ಬಾಗಲಕೋಟೆ: ’ರಬಕವಿ– ಬನಹಟ್ಟಿ ಸಮೀಪದಹಳಿಂಗಳಿಯ ಭದ್ರಗಿರಿ ಬೆಟ್ಟದಲ್ಲಿ2,300 ವರ್ಷಗಳ ಹಿಂದಿನ ಜಿನಬಿಂಬಗಳು ಭೂಮಿಯಲ್ಲಿ ಹೂತುಹೋಗಿವೆ.ತಮ್ಮ ಆಚಾರ್ಯರ ದಿವ್ಯವಾಣಿಯಂತೆ ಜಿನಬಿಂಬ ಹೊರತೆಗೆಯುವೆ’ ಎಂದು ಜೈನಮುನಿ ಕುಲರತ್ನ ಭೂಷಣ ಮಹಾರಾಜರುಹೇಳಿಕೊಂಡಿದ್ದಾರೆ.
ಈ ಕಾರ್ಯಕ್ಕೆ ಭಾನುವಾರಕ್ಕೆ (ಸೆ.9) ಮುಹೂರ್ತ ನಿಗದಿಪಡಿಸಿದ್ದರು. ಅಂದು ಬೆಳಗಿನ ಜಾವ 5.12ರಬ್ರಾಹ್ಮೀ ಮುಹೂರ್ತದಲ್ಲಿ ಉತ್ಖನನ ಕಾರ್ಯ ಆಯೋಜಿಸಿದ್ದರು.ಈ ವೇಳೆ ಮುನಿಗಳ ಹುಟ್ಟುಹಬ್ಬ ಕೂಡ ನಡೆಯಲಿದ್ದು, ಸಾವಿರಾರು ಮಂದಿ ಭಕ್ತರು ಸೇರಲಿದ್ದಾರೆ ಎಂದು ಹೇಳಲಾಗಿತ್ತು.
ಜಿಲ್ಲಾಡಳಿತದಿಂದ ಬ್ರೇಕ್
ಕುಲರತ್ನ ಭೂಷಣರ ಈ ಉತ್ಖನನ ವೃತ್ತಾಂತಕ್ಕೆ ಸ್ಥಳೀಯವಾಗಿ ವಿರೋಧ ವ್ಯಕ್ತವಾದ ಕಾರಣ ಜಿಲ್ಲಾಡಳಿತ ಮಧ್ಯಪ್ರವೇಶಿಸಿದೆ. ಉತ್ಖನನ ಕಾರ್ಯ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಮಾತ್ರ ಸಂಬಂಧಿಸಿದೆ. ಅದಕ್ಕೆಲ್ಲಾ ಸ್ಪಷ್ಟ ನೀತಿ–ನಿಯಮಗಳಿವೆ. ಹಾಗಾಗಿ ಮುನಿಗಳು ತೋರಿಸಿದ ಜಾಗದಲ್ಲಿ ಎಎಸ್‌ಐನಿಂದಲೇ ಆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಸ್ಪಷ್ಟಪಡಿಸಿದ್ದಾರೆ. ರಬಕವಿ–ಬನಹಟ್ಟಿಯಲ್ಲಿ ಗುರುವಾರ ಶಾಂತಿಸಭೆ ನಡೆಸಿ ಮುನಿಗಳ ಬೆಂಬಲಿಗರಿಗೂ ಅದನ್ನು ಮನದಟ್ಟು ಮಾಡಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಭದ್ರಗಿರಿ ಬೆಟ್ಟವನ್ನು ಶಿಲಾಯುಗದ ಕುರುಹುಗಳ ದೊರೆತ ಪ್ರದೇಶ ಎಂದು ಗುರುತಿಸಿದೆ.
ಕುಲರತ್ನ ಭೂಷಣ ಮಹಾರಾಜರು 2015ರ ಡಿಸೆಂಬರ್ 2ರಂದು ಇದೇ ರೀತಿ ತಮ್ಮ ಆಚಾರ್ಯರ ವಾಣಿ ಪ್ರಸ್ತಾಪಿಸಿದ್ದರು. ನಂತರ ನೆಲ ಅಗೆದು ಅಲ್ಲಿ 16 ಜಿನಬಿಂಬ ಹೊರತೆಗೆದಿದ್ದರು. ಆದರೆ ಅದು ವಾಸ್ತವ ಅಲ್ಲ ಎಂದು ಸ್ಥಳೀಯರೇ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಜಿಲ್ಲಾಡಳಿತ ಜಿನ ಬಿಂಬಗಳನ್ನು ತನ್ನ ವಶಕ್ಕೆ ಪಡೆದು ನಂತರ ವಾಪಸ್ ಕೊಟ್ಟಿತ್ತು. ಮಹಾರಾಜರ ಮನವಿ ಮೇರೆಗೆ ಅದೇ ಸ್ಥಳದಲ್ಲಿ ಆಗಸರ್ಕಾರ ಎರಡು ಎಕರೆ ಜಾಗ ಮಂಜೂರು ಮಾಡಿತ್ತು. ನಂತರ ಅಲ್ಲಿ ಧಾರ್ಮಿಕ ಚಟುವಟಿಕೆ ಕೈಗೊಳ್ಳಲಾಗುತ್ತಿದೆ.
ಒತ್ತುವರಿ ತೆರವು
ಭದ್ರಗಿರಿ ಬೆಟ್ಟದಲ್ಲಿ ಸರ್ಕಾರ ಮಂಜೂರು ಮಾಡಿದ್ದ ಜಾಗದ ಹೊರತಾಗಿಯೂ ಸುತ್ತಲಿನ ಸರ್ಕಾರಿ ಭೂಮಿ ಅತಿಕ್ರಮಿಸಲಾಗಿದೆ ಎಂದುಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಸ್ಥಳ ಪರಿಶೀಲಿಸಿದ್ದ ಅಂದಿನ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಒತ್ತುವರಿ ಜಾಗ ಹಾಗೂ ಅಲ್ಲಿನ ಅಕ್ರಮ ನಿರ್ಮಾಣ ತೆರವುಗೊಳಿಸಿದ್ದರು. ಅದನ್ನು ವಿರೋಧಿಸಿ ಕುಲರತ್ನ ಭೂಷಣ ಮಹಾರಾಜರ ಬೆಂಬಲಿಗರು ಮೂರು ದಿನ ಕಾಲ ಜಮಖಂಡಿ–ಮಿರಜ್ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.
ಈ ಬಾರಿಯೂ ಮುನಿಗಳಿಂದ ಉತ್ಖನನ ಕಾರ್ಯಕ್ರಮ ವಿರೋಧಿಸಿ ಜಮಖಂಡಿ ಉಪವಿಭಾಗಾಧಿಕಾರಿಗೆ 15 ದೂರುಗಳು ಬಂದಿವೆ.
ಉತ್ಖನನಕ್ಕೆ ಅವಕಾಶವಿಲ್ಲ: ಜಿಲ್ಲಾಧಿಕಾರಿ
‘ಭದ್ರಗಿರಿ ಬೆಟ್ಟದಲ್ಲಿ ಮುನಿಗಳ ಹುಟ್ಟುಹಬ್ಬ ಆಚರಣೆ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ನೀಡಿದ್ದೇವೆ. ಭಾರತೀಯ ಪುರಾತತ್ವ ಇಲಾಖೆ ಅನುಮೋದನೆ ಇಲ್ಲದೇ ಅಲ್ಲಿ ಯಾವುದೇ ಉತ್ಖನನಕ್ಕೆ ಅವಕಾಶವಿಲ್ಲ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹೇಳುತ್ತಾರೆ.
‘ಉತ್ಖನನ ಕಾರ್ಯ ಭಾರತೀಯ ಪುರಾತತ್ವ ಇಲಾಖೆ ಮಾತ್ರ ಮಾಡಬಹುದಾಗಿದೆ. ಅದಕ್ಕೆ ಯಂತ್ರ, ಹಾರೆ, ಗುದ್ದಲಿ ಬಳಕೆ ಮಾಡುವಂತಿಲ್ಲ’ ಎಂದು ವಿವರಿಸಿದರು.
ತನಿಖೆಗೆ ಅರ್ಶಮಾರ್ಗ ಸಂಘ ಒತ್ತಾಯ
ಬಾಗಲಕೋಟೆ: ಹಳಿಂಗಳಿಯ ಭದ್ರಗಿರಿ ಬೆಟ್ಟದಲ್ಲಿ ಮಣ್ಣಿನಡಿ ಜಿನಬಿಂಬ ಉತ್ಖನನ ವೃತ್ತಾಂತವನ್ನು ಸಮಗ್ರ ತನಿಖೆಗೆ ಒಳಪಡಿಸುವಂತೆ ಜೈನ ಧರ್ಮದ ಅತ್ಯುನ್ನತ ಸಂಸ್ಥೆ ಅರ್ಶಮಾರ್ಗ ಸೇವಾಸಂಘ ಒತ್ತಾಯಿಸಿದೆ.
ಈ ಬಗ್ಗೆ ಮಾಧ್ಯಮಗಳ ವರದಿ ಆಧರಿಸಿಭಾರತೀಯ ಪುರಾತತ್ವ ಇಲಾಖೆ ದಕ್ಷಿಣ ವೃತ್ತದ ಪ್ರಾದೇಶಿಕ ನಿರ್ದೇಶಕರಿಗೆ ಪತ್ರ ಬರೆದಿರುವ ಅರ್ಶಮಾರ್ಗ ಸೇವಾ ಸಂಘದ ಅಧ್ಯಕ್ಷ ಅಜಿತ್ ಜಿ ಪಾಟೀಲ, ಈ ಪ್ರಹಸನದ ಹಿಂದೆ ವಿಗ್ರಹ ಕಳ್ಳಸಾಗಣೆದಾರರ ಪಾತ್ರವೂ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಆಚಾರ್ಯರ ಮೇಲೆ ಈ ಹಿಂದೆ ಭೂಮಿ ಒತ್ತುವರಿ ಮಾಡಿದ್ದ ಆರೋಪವೂ ಸಹ ಕೇಳಿಬಂದಿದೆ. ಜೊತೆಗೆ ಜೈನ ದಿಗಂಬರ ಮೂರ್ತಿಗಳನ್ನು ಅಕ್ರಮವಾಗಿ ಭೂಮಿಯಲ್ಲಿ ಹೂತಿಟ್ಟಿರಬಹುದು ಎಂಬ ಸಂಶಯವಿದೆ. ಹಾಗಾಗಿ ಉತ್ಖನನ ಕಾರ್ಯ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿಯೇ ನಡೆಯಬೇಕು. ಒಂದು ವೇಳೆ ಮೂರ್ತಿಗಳು ಸಿಕ್ಕರೆ ಅವುಗಳನ್ನು ಸಂರಕ್ಷಿಸಿಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.ಸೆಪ್ಟೆಂಬರ್‌೪ ರಂದು ಪತ್ರ ಬರೆದಿದ್ದು, ಅದರ ಪ್ರತಿಯನ್ನು ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗೂ ಕಳಿಸಿದ್ದಾರೆ. ಪ್ರಜಾವಾಣಿಗೆ ಪತ್ರದ ಪ್ರತಿ ಲಭ್ಯವಾಗಿದೆ. ಉತ್ಖನನ ವಿಚಾರದಲ್ಲಿ ಜಿಲ್ಲಾಡಳಿತದ ನಿಲುವಿಗೆ ಈ ಪತ್ರ ಬಲ ತಂದಿದೆ.
* ಉತ್ಖನನ ಹಾಗೂ ಧಾರ್ಮಿಕ ಸಮಾರಂಭದ ವಿಚಾರದಲ್ಲಿ ಊರಿನ ಪ್ರಮುಖರು, ಸಮಾಜದವರೊಂದಿಗೆ ಸಭೆ ನಡೆಸಿ ಮಹಾರಾಜರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
–ಅಮಿತ್ ಕರಿಯಪ್ಪನವರ, ಕುಲರತ್ನ ಭೂಷಣ ಮಹಾರಾಜರ ಆಪ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.