ಬಾಗಲಕೋಟೆ: 'ಸಾಲ ತಂದಾದರೂ ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೀಡಾದವರ ನೆರವಿಗೆ ನಿಲ್ಲುವೆ. ಬೆಳೆಹಾನಿ, ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕೊಡುವೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ವಿಜಯಪುರ ಜಿಲ್ಲೆ ಆಲಮಟ್ಟಿಯಲ್ಲಿ ಮಂಗಳವಾರ ಕೃಷ್ಣೆಗೆ ಬಾಗಿನ ಅರ್ಪಿಸಿದ ಅವರು, ನಂತರ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಗದಗ ಜಿಲ್ಲೆಗಳಲ್ಲಿನ ಪ್ರವಾಹ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಸೆಪ್ಟೆಂಬರ್ 12ರ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಕೇಂದ್ರದಿಂದ ಹೆಚ್ಚಿನ ನೆರವು ಕೋರಲಿದ್ದೇನೆ. ಜೊತೆಗೆ ಆಲಮಟ್ಟಿ ಜಲಾಶಯದ ಈಗಿನ ಎತ್ತರ 519 ಮೀಟರ್ ನಿಂದ 524.25 ಮೀಟರ್‌ಗೆ ಹೆಚ್ಚಿಸಲು, ಕೃಷ್ಣಾ ಮೇಲ್ದಂಡೆ ಯೋಜನೆಯ ಉಳಿದ ಕಾಮಗಾರಿಗಳ ಪೂರ್ಣಗೊಳಿಸಲು ನೆರವು ಕೋರಲಾಗುವುದು ಎಂದರು. ಇಲ್ಲದಿದ್ದರೆ ಸಾಲ ಮಾಡಿದರೂ ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಅನ್ವಯ ರಾಜ್ಯದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಕೋವಿಡ್ ಕಾರಣದಿಂದ ರಾಜ್ಯ ಹಾಗೂ ಕೇಂದ್ರದ ಹಣಕಾಸಿನ ಸ್ಥಿತಿ ಸರಿ ಇಲ್ಲ. ಅಂತಹ ಪರಿಸ್ಥಿತಿಯಲ್ಲೂ ಕೇಂದ್ರದಿಂದ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತಿದ್ದೇನೆ. ಜಿಎಸ್‌ಟಿ ರಾಜ್ಯದ ಪಾಲಿನ ₹13 ಸಾವಿರ ಕೋಟಿ ಪಡೆಯಲು ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಅವರೊಂದಿಗೆ ಚರ್ಚಿಸಿದ್ದೇನೆ. ಆಗಸ್ಟ್ 27ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಕೋವಿಡ್ ಚಿಕಿತ್ಸೆಗೆ ಔಷಧಿ ಖರೀದಿ ವಿಚಾರದಲ್ಲಿ ವಿರೋಧ ಪಕ್ಷದವರ ಆಗ್ರಹದಂತೆ ಶ್ವೇತಪತ್ರ ಹೊರಡಿಸುವ ಅಗತ್ಯವಿಲ್ಲ. ಮುಂಬರುವ ಅಧಿವೇಶನದಲ್ಲಿ ಅವರ ಎಲ್ಲ ಆರೋಪಗಳಿಗೂ ಸಮರ್ಥ ಉತ್ತರ ನೀಡಲಾಗುವುದು ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.