ಬಾಗಲಕೋಟೆ:ಇಲ್ಲಿನ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಿಂದ ನೀಡುವ ‘ಬಸವ ಕೃಷಿ’ ರಾಷ್ಟ್ರೀಯ ಪ್ರಶಸ್ತಿಯನ್ನು ಮಂಗಳವಾರ ತೆಲಂಗಾಣದ ಜಲಸಂಪನ್ಮೂಲ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಕಾಶರಾವ್ ವೀರಮಲ್ಲ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಕಾಶ್ ರಾವ್ ಅವರಿಗೆ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರಶಸ್ತಿ ನೀಡಿ ಗೌರವಿಸಿದರು.
ನಮ್ಮದು ಕೃಷ್ಣೆಯ ಕುಟುಂಬ;'ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳು ಕೃಷ್ಣಾ ಕುಟುಂಬದ ಸದಸ್ಯರು. ಕುಟುಂಬ ಎಂದಾಗ ಸಣ್ಣಪುಟ್ಟ ಬಿನ್ನಾಭಿಪ್ರಾಯ ಇರುತ್ತವೆ. ಹಾಗೆಂದು, ರಾಜಕಾರಣಿಗಳ ಮಾತಿಗೆ ಮನ್ನಣೆ ನೀಡಿ ನಾವು (ರೈತರು) ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳುವುದು ಬೇಡ’ ಎಂದು ಕಿವಿಮಾತು ಹೇಳಿದರು.
’ಬಚಾವತ್ ಆಯೋಗದ ತೀರ್ಪಿನ ಅನ್ವಯ ಕೃಷ್ಣೆಯ ನೀರಿನ ಬಳಕೆವಿಚಾರದಲ್ಲಿ ಶೀಘ್ರ ಸಮನ್ವಯ ಸಾಧಿಸಲು ನಾಲ್ಕು ರಾಜ್ಯಗಳ ರೈತ ಮುಖಂಡರು ಹಾಗೂ ತಜ್ಞರ ಸಭೆಯನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲಸಂಗಮದಲ್ಲಿ ಕರೆಯಲಾಗುವುದು’ ಎಂದರು.
ನಂತರ ರೈತರೊಂದಿಗೆ ಸಂವಾದ ನಡೆಸಿದ ಅವರು, ’ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಿ ಕರ್ನಾಟಕ ತನ್ನ ಪಾಲಿನ ನೀರು ಬಳಕೆಗೆ ತೆಲಂಗಾಣ ರಾಜ್ಯದಿಂದ ಯಾವುದೇ ತಕರಾರು ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.