ADVERTISEMENT

ಬಕ್ರೀದ್ | ಕುರಿ ಸಂತೆ: ಕೋಟ್ಯಂತರ ರೂಪಾಯಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 6:08 IST
Last Updated 16 ಜೂನ್ 2024, 6:08 IST
ಬಕ್ರೀದ್ ನಿಮಿತ್ತ ಶನಿವಾರ ಅಮೀನಗಡ ಪಟ್ಟಣದಲ್ಲಿ ನಡೆದ ಕುರಿ ಹಾಗೂ ಜಾನುವಾರು ಸಂತೆಯ ದೃಶ್ಯ
ಬಕ್ರೀದ್ ನಿಮಿತ್ತ ಶನಿವಾರ ಅಮೀನಗಡ ಪಟ್ಟಣದಲ್ಲಿ ನಡೆದ ಕುರಿ ಹಾಗೂ ಜಾನುವಾರು ಸಂತೆಯ ದೃಶ್ಯ   

ಅಮೀನಗಡ: ಪಟ್ಟಣದಲ್ಲಿ ಪ್ರತಿ ಶನಿವಾರ ನಡೆಯುವ ಜಾನುವಾರು ಹಾಗೂ ಕುರಿ ಸಂತೆ ರಾಜ್ಯದಲ್ಲಿಯೇ ಹೆಸರುವಾಸಿ. ಕೋಟ್ಯಂತರ ರೂಪಾಯಿ ವ್ಯಾಪಾರ- ವಹಿವಾಟು ನಡೆದು ಸಾವಿರಾರು ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟಿದೆಯಲ್ಲದೇ ಇಲ್ಲಿ ಮಾರಾಟವಾಗುವ ಕುರಿ ಹಾಗೂ ಟಗರು ಮರಿಗಳಿಗೆ ವಿದೇಶದಲ್ಲೂ ಬೇಡಿಕೆ ಇದೆ.

ಸೋಮವಾರ ಬಕ್ರೀದ್ ನಿಮಿತ್ತ ಸಂತೆಯಲ್ಲಿ ಸಿಗುವ ಟಗರು ಮರಿಗಳಿಗೆ ಭಾರಿ ಬೇಡಿಕೆ ಕಂಡು ಬಂದಿತು.
ಈ ಸಂತೆಗೆ ರಾಜ್ಯದ ವಿವಿಧ ಮೂಲೆಗಳಿಂದ ಅಷ್ಟೇ ಅಲ್ಲದೆ ಹೊರರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ವ್ಯಾಪಾರಸ್ಥರೂ ವ್ಯಾಪಾರ ವಹಿವಾಟು ನಡೆಸಲು ಬರುತ್ತಾರೆ.

ಪಟ್ಟಣದ ಸಂತೆಯಲ್ಲಿ ಸಿಗುವ ಜವಾರಿ ತಳಿಯ ಕುರಿ ಹಾಗೂ ಟಗರು ಮರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬಿಟಲ್, ಮೌಳಿ, ಕೆಂಗುರಿ, ಬನ್ನೂರ ಹಾಗೂ ಶಿಯೋರಿ ತಳಿಯ ಕುರಿಗಳು ಹೆಚ್ಚು ಮಾರಾಟವಾಗುತ್ತವೆ.

ADVERTISEMENT

ಅಂದಾಜು ₹ 5 ಕೋಟಿಗೂ ಹೆಚ್ಚು ವಹಿವಾಟು: ಬಕ್ರೀದ್ ನಿಮಿತ್ತ ಪ್ರತಿ ಶನಿವಾರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯವಲ್ಲದೇ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಿಂದ ಬಂದಿದ್ದ ಗ್ರಾಹಕರು ಹಾಗೂ ವ್ಯಾಪಾರಸ್ಥರು ಜವಾರಿ ತಳಿಯ ಮರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವ ದೃಶ್ಯ ಕಂಡುಬಂದಿತು. ಹಬ್ಬದ ವಾರವಾದ್ದರಿಂದ ಅಂದಾಜು ₹ 5 ಕೋಟಿಗೂ ಹೆಚ್ಚು ವ್ಯಾಪಾರ -ವಹಿವಾಟು ಆಗಿರಬಹುದು ಎನ್ನುತ್ತಾರೆ ವ್ಯಾಪಾರಸ್ಥರು.

ಜವಾರಿ ತಳಿಗೆ ಹೆಚ್ಚಿದ ಬೇಡಿಕೆ : ಈ ಬಾರಿ ಜವಾರಿ ತಳಿಯ ಮರಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಅದರಲ್ಲೂ ಬಿಳಿ ಮರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು ₹ 10 ಸಾವಿರದಿಂದ ₹ 1 ಲಕ್ಷಕ್ಕೆ ಮಾರಾಟದ ಬೇಡಿಕೆ ಕಂಡುಬಂದಿತು.

ಯೋಗ್ಯ ಬೆಲೆಗೆ ದೊರೆತ ಮರಿಗಳು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮರಿಗಳು ಸಂತೆಯಲ್ಲಿ ಮಾರಾಟಕ್ಕೆ ಲಭ್ಯವಿದ್ದವು. ಯೋಗ್ಯ ಬೆಲೆಗೆ ಗ್ರಾಹಕರಿಗೆ ಲಭ್ಯವಾಗಿವೆ ಎನ್ನುತ್ತಾರೆ ಗ್ರಾಹಕರು.

ಅಮೀನಗಡ ಪಟ್ಟಣದಲ್ಲಿ ಶನಿವಾರ ನಡೆದ ಕುರಿ ಸಂತೆಯಲ್ಲಿ ಮಾರಾಟ ಮಾಡಲು ವಿವಿಧ ಭಾಗಗಳಿಂದ ಬಂದಿದ್ದ ರೈತರು
ಬಕ್ರೀದ್ ಸೋಮವಾರ ಇರುವುದರಿಂದ ಸಂತೆಯಲ್ಲಿ ಟಗರು ಹಾಗೂ ಕುರಿ ಮರಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಯೋಗ್ಯ ಬೆಲೆಗೆ ಮರಿಗಳನ್ನು ಮಾರಾಟ ಮಾಡಿದ್ದೇವೆ
ಹನಮಂತ ಆಡಿನ ಲಾಯದಗುಂದಿ ಗ್ರಾಮದ ರೈತ
ಅಮೀನಗಡದಲ್ಲಿ ಸಿಗುವ ಜವಾರಿ ತಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮರಿಗಳನ್ನು ಖರೀದಿಸಲು ಬೆಂಗಳೂರಿನಿಂದ ಬಂದಿದ್ದೇವೆ
ಸೋಹೆಲ್ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.