ADVERTISEMENT

ಬಾಗಲಕೋಟೆ | ಬಸವೇಶ್ವರ ಬ್ಯಾಂಕ್: ₹ 4.22 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 14:25 IST
Last Updated 12 ಆಗಸ್ಟ್ 2023, 14:25 IST
ಪ್ರಕಾಶ ತಪಶೆಟ್ಟಿ
ಪ್ರಕಾಶ ತಪಶೆಟ್ಟಿ   

ಬಾಗಲಕೋಟೆ: ಬಸವೇಶ್ವರ ಸಹಕಾರಿ ಬ್ಯಾಂಕ್‌ 2022–23ರಲ್ಲಿ ₹ 4.22 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘106 ವಾರ್ಷಿಕ ಸಭೆಯನ್ನು ಆ. 13 ರಂದು ಕರೆಯಲಾಗಿದೆ. ಬ್ಯಾಂಕ್‌ ಪ್ರತಿ ವರ್ಷದಿಂದ ವರ್ಷಕ್ಕೆ ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದೆ’ ಎಂದರು.

44,107 ಸದಸ್ಯರನ್ನು ಹೊಂದಿದ್ದು, ₹ 30 ಕೋಟಿ ಷೇರು ಬಂಡವಾಳ ಹೊಂದಿದೆ. ₹ 964 ಕೋಟಿ ದುಡಿಯುವ ಬಂಡವಾಳವಿದ್ದು, ₹ 832 ಕೋಟಿ ಠೇವಣಿ ಇದೆ. ₹ 579 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಶೇ 9.42ರಷ್ಟು ಎನ್‌ಪಿಎ ಇದೆ. ಇದು ಭಾರತೀಯ ರಿಸರ್ವ್‌ ಬ್ಯಾಂಕ್ ನಿಗದಿ ಪಡಿಸಿದ್ದಕ್ಕಿಂತ ಕಡಿಮೆ ಇದೆ ಎಂದು ಹೇಳಿದರು.

ADVERTISEMENT

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಲವು ಏರಿಳಿತಗಳು ಕಂಡು ಬಂದಿದ್ದರೂ, ಸದಸ್ಯರ ಹಾಗೂ ಗ್ರಾಹಕರ ವಿಶ್ವಾಸದಿಂದಾಗಿ ಠೇವಣಿ ಸಂಗ್ರಹದಲ್ಲಿ ಬ್ಯಾಂಕ್‌ ಪ್ರಗತಿ ಸಾಧಿಸಿದೆ. ಗ್ರಾಹಕರ ಹಿತದೃಷ್ಟಿಯಿಂದ ಠೇವಣಿ ಬಡ್ಡಿ ದರವನ್ನು ವಾಣಿಜ್ಯ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಹೆಚ್ಚಿಗೆ ನೀಡಲಾಗುತ್ತಿದೆ ಎಂದರು.

ಬಾಗಲಕೋಟೆಯಲ್ಲಿ ಪ್ರಧಾನ ಕಚೇರಿ ಹಾಗೂ ಆರು ಶಾಖೆಗಳಿವೆ. ಮುಧೋಳ, ಬೀಳಗಿ, ಮಹಾಲಿಂಗಪುರ, ವಿಜಯಪುರ, ಗದಗ, ಬಸವನಬಾಗೇವಾಡಿ, ಬೆಳಗಾವಿ, ಗೋಕಾಕ ಸೇರಿದಂತೆ ಒಟ್ಟು 27 ಶಾಖೆಗಳನ್ನು ಬ್ಯಾಂಕ್‌ ಹೊಂದಿದೆ. ವಿಜಯಪುರ, ಬೆಳಗಾವಿ ಸೇರಿದಂತೆ ಐದು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಬ್ಯಾಂಕಿನ ಎಲ್ಲ ಶಾಖೆಗಳಿಗೂ ಕೋರ್ ಬ್ಯಾಂಕಿಂಗ್‌ ತಂತ್ರಜ್ಞಾನ ಅಳವಡಿಸಲಾಗಿದೆ. ಮೊಬೈಲ್ ಬ್ಯಾಂಕಿಂಗ್‌, ಎ.ಟಿ.ಎಂ. ಸೇವೆ ನೀಡಲಾಗುತ್ತಿದೆ. ಬೇರೆ ಬ್ಯಾಂಕ್‌ ಕಾರ್ಡ್‌ಗಳನ್ನು ನಮ್ಮ ಎಟಿಎಂಗಳಲ್ಲಿ, ನಮ್ಮ ಕಾರ್ಡ್‌ಗಳನ್ನು ಬೇರೆ ಬ್ಯಾಂಕ್‌ಗಳಲ್ಲಿ ಬಳಸಬಹುದಾಗಿದೆ. ಮೊಬೈಲ್‌ನಲ್ಲಿ ಖಾತೆಯ ಸ್ಟೇಟ್‌ಮೆಂಟ್ ಪರಿಶೀಲಿಸಬಹುದಾಗಿದೆ. ನೆಫ್ಟ್, ಆರ್‌ಟಿಜಿಸ್‌ ಮೂಲಕ ಹಣ ವರ್ಗಾವಣೆ ಮಾಡಬಹುದು. ಎಲ್ಲ ಸೌಲಭ್ಯಗಳನ್ನೂ ಗ್ರಾಹಕರಿಗೆ ಒದಗಿಸಲಾಗಿದೆ ಎಂದರು.

ಯುಪಿಐ ಆಧಾರಿತ ಹಣ ವರ್ಗಾವಣೆ ವ್ಯವಸ್ಥೆ ಪ್ರಾರಂಭಿಸಲಾಗಿದೆ. ಫೋನ್‌ಪೇ, ಗೂಗಲ್‌ ಪೇ, ಪೇಟಿಎಂಗಳ ಮೂಲಕವೂ ವ್ಯವಹಾರ ಮಾಡಬಹುದು. ಸ್ವಯಂಚಾಲಿತ ಹಣ ಸ್ವೀಕೃತಿ ಯಂತ್ರ, ಪಾಸ್ ಬುಕ್ ಪ್ರಿಂಟರ್, ವೆಬ್‌ಸೈಟ್‌, ಮೊಬೈಲ್ ಆ್ಯಪ್‌ ಸೌಲಭ್ಯಗಳೂ ಇವೆ ಎಂದು ಹೇಳಿದರು.

ಈ ವರ್ಷ ಸದಸ್ಯರ ಸಂಖ್ಯೆಯನ್ನು ಶೇ 5ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. ಠೇವಣಿಯನ್ನು ಶೇ 10ರಷ್ಟು ಹಾಗೂ ಸಾಲವನ್ನು ಶೇ 20ರಷ್ಟು ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಸಿಬ್ಬಂದಿಗೆ ವಿವಿಧ ತರಬೇತಿ, ಸಾಲ ವಸೂಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫ್ಯಾಷನ್, ಡಿಜೈನರ್, ಮೇಕಪ್‌, ಆರಿ ವರ್ಕ್‌ ಸೇರಿದಂತೆ ವಿವಿಧ ತರಬೇತಿಗಳನ್ನು ಮಹಿಳೆಯರಿಗೆ ನೀಡಲಾಗಿದೆ. ವಿದ್ಯಾ ಚೇತನ ಯೋಜನೆಯಡಿ ಎಸ್ಸೆಸ್ಸೆಲ್ಸಿ, ಪಿ.ಯು, ಬಿ.ಎ, ಬಿಎಸ್‌ಸಿ, ಬಿ.ಕಾಂ, ಎಂಜಿನಿಯರಿಂಗ್‌, ವೈದ್ಯಕೀಯ, ದಂತ ವೈದ್ಯಕೀಯದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ, ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ಲೋಕಸಭೆ ಸ್ಪರ್ಧೆಗೆ ಸಿದ್ಧ

ಪಕ್ಷ ಸೂಚಿಸಿದರೆ ಮುಂಬರುವ ಲೋಕಸಭಾ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದು ಪ್ರಕಾಶ ತಪಶೆಟ್ಟಿ ಹೇಳಿದರು. ಶನಿವಾರ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು ಬಹಳ ವರ್ಷಗಳಿಂದ ಪಕ್ಷದಲ್ಲಿದ್ದೇನೆ. ಹಲವಾರು ಸ್ಪರ್ಧೆಗೆ ಪ್ರಯತ್ನವೂ ಮಾಡಿದ್ದೇನೆ. ಈಗ ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ ಎಂದರು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೂ ಆಕಾಂಕ್ಷಿಯಾಗಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.