ಬಾಗಲಕೋಟೆ: ‘ಮನೆ ಬಾಗಿಲಿಗೆಬಂದು ನಿಮ್ಮ ಖಾತೆಗೆ ದುಡ್ಡು ತುಂಬಿಸಿಕೊಳ್ಳುವ ಹಾಗೂ ನೀಡುವ ವಿನೂತನ ಸೌಲಭ್ಯ ಅಂಚೆ ಇಲಾಖೆ ನೀಡುತ್ತಿದೆ. ಎಲ್ಲರೂ ಅದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಶಾಖೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ದೇಶದಲ್ಲಿನ ಯಾವುದೇ ಬ್ಯಾಂಕ್ ನೀಡದ ಸೌಲಭ್ಯವನ್ನು ಅಂಚೆ ಇಲಾಖೆ ನೀಡುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಇದರಿಂದ ತುಂಬಾ ಉಪಯೋಗವಾಗಲಿದೆ’ ಎಂದರು.
‘ಹಲವಾರು ವರ್ಷಗಳಿಂದ ಅಂಚೆ ಇಲಾಖೆ ಗ್ರಾಹಕರ ಸೇವೆ ಮಾಡುತ್ತಿದೆ. ಮೊದಲು ಹಳ್ಳಿಗಳಲ್ಲಿ ಪೋಸ್ಟ್‌ಮನ್ ಬಂದರೆ ಸಮಾಚಾರ ಬರುತ್ತಿದೆ ಎಂದು ಜನ ಕಾಯುತ್ತಿದ್ದರು. ಈಗ ಹಣ ಬರಲಿದೆ’ ಎಂದರು.
ತೋಟಗಾರಿಕೆ ವಿಶ್ವ ವಿದ್ಯಾಲಯದ ಕುಲಪತಿ ಡಾ. ಕೆ.ಎಂ.ಇಂದ್ರೇಶ ಮಾತನಾಡಿ, ‘ಸಣ್ಣ ಪುಟ್ಟ ಉದ್ಯೋಗಿಗಳಿಗೆ, ರೈತರಿಗೆ ಪೇಮೆಂಟ್ಸ್ ಬ್ಯಾಂಕ್ ಅನುಕೂಲವಾಗಲಿದೆ’ ಎಂದರು.
‘ನಗದು ರಹಿತ ವ್ಯವಹಾರ ಮಾಡಬೇಕೆನ್ನುವ ಪ್ರಧಾನಿ ಅವರ ಕನಸು ನನಸಾಗುವ ಕಾಲ ಬಂದಿದೆ. ನಗದು ರಹಿತ ವ್ಯವಹಾರಕ್ಕೆ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು’ ಎಂದರು.
ಬಾಗಲಕೋಟೆ ಅಂಚೆ ಅಧೀಕ್ಷಕ ಕೆ.ಮಹಾದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘ಡಿಸೆಂಬರ್ ಅಂತ್ಯದಲ್ಲಿ ದೇಶದ ಎಲ್ಲ ಅಂಚೆ ಕಚೇರಿಯಲ್ಲಿ ಪೋಸ್ಟ್ ಪೇಮೆಂಟ್ ಬ್ಯಾಂಕ್ ಕಾರ್ಯಾರಂಭಿಸಲಿವೆ’ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಬಾದಾಮಿಯ ನಿವೃತ್ತ ಉಪನ್ಯಾಸಕ ಡಾ. ಶೀಲಾಕಾಂತ ಪತ್ತಾರ, ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀಕಾಂತ ಜಾಧವ, ವಿ.ವಿ.ನಿಂಬರಗಿ, ಶ್ರೀಧರ ಜತ್ತಿ, ಸಹಾಯಕ ಅಂಚೆ ನಿರೀಕ್ಷಕ ಎಂ.ಆರ್.ಸಿಂಗದ, ಮಾರುಕಟ್ಟೆ ಅಧಿಕಾರಿ ಸಂತೋಷ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.