ರಾಂಪುರ: ಪಟ್ಟಣ ಪಂಚಾಯಿತಿಯಿಂದ ವಿವಿಧ ಯೋಜನೆಗಳಡಿ ನಿಗದಿಪಡಿಸಿರುವ ಕಾಮಗಾರಿಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಶಿರೂರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.
ಸಮೀಪದ ಶಿರೂರ ಪಟ್ಟಣದಲ್ಲಿ ಸೋಮವಾರ ಪಟ್ಟಣ ಪಂಚಾಯಿತಿಯಿಂದ 2024-25 ನೇ ಸಾಲಿನ ಎಸ್.ಎಫ್.ಸಿ, 15ನೇ ಹಣಕಾಸು, ಕುಡಿಯುವ ನೀರಿನ ಯೋಜನೆಯ ಅನುದಾನ, ಸ್ಥಳೀಯ ನಿಧಿ ಹಾಗೂ ಸ್ವಚ್ಛಭಾರತ ಮಿಶನ್ -20 ರ ಅಡಿಯ ಮತ್ತು ಉಪಘಟಕಗಳ ಅನುದಾನದಲ್ಲಿ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
₹ 2.75 ಲಕ್ಷ ಅನುದಾನದಲ್ಲಿ ಪರಿಶಿಷ್ಟ ಜಾತಿ, ಜನಾಂಗ, ಇತರೆ ಹಾಗೂ ಅಂಗವಿಕಲರಿಗೆ ಬಾಂಡೆ ಸಾಮಾನು, ಹೊಲಿಗೆ ಯಂತ್ರ, ಶ್ರವಣ ಸಾಧನಕ್ಕೆ ವೆಚ್ಚ ಮಾಡಲಾಗುತ್ತಿದೆ ಎಂದು ಶಾಸಕ ಎಚ್.ವೈ.ಮೇಟಿ ತಿಳಿಸಿ, ಕಾಮಗಾರಿಗಳಲ್ಲಿ ಕಳಪೆ ಕೆಲಸ ಆಗದಂತೆ ನೋಡಿಕೊಳ್ಳಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಪ್ರಯೋಜನ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರಿಗೆಪ್ಪ ಕಡ್ಲಿಮಟ್ಟಿ, ನಾಮನಿರ್ದೇಶಿತ ಸದಸ್ಯರಾದ ಜಗದೀಶ ದೇಸಾಯಿ, ಹನಮಂತ ಆಡಿನ, ಸಿದ್ದಪ್ಪ ಗಾಳಿ, ಮುಖಂಡರಾದ ರಂಗಪ್ಪ ಮಳ್ಳಿ, ಅರ್ಜುನ ಅಂಗಡಿ, ರಾಮನಗೌಡ ಮಾಚಾ, ಬಂದಗೀಸಾಬ ಜನ್ನತಖಾನ್, ಬಸವರಾಜ ಕೊಣ್ಣೂರ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶಿವಾನಂದ ಆಲೂರ, ವ್ಯವಸ್ಥಾಪಕ ಯು.ಜಿ.ವರದಪ್ಪನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.