ADVERTISEMENT

ಬನಹಟ್ಟಿ ಬಸ್‌ ನಿಲ್ದಾಣ; ಅವ್ಯವಸ್ಥೆ ಆಗರ

ಮೂಲಸೌಕರ್ಯ ಮರೀಚಿಕೆ; ಪ್ರಯಾಣಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 14:23 IST
Last Updated 7 ಜುಲೈ 2018, 14:23 IST
ಬನಹಟ್ಟಿ ನಗರದ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯ ದುರಾವಸ್ಥೆಯ ಆಗರವಾಗಿದೆ.
ಬನಹಟ್ಟಿ ನಗರದ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯ ದುರಾವಸ್ಥೆಯ ಆಗರವಾಗಿದೆ.   

ರಬಕವಿ ಬನಹಟ್ಟಿ: ಇಲ್ಲಿನ ಬಸ್‌ ನಿಲ್ದಾಣ ಮೂಲ ಸೌಕರ್ಯಗಳು ಇಲ್ಲದೇ ಅವ್ಯವಸ್ಥೆ ಆಗರವಾಗಿದೆ. ನಿತ್ಯ 300ಕ್ಕೂ ಹೆಚ್ಚು ಬಸ್‌ಗಳು ನಿಲ್ದಾಣಕ್ಕೆ ಬಂದರೂ ಅಗತ್ಯ ಸೌಲಭ್ಯಗಳಿಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ.

ಬಸ್ ನಿಲ್ದಾಣದ ತುಂಬೆಲ್ಲ ಮಳೆ ನೀರು ನಿಂತು ಕೊಳಚೆ ಪ್ರದೇಶದಂತೆ ಗಬ್ಬೆದ್ದು ನಾರುತ್ತಿದೆ. ಶೌಚಾಲಯಗಳ ಪರಿಸ್ಥಿತಿ ಹೇಳತೀರದು. ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಪುರುಷರಿಗೆ ಮೂರು ಶೌಚಾಲಯ, ಐದು ಮೂತ್ರಾಲಯಗಳಿವೆ.

ಮಹಿಳೆಯರಿಗೆ ಎರಡು ಶೌಚಾಲಯ ಮತ್ತು ಮೂರು ಮೂತ್ರಾಲಯಗಳಿವೆ. ಪ್ರಯಾಣಿಕರು ಮೂತ್ರಿ ಹಾಗೂ ಶೌಚಕ್ಕೆ ಸರದಿಯಲ್ಲಿ ನಿಂತು ಹೋಗುವ ಅನಿವಾರ್ಯವಿದೆ. ಎರಡು ವರ್ಷಗಳ ಹಿಂದೆ ಬಸ್‌ ನಿಲ್ದಾಣದಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆದಿತ್ತು. ಕಳಪೆ ನಿರ್ವಹಣೆಯಿಂದ ಅವು ಮತ್ತೆ ಬಾಯಿ ತೆರೆದಿವೆ.

ADVERTISEMENT

ರಾತ್ರಿಯಾಗುತ್ತಿದ್ದಂತೆಯೇ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನಗಳದ್ದೇ ದರ್ಬಾರು. ಬಸ್‌ ನಿಲ್ದಾಣ ದ್ವಿಚಕ್ರ ವಾಹನಗಳ ನಿಲುಗಡೆ ಪ್ರದೇಶವಾಗುತ್ತದೆ. ಸಾರ್ವಜನಿಕರು ಬಸ್‌ ನಿಲುಗಡೆ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದಾಗಿ ಹೊಲಸು ವಾಸನೆ ಹರಡಿ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಶೌಚಾಲಯದಲ್ಲಿ ವಿದ್ಯುತ್ ಸಂಪರ್ಕಕ್ಕೆ ಕಳಪೆ ಉಪಕರಣ ಬಳಸಲಾಗಿದ್ದು,ವೈರ್‌ಗಳು ಹರಿದು ನೀರಿನಲ್ಲಿ ಬೀಳುವಂತಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಪ್ರಯಾಣಿಕರು ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ ಇಲ್ಲ.

ಬನಹಟ್ಟಿ ಬಸ್ ನಿಲ್ದಾಣದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ₹18 ಲಕ್ಷ ಅನುದಾನ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ, ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ.

-ವಿಶ್ವಜ ಕಾಡದೇವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.