಎಸ್‌ಟಿ ಹೊಡೆತ: ಸ್ಕ್ರ್ಯಾಪ್‌ಗೆ ಮಗ್ಗಗಳು....

ಬನಹಟ್ಟಿಯ ಮಸೀದಿಯ ಮುಂದೆ ಮಾತಿಗೆ ಸಿಕ್ಕ ಇರ್ಷಾದ್‌ ಮೊಮ್ಮಿನ್‌, ‘ ಜವಳಿ ಉದ್ಯಮ ಬರ್ಬಾದ್‌ ಆಗೇತಿ’ ಎನ್ನುತ್ತಲೇ ಮಾತಿಗಾರಂಭಿಸಿದರು.

‘ಜಿಎಸ್‌ಟಿ ಹೊಡ್ತಕ್ಕ ಎಲ್ಲಾ ನಿಕಾಲಿ ಆಗೇತ್ರಿ. ಹೊಸ ಮಗ್ಗಕ್ಕ ಐದೂವರೆ ಪರ್ಸೆಂಟ್‌ ಇದ್ದ ಜಿಎಸ್‌ಟಿ 18 ಪರ್ಸೆಂಟ್‌ ಆಗೇತಿ. ಏನ್‌ ಜೀವನಾ ಮಾಡ್ತೀರಿ? ಅವಾಗಿಂದ ಇಲ್ಲಿಮಟ ಏನಿಲ್ಲಂದ್ರೂ ಐದ್‌ ಸಾವಿರ ಮಗ್ಗ ಇಚಲಕರಂಜಿಯ ಸ್ಕ್ರ್ಯಾಪ್‌ಗೆ ಹೋಗ್ಯಾವು. ₹ 50 ಸಾವಿರದ ಮಗ್ಗಾನ ₹ 10 ಸಾವಿರಕ್ಕ ಮಾರಾಕತ್ಹಾರ’ ಎಂದು ಆಕ್ರೋಶ ಹೊರಹಾಕಿದರು.

‘ಏನೋ ಬದ್ಲಾವಣೆ ಮಾಡ್ಯಾನು ಅನ್ನೋ ಆಸೇಕ್ಕ ನಾನೂ ಹ್ವಾದ್‌ ಸಲ ಮೋದಿಗೇ ವೋಟ್‌ ಹಾಕಿದ್ದೆ. ಆದ್ರ ದೊಡ್ಡ ತಪ್ಪಾತು. ಇದ್ದದ್ದೂ ಹಾಳ್‌ ಮಾಡಿಬಿಟ್ಟ!’ ಎಂದು ವಿಷಾದಿಸಿದರು. ಪವರ್‌ಲೂಮ್‌ ಯಂತ್ರಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಅವರ ಅಂಗಡಿಯಲ್ಲಿ ಮೊದಲು ವಾರಕ್ಕೆ ₹ 10 ಸಾವಿರದಿಂದ ₹15 ಸಾವಿರವರೆಗೆ ಆಗುತ್ತಿದ್ದ ವ್ಯಾಪಾರ ₹ 2 ಸಾವಿರಕ್ಕೆ ಬಂದು ನಿಂತಿದೆ ಎಂದು ಅಲವತ್ತುಕೊಂಡರು.

‘ರೈತರ ಮಣ್ಣಕೊಟ್ಟ ಬಂದಿದ್ದ... ಸಾಧನೆ’

ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಭೇಟಿಯಾದ ಯುವಕ ಲಕ್ಷ್ಮಣಗೌಡ ಕುಲಕರ್ಣಿ ಅವರಿಗೆ ‘ ನಿಮ್ಮೂರಲ್ಲೂ ಮೋದಿ ಹವಾನಾ?’ ಎಂದು ಕೇಳಿದರೆ, ‘ಅಂವಾ ಹೇಳಿದ್ದೊಂದು ಮಾಡಿದ್ದೊಂದು’ ಎಂದು ಸಿಟ್ಟಾದರು.

‘ಯುವಕರೆಲ್ಲ ಮೋದಿ ಪರ ಅದಾರು ಹೌದು. ನಾನೂ ಇದ್ದೆ. ನಾನೂ ಬಿಜೆಪಿ, ಆರ್‌ಎಸ್‌ಎಸ್‌ ಜೊತಿಗೆ ಇದ್ದವನ. ಆದ್ರ, ಕೃಷಿ ವಲಯ ಅನುತ್ಪಾದಕ ಅಂತ ಹೇಳಿದ ಮೊದಲ ಮನಷ್ಯಾ ಈ ಮೋದಿ. ಎಲ್ಲಾ ದೇಶ ಕೃಷಿಗೆ ಎಷ್ಟ್‌ ಒತ್ತು ಕೊಡಾಕತ್ತಾವು ಏನ್‌ತಾನ? ಇಂವ ಏನ್‌ ಮಾಡಿದ? ರೈತರಿಗೆ ಮಣ್ಣ ಕೊಟ್ಟ’ ಎಂದು ಕಿಡಿಕಾರಿದರು.

‘ಸಿದ್ದರಾಮಯ್ಯ ಮತ್ತ ಕುಮಾರಸ್ವಾಮಿ ಸರ್ಕಾರದಿಂದ ನಮ್ಮ ರೈತರಿಗೆ ಎಷ್ಟೋ ಉಪಯೋಗ ಆಗೇತಿ. ನೀರು ನಿಡಿ ಇಲ್ಲದ ಇಂಥಲ್ಲೆ ಐದಲ್ಲ 10 ಎಕರೆ ಇದ್ರೂ ಏನು ಉಪಯೋಗ? 20 ಎಕರೆ ಇದ್ರರ ಏನು? ನಾನೂ ರೈತ ಅದೇನಿ. ಯಾವ ಕಿಸಾನ್‌ ಸಮ್ಮಾನ್‌ ಯೋಜನೆ ತೊಗೊಂಡ ಏನ್‌ ಮಾಡ್ತೀರಿ? ನಿಮಗೂ ಗೊತ್ತಿರಬೇಕು. ಎಲ್ಲಾ ದಿನಸಿ ಸಾಮಾನು ಇವ್ನ ಟೈಮ್‌ನ್ಯಾಗ ತುಟ್ಟಿ ಆಗ್ಯಾವು’ ಎಂದರು.

ದಿನಾ ಹೆಡ್‌ಲೈನ್‌ನಾಗ ಅದಾರ...

‘ಬಿಜೆಪಿಯವ್ರು ಸತತ ಐದೂ ವರ್ಷ ಹೆಡ್‌ಲೈನ್‌ನ್ಯಾಗ ಅದಾರ. ಕನೆಕ್ಟಿವಿಟಿ ಐತಿ. ಏನ್‌ ಮಾಡ್ತೀವಿ ಅನ್ನೋದನ್ನ, ಏನ್‌ ಮಾಡೇವಿ ಅನ್ನೋದನ್ನ ವ್ಯವಸ್ಥಿತವಾಗಿ ಹೇಳಿದ್ರು. ಈ ಪ್ಲಾನ್‌ನಿಂದಾಗೀಯೇ ಇವತ್ತು ಜನರ ಬಾಯಿಯಲ್ಲಿ ಮೋದಿ ಹೆಸರೈತಿ’ ಎನ್ನುತ್ತಾರೆ ಕಲಾದಗಿಯ ರಾಘವೇಂದ್ರ ಪೂಜಾರ.

ಐಬಿ ಬಸಪ್ಪ ಖಾನಾವಳಿಯೂ ರಾಜಕಾರಣಿಗಳ ನಂಟೂ

ಹಿರಿಯ ರಾಜಕಾರಣಿ, ರಾಜ್ಯ ಸಹಕಾರಿ ಮಹಾಮಂಡಳದ ಮಾಜಿ ನಿರ್ದೇಶಕ ಎಲ್.ಎಂ. ಪಾಟೀಲ ಕೂಡ ಗದ್ದಿಗೌಡರ ಅವರನ್ನು ಸಂಸ್ಕಾರವಂತ ಎಂದು ಬಣ್ಣಿಸುತ್ತಾರೆ.

‘ಅವರು ಹೇಳಿಕೊಳ್ಳುವಂಥ ಕೆಲಸ ಮಾಡದೇ ಹೋದರೂ ಒಳ್ಳೆ ಹೆಸರಿನ ಜೊತೆಗೆ ಮೋದಿ ಅಲೆ ಇದೆ. ವೀಣಾ ಕಾಶಪ್ಪನವರ ಸಮರ್ಥ ಎದುರಾಳಿ. ಕೆಲಸಗಾರ್ತಿ. ಅವರಿಗೂ ಒಳ್ಳೆಯ ಹೆಸರಿದೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಸೋತಾಗ ಕಾಂಗ್ರೆಸ್‌ ಮುಖಂಡರಿಗೆಲ್ಲ ಮನಬಂದಂತೆ ಬೈದಿರುವ ಅವರ ಪತಿ ವಿಜಯಾನಂದ ಮಾತು– ವರ್ತನೆ ಜನರ ಮನಸಲ್ಲಿದೆ’ ಎನ್ನುತ್ತಾರೆ ಅವರು.

‘ಆ ಹೆಣ್ಣುಮಗಳ ಕೆಲಸ ನೋಡಿದರೆ ಆರಿಸಿ ಬರಬೇಕು’ ಎಂದ ಅವರ ಮಾತನ್ನು ಅಲ್ಲಿದ್ದವರು ಪಕ್ಷಾತೀತವಾಗಿ ಒ‍ಪ್ಪಿದರು. ‘ ಆದರೆ ವಿಜಯಾನಂದ ಅವರನ್ನು ಬಿಟ್ಟು ಪ್ರಚಾರಕ್ಕೆ ಹೋದರೆ ಗೆಲ್ತಾರೆ. ಕರ್ಕೊಂಡು ಹೋದರೆ ಸೋಲೋದು ಗ್ಯಾರಂಟಿ’ ಎಂದೂ ವಿಜಯಾನಂದ ಬಗೆಗಿನ ಅಸಮಾಧಾನವನ್ನು ಹೊರಹಾಕಿದರು.

ಐಬಿ ಬಸಪ್ಪ ಖಾನಾವಳಿಯು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣ ಎರಡರ ಚರ್ಚೆಗೂ ಸಾಕ್ಷಿಯಾಗಿದೆ. ದೇವೇಗೌಡರಿಂದ ಹಿಡಿದುಕೊಂಡು ರಾಜ್ಯದ ಘಟಾನುಘಟಿಗಳೆಲ್ಲ ಇಲ್ಲಿ ಬಂದು ಹೋದವರೆ. ಐಬಿಯಲ್ಲಿ ಕುಕ್‌ ಆಗಿದ್ದ ಬಸಪ್ಪ ಅವರು ಖಾನಾವಳಿ ತೆಗೆದಾಗ ಬಂದ ಹೆಸರು ‘ಐಬಿ ಬಸಪ್ಪ ಖಾನಾವಳಿ‘ ಎಂದು. ಅವರ ಮಕ್ಕಳು, ರಾಜಕೀಯ ಚರ್ಚಿಸುತ್ತ ಕುಳಿತವರಿಗೆ ಊಟ ಬಡಿಸುವಲ್ಲಿ ತಲ್ಲೀನರಾಗಿದ್ದರೆ ಇದನ್ನೆಲ್ಲ ಕೇಳಿ ಕೇಳಿ ಸಾಕಾಗಿದೆ ಎಂಬಂತೆ ಬಸಪ್ಪ ಅವರು ಸಮೀಪದ ಏರಿ ಮೇಲೆ ಮರವೊಂದರ ನೆರಳಲ್ಲಿ ವಿರಮಿಸಿದ್ದರು.

ಲೋಕಸಭೆ ಚುನಾವಣೆ, ಬಾಗಲಕೋಟೆ ಕಣದ ಬಗ್ಗೆ ಇನ್ನಷ್ಟು...

ಪ್ರಜಾವಾಣಿ ವಿಶೇಷಸಂದರ್ಶನಗಳು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.