ADVERTISEMENT

ರಬಕವಿ ಬನಹಟ್ಟಿ: ಇರಾನ್ ದೇಶಕ್ಕೆ ಜಗದಾಳ ಗ್ರಾಮದ ಬಾಳೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 6:31 IST
Last Updated 25 ಅಕ್ಟೋಬರ್ 2024, 6:31 IST
<div class="paragraphs"><p>ಬನಹಟ್ಟಿ ಸಮೀಪದ ಜಗದಾಳ ಗ್ರಾಮದ ರೈತ ಶ್ರೀನಾಥ ರಾಠಿ ತಮ್ಮ ತೋಟದಲ್ಲಿ ಜಿ-9 ಬಾಳೆ ಹಣ್ಣು ಬೆಳೆದಿರುವುದು.</p></div>

ಬನಹಟ್ಟಿ ಸಮೀಪದ ಜಗದಾಳ ಗ್ರಾಮದ ರೈತ ಶ್ರೀನಾಥ ರಾಠಿ ತಮ್ಮ ತೋಟದಲ್ಲಿ ಜಿ-9 ಬಾಳೆ ಹಣ್ಣು ಬೆಳೆದಿರುವುದು.

   

ರಬಕವಿ ಬನಹಟ್ಟಿ: ಸಮೀಪದ ಜಗದಾಳ ಗ್ರಾಮದ ರೈತ ಶ್ರೀನಾಥ ದೇವರಾಜ ರಾಠಿ ನಾಲ್ಕು ಎಕರೆ ತೋಟದಲ್ಲಿ ಬೆಳೆದ ಬಾಳೆ ಕಾಯಿಗಳನ್ನು ಇರಾನ್ ದೇಶಕ್ಕೆ ರಫ್ತು ಮಾಡಿ ಉತ್ತಮ ಲಾಭ ಕಾಣುತ್ತಿದ್ದಾರೆ.

ನಾಲ್ಕು ಎಕರೆಯಲ್ಲಿ ಜೈನ ಕಂಪನಿಯ ಜಿ–9 ತಳಿಯ 7,200 ಗಿಡಗಳನ್ನು ಅವರು ಹಚ್ಚಿದ್ದು, ಪ್ರತಿ ಸಸಿಗೆ ಈವರೆಗೆ ಅಂದಾಜು ₹150–₹200 ಖರ್ಚು ಮಾಡಲಾಗಿದೆ. ಒಂದು ಗಿಡಕ್ಕೆ ಅಂದಾಜು 28–30 ಕೆ.ಜಿ. ಇಳುವರಿ ಬರುತ್ತಿದೆ. ಸದ್ಯ ಒಂದು ಕೆ.ಜಿ. ಕಾಯಿಯನ್ನು ₹23ರಂತೆ ಮಾರಾಟ ಮಾಡುತ್ತಿದ್ದಾರೆ.

ADVERTISEMENT

ಶ್ರೀನಾಥ ಕೃಷಿಯಲ್ಲಿ ಬಿಎಸ್ಸಿ ಪದವೀಧರರು. ತಂದೆ ದೇವರಾಜ ಅವರ ಮಾರ್ಗದರ್ಶನದಲ್ಲಿ ಬಾಳೆ ಬೆಳೆ ನಡೆಸಿದ್ದಾರೆ.

ನೂತನ ಪಟ್ಟಾ ಪದ್ಧತಿಯಲ್ಲಿ ಬಾಳೆ ಸಸಿಗಳನ್ನು ಬೆಳೆಯಲಾಗಿದೆ. ‘ಸಾಮಾನ್ಯವಾಗಿ ಒಂದು ಎಕರೆಯಲ್ಲಿ 1,450 ಗಿಡಗಳನ್ನು ಬೆಳೆಯುತ್ತಾರೆ. ಆದರೆ ನಾವು ಪಟ್ಟಾ ಪದ್ಧತಿಯಲ್ಲಿ 1,800 ಸಸಿಗಳನ್ನು ನಾಟಿ ಮಾಡಿದ್ದೇವೆ. ಇದರಿಂದಾಗಿ ಬಾಳೆ ಗಿಡಗಳು ದಟ್ಟವಾಗಿ ಬೆಳೆಯುತ್ತದೆ. ಬಾಳೆ ಗೊನೆಗಳಿಗೆ ಬಿಸಿಲು ದೊರೆಯದೆ ಇರುವುದರಿಂದ ಬಾಳೆ ಹಣ್ಣುಗಳಿಗೆ ಸಾಕಷ್ಟು ಹೊಳಪು ಬರುತ್ತದೆ. ನೂತನ ಪದ್ಧತಿಯಲ್ಲಿ ಬೆಳೆದಿದ್ದು, ನಮ್ಮ ಪ್ರಯತ್ನ ಯಶಸ್ವಿಯಾಗಿದೆ’ ಎನ್ನುತ್ತಾರೆ ಶ್ರೀನಾಥ.

‘ಬಾಳೆ ಹಣ್ಣಿನ ಗೊನೆಗಳನ್ನು ಕಡಿದು ತಂದು ಅವುಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುವುದು ಎಲ್ಲವೂ ಮಧ್ಯಸ್ಥಗಾರರೇ ಮಾಡುತ್ತಿರುವುದರಿಂದ ನಮಗೆ ಮಾರುಕಟ್ಟೆಯ ಯಾವುದೇ ತೊಂದರೆ ಇಲ್ಲ’ ಎನ್ನುತ್ತಾರೆ ಶ್ರೀನಾಥ ರಾಠಿ.

ಮುಂಬೈನಿಂದ ಬಂದ ಕಾರ್ಮಿಕರು ತೋಟದಿಂದ ಬಾಳೆ ಗೊನೆಗಳನ್ನು ಕಡಿದು ತಂದು ಶುಚಿಗೊಳಿಸಿ, ನಂತರ ಪ್ಲಾಸ್ಟಿಕ್ ಪೇಪರ್‌ನಲ್ಲಿ ಪ್ಯಾಕ್ ಮಾಡಿ ವಾಹನಕ್ಕೆ ತುಂಬುವ ಕಾರ್ಯ ಮಾಡುತ್ತಾರೆ.

ದೇವರಾಜ ರಾಠಿ ಯಾವುದೇ ಬೆಳೆಯನ್ನು ಮಾಡಿದರೂ ಯೋಜನಾ ಬದ್ಧವಾಗಿ ಮಾಡುತ್ತಿದ್ದು, ತಾವು ಬೆಳೆದ ಪ್ರತಿ ಬೆಳೆಯಿಂದ ಲಾಭ ಗಳಿಸಿದ್ದಾರೆ. ಗುಲಾಬಿ ಹೂ, ಚೆಂಡು ಹೂ, ಕ್ಯಾಪ್ಸಿಕಂ, ಬದನೆ, ಪಪ್ಪಾಯಿ, ಹಸಿ ಮೆಣಸಿನಕಾಯಿ ಬೆಳೆದು ಲಾಭವನ್ನೇ ಕಂಡಿರುವ ರಾಠಿ ಅವರು ಈಗ ಬಾಳೆ ಹಣ್ಣನ್ನು ಬೆಳೆದು ಲಾಭವನ್ನು ಮಾಡಿಕೊಂಡಿದ್ದಾರೆ. ಅವರೊಬ್ಬ ಮಾದರಿ ಕೃಷಿಕ ಎನಿಸಿಕೊಂಡಿದ್ದಾರೆ.

ದೇವರಾಜ ರಾಠಿಯವರು ಕೃಷಿಯಲ್ಲಿ ತಾವು ಅಭಿವೃದ್ಧಿ ಕಾಣುವುದಲ್ಲದೇ, ಅಕ್ಕಪಕ್ಕದ ರೈತರಿಗೂ ಸಹಾಯ ಸಹಕಾರ ನೀಡುತ್ತ, ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ಹತ್ತಾರು ರೈತರು ಬೇರೆ ಬೇರೆ ಬೆಳೆಗಳನ್ನು ಬೆಳೆದು ಲಾಭ ಮಾಡಿಕೊಂಡಿರುವ ಉದಾಹರಣೆಗಳೂ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.