ಬಾದಾಮಿ: ‘ ಸಮೀಪದ ಚೊಳಚಗುಡ್ಡ ಗ್ರಾಮ ಪಂಚಾಯ್ತಿಯಲ್ಲಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಸೇರಿಕೊಂಡು ಅವ್ಯವಹಾರ ನಡೆಸಿದ್ದಾರೆ ’ ಎಂದು ಗ್ರಾಮದ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಎಸ್. ಪಾಟೀಲ ಹೇಳಿದರು.
ಗ್ರಾಮದ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿಗೆ ಅನೇಕ ಬಾರಿ ಮನವಿ ಸಲ್ಲಿಸಿ ಒತ್ತಾಯಿಸಿದರೂ ಯಾವುದೇ ಸೂಕ್ತ ಕ್ರಮವನ್ನು ಕೈಗೊಂಡಿಲ್ಲ ಎಂದು ಅವರು ಪತ್ರಕರ್ತರಿಗೆ ಸೋಮವಾರ ಪ್ರಕಟಣೆ ಮೂಲಕ ತಿಳಿಸಿದರು.
‘ ಅನೇಕ ವರ್ಷಗಳಿಂದ ಗ್ರಾಮ ಸಭೆ ನಡೆಸಿಲ್ಲ. ಕ್ರಿಯಾಯೋಜನೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ. ಬನಶಂಕರಿದೇವಿ ಜಾತ್ರೆಯ ಹಣಹಾಸಿನ ವ್ಯವಹಾರವನ್ನು ಗ್ರಾಮ ಪಂಚಾಯ್ತಿ ಸರಿಯಾಗಿ ಇಟ್ಟಿಲ್ಲ, ಕಾಮಗಾರಿಗೆ ಬೇಕಾಬಿಟ್ಟಿಯಾಗಿ ವೆಚ್ಚ ಮಾಡಿ ಕಳಪೆ ಕಾಮಗಾರಿ ಮಾಡಿದ್ದಾರೆ ’ ಎಂದು ತಿಳಿಸಿದರು.
ಬನಶಕಂಕರಿದೇವಿ ಜಾತ್ರೆಯಲ್ಲಿ ಕೈಗೊಂಡ ಒಂದೊಂದು ಕಾಮಗಾರಿಗೆ ಎರಡೆರಡು ಪಾವತಿಗಳಿವೆ. ಜಾತ್ರೆಯಲ್ಲಿ ಹಣಕಾಸಿನ ವೆಚ್ಚದ ವ್ಯವಹಾರದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಸೂಕ್ತವಾದ ತನಿಖೆಗೆ ಒತ್ತಾಯಿಸಿದರು.
‘ ಗ್ರಾಮ ಪಂಚಾಯ್ತಿ ಹಣಕಾಸಿನ ವ್ಯವಹಾರವನ್ನು ಅಧಿಕಾರಿಗಳು ಸೂಕ್ತ ತನಿಖೆ ಮಾಡದಿದ್ದರೆ ಗ್ರಾಮ ಪಂಚಾಯ್ತಿ ಎದುರಿಗೆ ಮಾಜಿ ಸೈನಿಕರು ಮತ್ತು ಗ್ರಾಮದ ಸಾರ್ವಜನಿಕರು ಧರಣಿ ಕೈಗೊಳ್ಳುವುದಾಗಿ ನಿರ್ಧರಿಸಲಾಗಿದೆ ’ ಎಂದು ಮಾಜಿ ಸೈನಿಕ ಎ.ಕೆ. ಜವಳಗದ್ದಿ ತಿಳಿಸಿದರು.
ಮಾಜಿ ಸೈನಿಕರ ಕ್ಷೇಮಾಭಿವೃದ್ದಿ ಸಂಘದ ಸದಸ್ಯರಾದ ಸಂಗಪ್ಪ ಹೂಗಾರ, ಜಯರಾಜ ಕೊಣ್ಣೂರ, ಆನಂದ ಜವಳಗದ್ದಿ, ಶರಣಪ್ಪ ಹಡಪದ ಇದ್ದರು.
‘ ಚೊಳಚಗುಡ್ಡ ಗ್ರಾಮ ಪಂಚಾಯ್ತಿ ಹಣಕಾಸಿನ ವ್ಯವಹಾರ ಕುರಿತು ಪರಿಶೀಲನೆಗೆ ತಾಲ್ಲೂಕು ಪಂಚಾಯ್ತಿಯ ಲೆಕ್ಕತಪಾಸಣಾ ಅಧಿಕಾರಿ ಸತೀಶ ತನಿಖೆ ಮಾಡಿಕೊಂಡು ಬಂದಿದ್ದಾರೆ. ಇನ್ನೂ ವರದಿ ಕೊಟ್ಟಿಲ್ಲ ವರದಿ ಕೊಟ್ಟ ನಂತರ ಜಿಲ್ಲಾ ಪಂಚಾಯ್ತಿಗೆ ಕಳಿಸಲಾಗುವುದು ’ ಎಂದು ತಾಲ್ಲೂಕು ಪಂಚಾಯ್ತಿ ಇಒ ಮಲ್ಲಿಕಾರ್ಜುನ ಬಡಿಗೇರ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.