ಬಾಗಲಕೊಟೆ: ಸರ್ವಧರ್ಮಿಯರು ಶಿಕ್ಷಣ ಪಡೆಯಲು, ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಯಾಗಲು ವೀರಶೈವ ಲಿಂಗಾಯತ ಮಠಗಳ ಸಾಮಾಜಿಕ ಕಳಕಳಿ ಕಾರಣವಾಗಿದೆ ಎಂದು ಚರಂತಿಮಠದ ಪ್ರಭು ಸ್ವಾಮೀಜಿ ಹೇಳಿದರು.
ಬಿ.ವಿ.ವಿ. ಸಂಘದ ಸಂಸ್ಥಾಪಕ ಬೀಳೂರು ಗುರುಬಸವ ಸ್ವಾಮೀಜಿಗಳ ಪುಣ್ಯಸ್ಮರಣೆ, ಶ್ರಾವಣ ಮಾಸದ ಉತ್ಸವ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೀಳೂರು ಗುರುಬಸವ ಸ್ವಾಮೀಜಿಗೆ ಬಡತನದ ಅರಿವು ಇತ್ತು. ಸರ್ವಜನರಿಗೂ ಶಿಕ್ಷಣ ಸಿಗಲಿ ಎಂಬ ಮಹಾದಾಸೆಯಿಂದ ಬಸವೇಶ್ವರ ವೀರಶೈವ ವಿಧ್ಯಾವರ್ಧಕ ಸಂಘ ಸ್ಥಾಪಿಸಿದರು. ಅದು ಇಂದು ಶಿಕ್ಷಣ ಧಾರೆ ಎರೆಯುತ್ತಿದೆ. ಜನರು ನೀಡಿದ ದಾನದಿಂದಲೇ ಅನೇಕ ಶಿಕ್ಷಣ ಸಂಸ್ಥೆಗಳು ಜ್ಞಾನ ದಾಸೋಹದಲ್ಲಿ ತೊಡಗಿವೆ ಎಂದರು.
ಬೀಳೂರು ಶ್ರೀಗಳ ಮಹಾಸಂಕಲ್ಪಕ್ಕೆ ಕೈ ಜೋಡಿಸಿದ ನಗರದ ಅನೇಕ ಜನ ವರ್ತಕರು ಶಿಕ್ಷಣ ದಾನಿಗಳ ಸಮಾಜಿಕ ಸೇವೆ ಸ್ಮರಣೀಯವಾಗಿದೆ. ಕಾಲಕಾಲಕ್ಕೆ ಅವರನ್ನು ನೆನಪಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಉಪನ್ಯಾಸ ನೀಡಿದ ಸಾಹಿತಿ ಪ್ರೊ. ಸಿದ್ದರಾಜು ಪೂಜಾರಿ, ಮಹಾಪುರುಷರು ಹಾಗೂ ಜನಸಾಮಾನ್ಯರಿಂದ ದೇಶದ ಮೂಲ ಸತ್ವ ಇಂದಿಗೂ ಜೀವಂತವಾಗಿದೆ. ಬೀಳೂರು ಗುರುಬಸವ ಸ್ವಾಮೀಜಿಗಳು ಲೌಕಿಕ ಮತ್ತು ಅಲೌಕಿಕವನ್ನು ಅಖಂಡವಾಗಿಸಿಕೊಂಡು, ಪಾರಂಪರಿಕ ಸಾತ್ವಿಕ ಸತ್ವ ಸಾರಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಟೇಕಿನಮಠದ ಮಲ್ಲಿಕಾರ್ಜುನ ದೇವರು, ಅಡ್ನೂರಿನ ಕಲ್ಲಿನಾಥ ಶಾಸ್ತ್ರಿಗಳು ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ವಿಸ್ತಾರಗೊಳಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಆಡಳಿತಾಧಿಕಾರಿ ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿ, ಐದು ಜನ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆ ಇಂದು 53 ಸಾವಿರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡುತ್ತಿದೆ. ಮುಂದಿನ ಜನಾಂಗಕ್ಕೆ ಇತಿಹಾಸದ ಪರಿಚಯ ಅಗತ್ಯವಿದ್ದು, ಆ ನೀಟ್ಟಿನಲ್ಲಿ ಬೀಳೂರು ಶ್ರೀಗಳ ಜೀವನ ವೃತ್ತಾಂತ ಗ್ರಂಥ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾಸದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎನ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಬಿ.ಆರ್.ಬೋಳಿಶೆಟ್ಟಿ ಉಪಸ್ಥಿತರಿದ್ದರು.
ಬೆಳಗಿನ ಜಾವ ಗುರುಬಸವ ಸ್ವಾಮೀಜಿ ಮೂರ್ತಿಗೆ ರುದ್ರಾಭಿಷೇಕ, ಶಿವ ಸಹಸ್ರನಾಮ ಸ್ತೋತ್ರಗಳಿಂದ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಮಾಡಲಾಯಿತು .
ಪ್ರಭು ಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ಬೀಳೂರ ಅಜ್ಜನವರ ಪಲ್ಲಕ್ಕಿ ಉತ್ಸವ ಸಂಘದ ಆವರಣದಲ್ಲಿ ಕರಡಿಮಜಲು ವಾದ್ಯದೊಂದಿಗೆ ಆರಂಭವಾದ ಮೆರವಣಿಗೆ ಬನ್ನಿ ಕಟ್ಟೆಯವರೆಗೆ ಹೋಗಿ, ಮರಳಿ ದೇವಸ್ಥಾನಕ್ಕೆ ಬಂದಿತು. ವೀರಭದ್ರೇಶ್ವರ ಸಾಂಸ್ಕೃತಿಕ ಭವನ ಹಾಗೂ ಬಸವೇಶ್ವರ ಮಂಗಲ ಭವನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.