ADVERTISEMENT

ಬಾಗಲಕೋಟೆ | ಅರಿಸಿನಕ್ಕೆ ಬಂಪರ್‌ ಬೆಲೆ: ರೈತರ ಮೊಗದಲ್ಲಿ ನಗು

ಪ್ರತಿ ಕ್ವಿಂಟಲ್ ಅರಿಸಿನಕ್ಕೆ ₹13 ರಿಂದ 25 ಸಾವಿರ

ಬಸವರಾಜ ಹವಾಲ್ದಾರ
Published 3 ಮಾರ್ಚ್ 2024, 23:33 IST
Last Updated 3 ಮಾರ್ಚ್ 2024, 23:33 IST
ಅರಿಸಿನ ಸ್ವಚ್ಛಗೊಳಿಸುತ್ತಿರುವ ಮಹಿಳೆಯರು
ಅರಿಸಿನ ಸ್ವಚ್ಛಗೊಳಿಸುತ್ತಿರುವ ಮಹಿಳೆಯರು   

ಬಾಗಲಕೋಟೆ: ಬರದ ನಡುವೆಯೂ ನೀರಾವರಿ ಆಶ್ರಿತ ಪ್ರದೇಶದಲ್ಲಿ ಅರಿಸಿನ ಬೆಳೆದಿರುವ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.  

ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ ₹6 ಸಾವಿರದಿಂದ ₹8 ಸಾವಿರಕ್ಕೆ ಮಾರಾಟವಾಗಿತ್ತು. ಈ ವರ್ಷ ₹13 ಸಾವಿರದಿಂದ ₹25 ಸಾವಿರದವರೆಗೂ ಮಾರಾಟವಾಗುತ್ತಿದೆ. 

ಜಿಲ್ಲೆಯ ರಬಕವಿ–ಬನಹಟ್ಟಿ, ಹೊಸೂರು, ಮಹಾಲಿಂಗಪುರ, ಮುಧೋಳ, ಶಿರೋಳ, ಸಸಾಲಟ್ಟಿ, ತೇರದಾಳ ಸುತ್ತಮುತ್ತಲಿನ ಪ್ರದೇಶದಲ್ಲಿ ಅರಿಸಿನ ಬೆಳೆಯಲಾಗುತ್ತದೆ. ಪ್ರತಿ ಎಕರೆಗೆ 30ರಿಂದ 35 ಕ್ವಿಂಟಲ್‌ ಇಳುವರಿ ಬರುತ್ತದೆ. ಮಳೆ ಕಡಿಮೆಯಾಗಿದ್ದರಿಂದ ಈ ಬಾರಿ ಸರಾಸರಿ ಇಳುವರಿ 25 ಕ್ವಿಂಟಲ್‌ ಆಸುಪಾಸಿನಲ್ಲಿದೆ.

ADVERTISEMENT

ಮೊದಲ ಬಾರಿ ಅರಿಸಿನ ನಾಟಿ ಮಾಡಿದರೆ ಎಕರೆಗೆ ₹1 ಲಕ್ಷ ಖರ್ಚಾಗುತ್ತದೆ. ಎರಡನೇ ವರ್ಷದಿಂದ ಎಕರೆಗೆ ₹60 ಸಾವಿರದಿಂದ  ₹70 ಸಾವಿರ ವೆಚ್ಚ ತಗಲುತ್ತದೆ. ಈ ಬಾರಿ ಉತ್ತಮ ಬೆಲೆ ದೊರೆತಿರುವುದರಿಂದ ಖರ್ಚು ಕಳೆದು ರೈತರಿಗೆ ಪ್ರತಿ ಎಕರೆಗೆ ₹1.5 ಲಕ್ಷದಿಂದ ₹2 ಲಕ್ಷ ಲಾಭ ಸಿಕ್ಕಿದೆ.

ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಅರಿಸಿನದ ಪೈಕಿ ಶೇ 10ರಷ್ಟು ಹಸಿ ಅರಿಸಿನವು ರಾಜಸ್ತಾನದಲ್ಲಿ ಬಳಸುವ ಉಪ್ಪಿನಕಾಯಿಗೆ ಹೋಗುತ್ತದೆ. ಒಂದಷ್ಟು ಸ್ಥಳೀಯವಾಗಿ ಮಾರಾಟವಾಗುತ್ತದೆ. ಉಳಿದದ್ದು ಮಹಾರಾಷ್ಟ್ರದ ಸಾಂಗ್ಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತದೆ. 

ಔಷಧಗಳಲ್ಲಿಯೂ ಬಳಕೆ:

‘ಸೇಲಂ’ ಹಾಗೂ ‘ಬೇಸಿಕ್‌ ಕಡಪಾ’ ತಳಿಯ ಅರಿಸಿನವನ್ನು ಇಲ್ಲಿ ಬೆಳೆಯಲಾಗುತ್ತದೆ. ನೆಗಡಿ, ಕೆಮ್ಮು ಸೇರಿದಂತೆ ಆರೋಗ್ಯ ರಕ್ಷಣೆಯ ವಿವಿಧ ಔಷಧಗಳಲ್ಲಿ ಇದನ್ನು ಬಳಸಲಾಗುತ್ತದೆ. ಸೌಂದರ್ಯವರ್ಧಕ ಉತ್ಪಾದನೆಗಳಲ್ಲಿಯೂ ಬಳಕೆ ಮಾಡುವುದರಿಂದ ಬೇಡಿಕೆ ಹೆಚ್ಚಿದೆ.

‘ಕಳೆದ ವರ್ಷ ಬೆಲೆ ಸಿಗದ್ದರಿಂದ ಕೆಲವು ರೈತರು ಅರಿಸಿನ ಬೆಳೆಯಿಂದ ದೂರ ಸರಿದಿದ್ದರು. ಜತೆಗೆ ಮಳೆ ಕೊರತೆಯಿಂದ ಈ ಬಾರಿ ಇಳುವರಿಯೂ ಕಡಿಮೆಯಾಗಿದೆ. ಹಾಗಾಗಿ, ಒಳ್ಳೆಯ ಬೆಲೆ ದೊರೆತಿದೆ’ ಎನ್ನುತ್ತಾರೆ ಜಗದಾಳದ ರೈತ ದೇವರಾಜ ರಾಟಿ.

ಕಳೆದ ವರ್ಷದಿಂದ ಅಮೆರಿಕ, ಕೊರಿಯಾ, ಯುರೋಪ್‌ ರಾಷ್ಟ್ರಗಳಿಗೆ ಹುನಗುಂದ ತಾಲ್ಲೂಕಿನ ಸೂಳೇಭಾವಿಯಲ್ಲಿರುವ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆಯ ಮೂಲಕ ರಫ್ತು ಮಾಡಲಾಗುತ್ತಿದೆ.

ಕಳೆದ ವರ್ಷ ನಷ್ಟ ಉಂಟು ಮಾಡಿದ್ದ ಅರಿಸಿನಕ್ಕೆ ಈ ವರ್ಷ ಉತ್ತಮ ಬೆಲೆ ಬಂದಿದೆ. ಕಡಿಮೆ ಫಸಲಿನ ನಡುವೆಯೂ ಲಾಭ ಆಗುತ್ತಿದೆ
ದೇವರಾಜ ರಾಠಿ ರೈತ ಜಗದಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.